ಸುಮೋಟ್‌ ಕೇಸ್‌ ದಾಖಲಿಸಲು ಲೋಕಾಯುಕ್ತ ಸೂಚನೆ

KannadaprabhaNewsNetwork |  
Published : May 01, 2026, 03:30 AM IST
Lokayukta 

ಸಾರಾಂಶ

ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು ಏಳು ಮಂದಿ ದುರ್ಮರಣ ಹೊಂದಿದ ಘಟನೆ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಬಿಎ ಮುಖ್ಯ ಆಯುಕ್ತ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್‌ ಹೇಳಿದ್ದಾರೆ.

  ಬೆಂಗಳೂರು :  ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು ಏಳು ಮಂದಿ ದುರ್ಮರಣ ಹೊಂದಿದ ಘಟನೆ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಬಿಎ ಮುಖ್ಯ ಆಯುಕ್ತ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್‌ ಹೇಳಿದ್ದಾರೆ.

ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ನೀಡಿದರು. ಬೌರಿಂಗ್‌ ಆಸ್ಪತ್ರೆಗೆ ತೆರಳಿ ವೈದ್ಯರೊಂದಿಗೆ ಸಮಾಲೋಚಿಸಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಗಾಯಾಳುಗಳ ಚಿಕಿತ್ಸಾ ವೆಚ್ಚ ಮತ್ತು ಔಷಧಿ ಖರ್ಚುಗಳನ್ನು ಸರ್ಕಾರವೇ ಭರಿಸಲಿದೆ ಎಂದು ಗಾಯಾಳುಗಳ ಕುಟುಂಬಕ್ಕೆ ಭರವಸೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್‌.ಪಾಟೀಲ್‌, ಮಳೆ ಬಂದಾಗ ಈ ಅವಾಂತರವಾಗಿದೆ. ಘಟನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇವೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿತ್ತು. ಈ ಘಟನೆ ಸಂಬಂಧ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ, ಜಿಬಿಎ ಮುಖ್ಯ ಆಯುಕ್ತ, ಐದು ನಗರ ಪಾಲಿಕೆಗಳ ಆಯುಕ್ತರು, ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗುವುದು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಕಾಂಪೌಂಡ್‌ ಗುಣಮಟ್ಟ ಪರಿಶೀಲಿಸಬೇಕು:

ಇಲ್ಲಿ ಕಟ್ಟಡದ ತ್ಯಾಜ್ಯಗಳು, ಮಣ್ಣು ಹಾಕಿದ್ದಾರೆ. ಹಾಲೋ ಬ್ರಿಕ್ಸ್‌ನಿಂದ ಕಾಂಪೌಂಡ್‌ ಕಟ್ಟಿದ್ದಾರೆ. ಇದು ಎಷ್ಟರ ಮಟ್ಟಿಗೆ ಗುಣಮಟ್ಟದಿಂದ ಕೂಡಿದೆ ಎಂಬುದನ್ನು ನೋಡಬೇಕು. ಆಸ್ಪತ್ರೆ ಅಧಿಕಾರಿಗಳ ಮೇಲೂ ಕ್ರಮ ವಹಿಸಲಾಗುವುದು. ಹೆಬ್ಬಾಳ ಸೇರಿದಂತೆ ನಗರದ ವಿವಿಧೆಡೆ ಅನಾಹುತಗಳಾಗಿವೆ. ಎಲ್ಲೆಲ್ಲಿ ಶಥಿಲಾವಸ್ಥೆ ಕಟ್ಟಡಗಳು ಇವೆ ಎಂಬುದನ್ನು ಪರಿಶೀಲಿಸಬೇಕು. ಎಲ್ಲಾದರೂ ಲೋಪಗಳು ಕಂಡು ಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಮಗ್ರ ತನಿಖೆಗೆ ಸೂಚನೆ:

ಈ ಕಾಂಪೌಂಡ್‌ನ ತಳಪಾಯ ದುರ್ಬಳವಾಗಿದ್ದರಿಂದ ಗೋಡೆ ಬಿದ್ದಿದೆ. ನಗರದಲ್ಲಿ ಮಳೆ ಬಂದಾಗ ಈ ರೀತಿಯ ಅನಾಹುತಗಳು ಆಗುತ್ತವೆ. ಪ್ರತಿ ವರ್ಷ ಮಳೆ ಬರುತ್ತದೆ. ಇಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಟ್ಟಿದ್ದಾರೆ. ಈ ಜಾಗದ ಸುರಕ್ಷತೆ ಬಗ್ಗೆ ಪರಿಶೀಲಿಸಬೇಕಿತ್ತು. ಆಸ್ಪತ್ರೆಯವರು, ಬಿಬಿಎಂಪಿ ಇದೆಲ್ಲವನ್ನೂ ನೋಡಬೇಕಿತ್ತು. ಯಾರು ಈ ಕಾಂಪೌಂಡ್‌ ನಿರ್ಮಿಸಿದ್ದಾರೆ? ಕಾಮಗಾರಿ ಹೇಗೆ ಮಾಡಿದ್ದಾರೆ? ಈ ಎಲ್ಲ ಮಾಹಿತಿ ತೆಗೆಯುತ್ತೇವೆ. ಈ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ. ಇದರ ಜೊತೆಗೆ ನಾವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಅವರು ಹೇಳಿದರು. 

ಕೆ.ಆರ್‌.ವೃತ್ತದ ಕೆಳಸೇತುವೆ ಪರಿಶೀಲನೆ:

ಇದೇ ವೇಳೆ ಕೆ.ಆರ್‌.ವೃತ್ತದ ಕೆಳ ಸೇತುವೆ ಪರಿಶೀಲಿಸಿ ಬಳಿಕ ಮಾತನಾಡಿದ ಬಿ.ಎಸ್‌.ಪಾಟೀಲ್‌, ಎರಡು ವರ್ಷದ ಹಿಂದೆ ಈ ಕೆಳ ಸೇತುವೆಯಲ್ಲಿ ಮಳೆ ನೀರು ತುಂಬಿಕೊಂಡು ಕಾರು ಮುಳುಗಿ ಮಹಿಳೆ ಮೃತಪಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಕೆಳಸೇತುವೆಯಲ್ಲಿ ನೀರು ನಿಲ್ಲದಂತೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ನಗರದಲ್ಲಿ ಮಳೆ ಬಂದಾಗ ಈ ರೀತಿಯ ಕೆಳಸೇತುವೆಗಳಲ್ಲಿ ನೀರು ತುಂಬಿಕೊಳ್ಳುವುದನ್ನು ಸಾಕಷ್ಟು ನೋಡಿದ್ದೇವೆ. ಈ ಸಮಸ್ಯೆ ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಸೂಕ್ತ ಕ್ರಮ ಸೂಚಿಸುವುದಾಗಿ ತಿಳಿಸಿದರು. ಈ ವೇಳೆ ಉಪಲೋಕಾಯುಕ್ತರಾದ ಬಿ.ವೀರಪ್ಪ, ಕೆ.ಎನ್‌.ಫಣೀಂದ್ರ ಹಾಗೂ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರಕ್ಕೆ ಸಂಪುಟ ಅಸ್ತು
ಎಚ್ಚರಗೊಂಡಾಗ ಎಲ್ಲರೂ ಮಣ್ಣಿನಲ್ಲಿ ಮುಚ್ಚಿಹೋಗಿದ್ರು