ಕುಷ್ಟಗಿ ತಾಲೂಕಿನ ಚಳಗೇರ ಗ್ರಾಮದಲ್ಲಿ ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 12ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಪಾಲ್ಗೊಂಡಿದ್ದರು.
ಕುಷ್ಟಗಿ: ರಾಜ್ಯದ ಮಠ-ಮಾನ್ಯಗಳು ಧಾರ್ಮಿಕ ಸೇವೆಯ ಜತೆಗೆ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿವೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಚಳಗೇರ ಗ್ರಾಮದಲ್ಲಿ ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 12ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. . ಚಾಮರಾಜನಗರದಿಂದ ಬೀದರ್ ವರೆಗೆ ಸಾವಿರಾರು ಮಠಗಳು ಶಿಕ್ಷಣ ಮತ್ತು ದಾಸೋಹದ ಮೂಲಕ ಸಮಾಜದಲ್ಲಿ ಜ್ಞಾನ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವ ಮಹತ್ತರ ಕಾರ್ಯ ಮಾಡುತ್ತಿವೆ ಎಂದು ಹೇಳಿದರು.ಸ್ವಾತಂತ್ರ್ಯಪೂರ್ವದಿಂದಲೂ ಮಠಗಳು ಶೈಕ್ಷಣಿಕ ಸೇವೆ ಸಲ್ಲಿಸುವ ಜತೆಗೆ ಜನರಿಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯ ಮಾಡುತ್ತಿವೆ. ಮಠಾಧೀಶರಲ್ಲಿ ತಾಯಿಯಂತಹ ಪ್ರೀತಿ ಮತ್ತು ಕಾಳಜಿ ಇರುತ್ತದೆ. ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ಮುನ್ನಡೆಸುವ ಶಕ್ತಿ ಮಠಗಳಿಗಿದೆ. ಮನುಷ್ಯ ಜೀವನದಲ್ಲಿ ಹಣ, ಆಸ್ತಿ ಮತ್ತು ಅಧಿಕಾರಕ್ಕಿಂತ ನೆಮ್ಮದಿ ಹಾಗೂ ತೃಪ್ತಿಗೆ ಮಹತ್ವ ನೀಡಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚುವ ಬುದ್ಧಿ ಬೆಳೆಸಿಕೊಳ್ಳಬೇಕು ಎಂದರು.
ಜೀವನದಲ್ಲಿ ಎದುರಾಗುವ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ, ತಾಳ್ಮೆ ಮತ್ತು ಸಹನೆಯಿಂದ ಬದುಕಬೇಕು. ಕುಟುಂಬ ಹಾಗೂ ಸಮಾಜದಲ್ಲಿ ಪರಸ್ಪರ ಹೊಂದಾಣಿಕೆ ಬಹಳ ಮುಖ್ಯ. ಹೊಂದಾಣಿಕೆ ಇದ್ದಾಗ ಮಾತ್ರ ಉತ್ತಮ ಸಂಬಂಧಗಳು ಉಳಿಯಲು ಸಾಧ್ಯ. ಅನ್ನ ನೀಡುವ ರೈತರು ಸಮಾಜದ ಬೆನ್ನೆಲುಬಾಗಿದ್ದು, ಅವರ ಶ್ರಮಕ್ಕೆ ಗೌರವ ನೀಡುವ ಮನೋಭಾವ ಪ್ರತಿಯೊಬ್ಬರಲ್ಲೂ ಇರಬೇಕು ಎಂದರು. ಇದೇ ವೇಳೆ ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಪೂಜಾನಿಷ್ಠೆ ಹಾಗೂ ಧಾರ್ಮಿಕ ಸೇವೆಯನ್ನು ಸ್ಮರಿಸಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರು ಮಾತನಾಡಿ, ಮಕ್ಕಳಿಗೆ ಕೇವಲ ಅಂಕ ಗಳಿಸುವ ಶಿಕ್ಷಣ ನೀಡಿದರೆ ಸಾಲದು. ಅದರ ಜತೆಗೆ ಉತ್ತಮ ಸಂಸ್ಕಾರ, ಸನ್ನಡತೆ, ಹಿರಿಯರನ್ನು ಗೌರವಿಸುವ ಗುಣ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಬಾಲ್ಯದಲ್ಲಿಯೇ ಕಲಿಸುವ ಸಂಸ್ಕಾರ ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಉತ್ತಮ ಸಂಸ್ಕಾರದಿಂದ ಮಾತ್ರ ಮನುಷ್ಯನ ಸಮಗ್ರ ಬೆಳವಣಿಗೆ ಸಾಧ್ಯ. ಆದ್ದರಿಂದ ಪಾಲಕರು ಮಕ್ಕಳಿಗೆ ಉತ್ತಮ ನಡವಳಿಕೆ ಕಲಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಹಾಲಕೇರಿ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ಉತ್ತಮ ಸಂಕಲ್ಪ ತೊಟ್ಟು ಸಮಾಜಕ್ಕೆ ಉಪಯುಕ್ತವಾಗುವ ಕೆಲಸಗಳನ್ನು ಮಾಡಬೇಕು. ಗುರುಗಳ ಮಾರ್ಗದರ್ಶನದಲ್ಲಿ ಬದುಕು ಸಾಗಿಸಿದಾಗ ಜೀವನಕ್ಕೆ ಸರಿಯಾದ ದಿಕ್ಕು ದೊರೆಯುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸುವ ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂದರು.ಚಳಗೇರಿ ಶ್ರೀಮಠದ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕುದರಿಮೋತಿಯ ವಿಜಯ ಮಹಾಂತ ಸ್ವಾಮಿಗಳು, ಕೇಸೂರಿನ ಚಂದ್ರಶೇಖರ ದೇವರು, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ, ಬಳ್ಳಾರಿ ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ, ದೇವೇಂದ್ರಪ್ಪ ಬಳೂಟಗಿ, ಕಲ್ಲೇಶ ತಾಳದ್, ವಿಶ್ವನಾಥ ಕನ್ನೂರು, ಬಸವರಾಜ ಹಳ್ಳೂರು ಉಪಸ್ಥಿತರಿದ್ದರು.
ಪುಣ್ಯಸ್ಮರಣೋತ್ಸವದ ಅಂಗವಾಗಿ ನೂರಾರು ರೈತರನ್ನು ಸನ್ಮಾನಿಸಲಾಯಿತು. ಮಹಿಳೆಯರಿಗೆ ಉಡಿ ತುಂಬುವ ಮೂಲಕ ಗೌರವ ಸಲ್ಲಿಸಲಾಯಿತು. 75 ವರ್ಷ ಮೇಲ್ಪಟ್ಟ ಹಿರಿಯ ದಂಪತಿಗಳನ್ನು ಸನ್ಮಾನಿಸಿ, ಅವರ ಅನುಭವದ ಬದುಕಿಗೆ ಗೌರವ ಸಮರ್ಪಿಸಲಾಯಿತು.