ಇಡೀ ಜಿಲ್ಲೆಯ ಅಳಿವು ಉಳಿವಿಗಾಗಿ ಎಲ್ಲರೂ ಕೈಜೋಡಿಸುವುದು ಅಗತ್ಯ

ಯಲ್ಲಾಪುರ: ಸಂಕಲ್ಪ ಸೇವಾ ಸಂಸ್ಥೆ ನಮ್ಮ ಸನಾತನ ಸಂಸ್ಕೃತಿ, ಪರಂಪರೆ, ಮೌಲ್ಯವನ್ನು ಸಾರ್ವಜನಿಕರ ಸಹಕಾರದಲ್ಲಿ ಮಾಡುತ್ತಿರುವುದು ಅತ್ಯಂತ ಮಹತ್ವದ್ದಾಗಿದೆ. ಇಂತಹ ಕಾರ್ಯವನ್ನು ಸರ್ಕಾರ ಮಾಡಬೇಕಿತ್ತು. ಮಾಡದೇ ಇರುವುದು ದುರದೃಷ್ಟಕರ ಎಂದು ಕೇರಳದ ಎಡನೀರು ಮಠದ ಶ್ರೀಮದ್ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ನುಡಿದರು.

ಅವರು, ಬುಧವಾರ ೪೦ ನೇ ವರ್ಷದ ನಾಲ್ಕನೇ ದಿನದ ಸಂಕಲ್ಪ ಉತ್ಸವಕ್ಕೆ ಚಾಲನೆ ನೀಡಿ, ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಜಿಲ್ಲೆಯಲ್ಲಿ ನದಿ ತಿರುವು ಯೋಜನೆಯ ಹೋರಾಟ ನಡೆಯುತ್ತಿದೆ. ಇದಕ್ಕೆ ಇಡೀ ಜಿಲ್ಲೆಯ ಅಳಿವು ಉಳಿವಿಗಾಗಿ ಎಲ್ಲರೂ ಕೈಜೋಡಿಸುವುದು ಅಗತ್ಯವಾಗಿದೆ. ಸರ್ಕಾರ ಜನಪರವಾಗಿ ಕಾರ್ಯ ಮಾಡಬೇಕೇ ವಿನಃ ಜನ ವಿರೋಧಿಯಾದ ಯಾವುದೇ ಕಾರ್ಯ ಸರ್ಕಾರ ಮಾಡುವುದು ಸರಿಯಲ್ಲ ಎಂದ ಶ್ರೀಗಳು, ವಂದೇ ಮಾತರಂ ಗೀತೆ ರಾಷ್ಟ್ರೀಯ ಮನೋಭಾವ ಮೂಡಿಸುತ್ತದೆ. ಅದು ದೇಶದ ಅಸ್ಮಿತೆಯ ಪ್ರತೀಕ. ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಆ ಗೀತೆಗಿದೆ. ಕರ್ನಾಟಕದಲ್ಲಿ ಕನ್ನಡ ಉಳಿಸುವ ಕಾರ್ಯ ಸವಾಲಾಗಿದೆ. ಆ ಕುರಿತು ಹೆಚ್ಚಿನ ಗಮನ ಹರಿಸಬೇಕಾಗಿದೆ. ಆ ನೆಲೆಯಲ್ಲಿ ನಮ್ಮ ಪರಂಪರೆ, ಮೌಲ್ಯ, ಕಲೆ, ಸಂಸ್ಕೃತಿಯನ್ನು ಸಂಕಲ್ಪದ ಮೂಲಕ ಪ್ರಮೋದ ಹೆಗಡೆ ಬಳಗ ಕಳೆದ ೪ ದಶಕದಿಂದ ಉಳಿಸುವಲ್ಲಿ ಪ್ರಯತ್ನ ನಡೆಸಿದೆ.

