ಹುಳು ಹಿಡಿದ ಆಹಾರ ಧಾನ್ಯ, ದುರಸ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು, ಗಬ್ಬೆದ್ದು ನಾರುತ್ತಿರುವ ವಸತಿ ನಿಲಯಗಳು
ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿ, ಶಾಲೆ, ಆಸ್ಪತ್ರೆಗಳು, ಉಗ್ರಾಣಗಳು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಲ್ಲಿನ ಬೇಜವಾಬ್ದಾರಿತನ, ಭ್ರಷ್ಟ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆಯ ವಿರುದ್ಧ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕರ್ತವ್ಯಲೋಪವೆಸಗಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.
13 ವಸತಿ ನಿಲಯಗಳಿಗೆ ಭೇಟಿ:ಲೋಕಾಯುಕ್ತರ ತಂಡವು ಜಿಲ್ಲೆಯ 13 ವಿದ್ಯಾರ್ಥಿ ವಸತಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿತು. ಈ ವೇಳೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ನೈಜ ಹಾಜರಾತಿಯಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ. ವಸತಿ ನಿಲಯಗಳಲ್ಲಿ ಕನಿಷ್ಠ ನೈರ್ಮಲ್ಯ ಇಲ್ಲದಿರುವುದು, ಶೌಚಾಲಯಗಳ ವ್ಯವಸ್ಥಿತ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿರುವುದನ್ನು ಕಂಡು ಗರಂ ಆದ ನ್ಯಾಯಮೂರ್ತಿಗಳು, ಈ ಕುರಿತು ಸಮಗ್ರ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.
ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸರಿ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೆಲವೇ ಕೆಲವು ಆಸ್ಪತ್ರೆಗಳು ಉತ್ತಮ ನಿರ್ವಹಣೆಯಲ್ಲಿವೆ. ಬಡ ಜನಸಾಮಾನ್ಯರಿಗೆ ಉಚಿತ ಹಾಗೂ ಉತ್ತಮ ಆರೋಗ್ಯ ಸೇವೆ ನೀಡಬೇಕಾದ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಶೋಚನೀಯವಾಗಿರುವುದು ಕಳವಳಕಾರಿ ಸಂಗತಿ ಎಂದರು. ಗದಗ ಜಿಲ್ಲೆಯಲ್ಲಿರುವ ಒಟ್ಟು 378 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 119 ಘಟಕಗಳು ದುರಸ್ತಿಯಲ್ಲಿರುದು ಗಮನಕ್ಕೆ ಬರುತ್ತಿದ್ದಂತೆ, ಇವುಗಳ ಪುನರಾರಂಭಕ್ಕೆ ಕೈಗೊಂಡ ಕ್ರಮಗಳ ವಿವರ ನೀಡಲು ತಾಕೀತು ಮಾಡಿದರು.
ಗಜೇಂದ್ರಗಡದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳೇ ಇಲ್ಲದಿರುವ ವರದಿಯನ್ನು ಕಂಡು ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ತಕ್ಷಣವೇ ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಸೂಚಿಸಿ, ಮಕ್ಕಳ ಹಕ್ಕುಗಳನ್ನು ಕಡೆಗಣಿಸಿದ ಹಿಂದಿನ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲು ಆದೇಶಿಸಿದರು. ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿವ ನೀರು, ಗಾಳಿ ಬೆಳಕು ಸೇರಿ ಮೂಲ ಸೌಲಭ್ಯ ಒದಗಿಸುವುದರ ಜತೆಗೆ ಆಪರೇಷನ್ ಶೌಚಾಲಯ ಅಭಿಯಾನದಡಿ ಕಡ್ಡಾಯವಾಗಿ ನೈರ್ಮಲ್ಯ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.
ರೋಣ ತಾಲೂಕಿನ ಎರಡು ಸಾರ್ವಜನಿಕ ಆಹಾರ ಧಾನ್ಯ ಉಗ್ರಾಣಗಳಿಗೆ ಭೇಟಿ ನೀಡಿದ ವೇಳೆ ಸಾರ್ವಜನಿಕರಿಗೆ ವಿತರಿಸಬೇಕಾದ ಅಕ್ಕಿ, ಜೋಳ ಹಾಗೂ ಗೋಧಿ ದಾಸ್ತಾನು ಹುಳು ಹಿಡಿದು, ನಾರುತ್ತಾ ಮನುಷ್ಯರ ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ಬಡವರ ಅನ್ನವನ್ನು ಹಾಳುಗೆಡವಿದ ಈ ಮಹಾಪರಾಧಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಪ್ರಕರಣ (ಕ್ರಿಮಿನಲ್ ಕೇಸ್) ದಾಖಲಿಸಲಾಗುವುದು ಎಂದು ಗುಡುಗಿದರು.ನಗರಸಭೆ ವೈಫಲ್ಯ, ಲೋಕಾ ಸ್ವಯಂ ಪ್ರೇರಿತ ದೂರು: