ಬಸ್‌ ಪ್ರಯಾಣ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕುಷ್ಟಗಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಬಡವರಿಗೆ ಹೊರೆಯಾಗಿದೆ ಎಂದು ಹೇಳಿದ್ದಾರೆ.

ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ: ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಸೌಲಭ್ಯ ನೀಡುವ ನೆಪದಲ್ಲಿ ಸರ್ಕಾರ ಸಾರ್ವಜನಿಕರ ಮೇಲೆ ಪ್ರಯಾಣ ದರ ಏರಿಕೆಯ ಹೊರೆ ಹಾಕುತ್ತಿದೆ. ಈ ಹಿಂದೆಂದೂ ಇಷ್ಟೊಂದು ಪ್ರಮಾಣದಲ್ಲಿ ಬಸ್‌ ಪ್ರಯಾಣ ದರ ಹೆಚ್ಚಳವಾಗಿರಲಿಲ್ಲ. ಈಗಾಗಲೇ ಹಾಲಿನ ದರ ಏರಿಕೆಯಿಂದ ತತ್ತರಿಸಿರುವ ಜನರಿಗೆ ಇದೀಗ ಬಸ್‌ ಪ್ರಯಾಣ ದರ ಹೆಚ್ಚಳ ಮತ್ತಷ್ಟು ಆರ್ಥಿಕ ಸಂಕಷ್ಟ ತಂದಿದೆ ಎಂಬ ಆಕ್ರೋಶ ಕುಷ್ಟಗಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಂದ ವ್ಯಕ್ತವಾಗಿದೆ.

ಪಟ್ಟಣದ ಕೆಕೆಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ''''ಕನ್ನಡಪ್ರಭ'''' ಪ್ರತಿನಿಧಿ ಭೇಟಿ ನೀಡಿ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸಿದ ಸಂದರ್ಭದಲ್ಲಿ ಸರ್ಕಾರದ ದರ ಏರಿಕೆ ನೀತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ ನೀಡಿರುವ ಸರ್ಕಾರ, ಮತ್ತೊಂದೆಡೆ ಬಸ್‌ ಪ್ರಯಾಣ ದರವನ್ನು ಶೇ. 23ರಷ್ಟು ಹೆಚ್ಚಿಸಿರುವುದು ಯಾವ ನ್ಯಾಯ? ಒಂದು ಕೈಯಲ್ಲಿ ಉಚಿತ ಸೌಲಭ್ಯ ನೀಡಿ ಮತ್ತೊಂದು ಕೈಯಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಭಾಗ್ಯಗಳ ಹೆಸರಿನಲ್ಲಿ ಜನರಿಗೆ ಅನುಕೂಲ ಮಾಡಿಕೊಡುವುದಕ್ಕಿಂತ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸವಾಗುತ್ತಿದೆ ಎಂದು ಪ್ರಯಾಣಿಕರು ಕಿಡಿಕಾರಿದರು.

ಪ್ರತಿನಿತ್ಯ ಉದ್ಯೋಗ, ಕೂಲಿ ಕೆಲಸ, ವ್ಯಾಪಾರ, ಶಿಕ್ಷಣ ಹಾಗೂ ಇನ್ನಿತರ ಕಾರ್ಯಗಳಿಗಾಗಿ ಬಸ್‌ ಅವಲಂಬಿಸಿರುವ ಜನರಿಗೆ ದರ ಏರಿಕೆ ಹೊರೆಯಾಗಿದೆ. ಅದರಲ್ಲೂ ಬಡವರು, ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಕುಟುಂಬಗಳ ಪ್ರಯಾಣ ವೆಚ್ಚ ಹೆಚ್ಚಾಗಿದೆ. ಹಾಲಿನ ದರ ಹೆಚ್ಚಿಸಿದ ಬೆನ್ನಲ್ಲೇ ಬಸ್‌ ಪ್ರಯಾಣ ದರವನ್ನೂ ಹೆಚ್ಚಿಸಿರುವುದು ಖಂಡನೀಯ. ಸರ್ಕಾರ ಕೂಡಲೇ ಹೆಚ್ಚಿಸಿರುವ ದರವನ್ನು ಕಡಿಮೆ ಮಾಡಬೇಕು. ನಮಗೆ ಭಾಗ್ಯಗಳಿಗಿಂತ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗುವುದು ಮುಖ್ಯ ಎಂದು ಪ್ರಯಾಣಿಕರು ಒತ್ತಾಯಿಸಿದರು.

ನಿರ್ವಾಹಕರಿಗೂ ಚಿಲ್ಲರೆ ಸಮಸ್ಯೆ: ಬಸ್‌ ಪ್ರಯಾಣ ದರ ಹೆಚ್ಚಳದಿಂದ ಪ್ರಯಾಣಿಕರಷ್ಟೇ ಅಲ್ಲದೆ ನಿರ್ವಾಹಕರಿಗೂ ತೊಂದರೆ ಎದುರಾಗಿದೆ. ಟಿಕೆಟ್‌ ದರ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ಹಣ ಪಡೆಯುವಾಗ ಚಿಲ್ಲರೆ ಹೊಂದಿಸುವುದು ಕಷ್ಟವಾಗುತ್ತಿದೆ. ಉಳಿದ ಹಣ ಹಿಂದಿರುಗಿಸುವ ವಿಚಾರದಲ್ಲಿ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ಆಗಾಗ ಮಾತಿನ ಚಕಮಕಿ, ಕಿರಿಕಿರಿ ಉಂಟಾಗುತ್ತಿದೆ.

ಉಚಿತ ಪ್ರಯಾಣದ ಸೌಲಭ್ಯದ ಜತೆಗೆ ಸಾಮಾನ್ಯ ಪ್ರಯಾಣಿಕರ ಆರ್ಥಿಕ ಹೊರೆಯನ್ನೂ ಸರ್ಕಾರ ಗಮನಿಸಬೇಕು. ಭಾಗ್ಯಗಳಿಗಿಂತ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಅಗತ್ಯ ವಸ್ತುಗಳ ಬೆಲೆ ಇಳಿಸುವ ಮೂಲಕ ನೆರವಾಗಬೇಕು. ಹೆಚ್ಚಿಸಿರುವ ಬಸ್‌ ಪ್ರಯಾಣ ದರವನ್ನು ಕೂಡಲೇ ಕಡಿಮೆ ಮಾಡಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.

ದರ ಕಡಿಮೆ ಮಾಡಬೇಕು:‌ ಸರ್ಕಾರ ಭಾಗ್ಯಗಳನ್ನು ಕೊಡುವ ನೆಪದಲ್ಲಿ ಸಾರ್ವಜನಿಕರ ಜೀಬಿಗೆ ಕತ್ತರಿ ಹಾಕುತ್ತಿದ್ದು, ಈಗಾಗಲೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬರಗಾಲದ ಸಂದರ್ಭದಲ್ಲಿ ಬಸ್‌ ಪ್ರಯಾಣ ದರ ದುಬಾರಿ ಮಾಡಿರುವುದು ಖಂಡನೀಯ. ಐವತ್ತು ವರ್ಷದಲ್ಲಿ ಇಂತಹ ಸರ್ಕಾರ ನಾನು ಎಂದು ಕಂಡಿದ್ದಿಲ್ಲ. ಭಾಗ್ಯಗಳ ಬದಲಿಗೆ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕು ಎಂದು ಪ್ರಯಾಣಿಕ ಹೋಬಳೆಪ್ಪಗೌಡ ಪಾಟೀಲ್‌ ಹೇಳಿದರು. ಹೊರೆಯಾಗಿದೆ:‌ ಇಷ್ಟೊಂದು ಬಸ್‌ ಪ್ರಯಾಣ ದರ ಹೆಚ್ಚಾಗಿರುವುದರಿಂದ ಬಡವರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು, ಸರ್ಕಾರ ಬಡಜನರ ಆರ್ಥಿಕ ಸ್ಥೀತಿ ನೋಡಿಕೊಂಡು ದರ ಹೆಚ್ಚಳ ಮಾಡಬೇಕು. ಇದು ಬಹಳಷ್ಟು ಹೊರೆಯಾಗಿದೆ ಎಂದು ಪ್ರಯಾಣಿಕ ದುರಗಪ್ಪ ಕುಷ್ಟಗಿ ಹೇಳಿದರು.

ಸರ್ಕಾರದ ನಿಯಮದಂತೆ ಬಸ್‌ ಪ್ರಯಾಣ ದರದಲ್ಲಿ ತಾಲೂಕಿನಲ್ಲಿ ಶೇ. 23ರಷ್ಟು ಹೆಚ್ಚಳವಾಗಿದೆ ಎಂದು ಕುಷ್ಟಗಿ ಬಸ್‌ ಡಿಪೋ ವ್ಯವಸ್ಥಾಪಕ ಶಿವಶಂಕರಗೌಡ ಪಾಟೀಲ ಹೇಳಿದರು.