ನಮ್ಮ ಹಿಂದಿನ ಪೂಜ್ಯ ಶ್ರೀಮದ್ ಕೇಶವಾನಂದ ಭಾರತೀ ಸ್ವಾಮಿಗಳು ಎರಡು ತಿಂಗಳ ಕಾಲ ಇಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದರು. ಅದು ಇಂದಿಗೂ ಅವಿಸ್ಮರಣೀಯ. ಆ ಸಂಬಂಧಕ್ಕಾಗಿಯೇ ಕೇರಳದಿಂದ ಬಂದು ಪುನಃ ಮರಳುತ್ತಿದ್ದೇವೆ. ಯಲ್ಲಾಪುರದ ಜನರ ಜೊತೆ ನಮ್ಮ ಸಂಬಂಧ ಅಷ್ಟೊಂದು ಇದೆ. ಅದು ಹೀಗೆಯೇ ಮುಂದುವರೆಯಬೇಕೆಂಬ ಆಶಯ ನಮ್ಮದಾಗಿದೆ ಎಂದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಕಲೆ, ಸಂಗೀತ, ಸಾಹಿತ್ಯ ಸಮಾಜವನ್ನು ಸುಸಂಸ್ಕೃತಗೊಳಿಸುತ್ತವೆ. ಅಂತಹ ಉತ್ಸವವನ್ನು ಪ್ರಮೋದ ಹೆಗಡೆಯವರು ನಡೆಸಿಕೊಂಡು ಬಂದಿದ್ದಾರೆ. ವಂದೇ ಮಾತರಂ ಗೀತೆಯನ್ನು ೧೯೫೦ ರಲ್ಲೇ ರಾಷ್ಟ್ರಗೀತೆಗೆ ಸಮಾನವಾಗಿ ಹಾಡಬೇಕೆಂಬ ನೀತಿ ರೂಪಿಸಲಾಗಿದ್ದರೂ ರಾಜಕೀಯ ಕಾರಣದಿಂದಾಗಿ ಅದು ಸ್ಥಗಿತಗೊಂಡಿತ್ತು. ಆದರೆ ಪುನಃ ಕೇಂದ್ರ ಸರ್ಕಾರ ಅದು ರಾಷ್ಟ್ರಗೀತೆಯಷ್ಟೇ ಸಮಾನವಾದ ಗೀತೆ, ಅದನ್ನೂ ಕಡ್ಡಾಯಗೊಳಿಸಿದೆ. ಈ ಗೀತೆಗೆ ರಾಷ್ಟ್ರಶಕ್ತಿಯನ್ನು ಜಾಗೃತಗೊಳಿಸಿ, ಎಲ್ಲರನ್ನೂ ಒಂದುಗೂಡಿಸುವ ಶಕ್ತಿಯಿದೆ ಎಂದರು.

ನಿವೃತ್ತ ಕೃಷಿ ಅಧಿಕಾರಿ, ಯಕ್ಷಗಾನ ಕಲಾವಿದ ಸಿ.ಜಿ.ಹೆಗಡೆ, ಹಿರಿಯ ಸಹಕಾರಿ ಜಿ.ಎಸ್.ಭಟ್ಟ ಕಳಚೆ, ಹಿಂದುಸ್ತಾನಿ ಗಾಯಕಿ ವಿದುಷಿ ವಾಣಿ ಹೆಗಡೆ ಇವರಿಗೆ ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ರಾಮು ನಾಯ್ಕ, ಬಾಲಕೃಷ್ಣ ನಾಯಕ, ಗೋಪಾಲಕೃಷ್ಣ ಗಾಂವ್ಕರ, ನಟರಾಜ ಗೌಡರ್, ಫಕೀರಪ್ಪ ಬೋವಿವಡ್ಡರ್, ರವಿ ಕೈಟ್ಕರ್, ಮಂಜುನಾಥ ಪಾಟೀಲ ಉಪಸ್ಥಿತರಿದ್ದರು.

ಸಂಕಲ್ಪದ ಉಪಾಧ್ಯಕ್ಷ ಪ್ರಶಾಂತ ಹೆಗಡೆ ದಂಪತಿಗಳು ಫಲ ಸಮರ್ಪಿಸಿದರು. ಶ್ರೀಲತಾ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ನಾರಾಯಣ ಸಭಾಹಿತ ಸಂಗಡಿಗರು ವೇದಘೋಷ ಪಠಿಸಿದರು. ಸಂಕಲ್ಪದ ಸಂಚಾಲಕ ಪ್ರಸಾದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ಗಣಪೂಮನೆ ವಂದೇ ಮಾತರಂ ಗೀತೆಯೊಂದಿಗೆ ಸಭಾಕಾರ್ಯಕ್ರಮ ಸಂಪನ್ನಗೊಂಡಿತು.