ಕನ್ನಡಪ್ರಭ ವಾರ್ತೆ ಬೆಂಗಳೂರು
ಬೌರಿಂಗ್ ಆಸ್ಪತ್ರೆಯ ದುರಂತದಲ್ಲಿ ಏಳು ಜನ ಸಾವಿಗೀಡಾಗುವ ಮುನ್ನ ಮೃತರ ಜೊತೆಯಲ್ಲಿ 30 ನಿಮಿಷಗಳವರೆಗೆ ಮಳೆಯಲ್ಲಿ ನಿಂತು, ಸ್ವಲ್ಪದರಲ್ಲೇ ಪಾರಾದ ಬಟ್ಟೆ ವ್ಯಾಪಾರಿ ವಿಜಯನಗರದ ನದೀಂಪಾಷಾ (51) ದುರಂತವನ್ನು ವಿವರಿಸಿದರು.
ಜೋರು ಮಳೆ, ಸಂಜೆ ಸುಮಾರು ಐದೂ ಮುಕ್ಕಾಲರ ಸುಮಾರಿಗೆ ಮಳೆ ಬೀಳ್ತಾನೆ ಇತ್ತು. ಆಲಿಕಲ್ಲು ಹೊಡೆತ ಜೋರಾಗೇ ಇತ್ತು. ಮಳೆ ಸ್ಟಾಟಿಂಗ್ ನಲ್ಲಿ ಗೋಡೆ ಕುಸಿದಿರಲಿಲ್ಲ. ಅರ್ಧಗಂಟೆ ನಂತ್ರ ಗೋಡೆ ಅಲ್ಲಾಡಲು ಶುರುವಾಯ್ತು, ನಾನು ಎರಡ್ ಹೆಜ್ಜೆ ಮುಂದೆ ಬಂದೆ. ಇಲ್ಲದಿದ್ರೆ ನಾನೂ ಗೋಡೆಯೊಳಗೆ ಸಮಾಧಿಯಾಗುತ್ತಿದ್ದೆ ಎಂದರು.ಮಣ್ಣಲ್ಲಿ ಸಿಕ್ಕಿಕೊಂಡವರಲ್ಲಿ ಒಂದು ಮಗು ಕೂಡಾ ಇತ್ತು. ನನ್ನ ಜೊತೆಯಲ್ಲಿ ವ್ಯಾಪಾರ ಮಾಡ್ತಾ ಇದ್ದ ಫಯಾಜ್, ಫಾರೂಕ್, ರಿಯಾಜ್ ಇಬ್ಬರು ಹೆಂಗಸ್ರು ಮಣ್ಣಲ್ಲಿ ಮುಚ್ಚಿಹೋಗಿದ್ರು, ನಾನು ಎಚ್ಚರಗೊಂಡಾಗ ನನ್ನ ಕಾಲು ಕೂಡ ಮಣ್ಣಿನಡಿ ಸಿಕ್ಕಿಕೊಂಡಿತ್ತು. ನಾನು ಕಾಲು ಎಳೆದುಕೊಂಡು ಚರ್ಚ್ ಒಳಗೆ ಹೋದೆ, ಅಲ್ಲಿ ಅವರು ನನಗೆ ಟವಲ್ ಕೊಟ್ರು, ನಡುಗ್ತಾ ಇದ್ದ ನನ್ನ ಮಣ್ಣನ್ನೆಲ್ಲಾ ಅವರೇ ತೊಳೆದ್ರು ಎಂದು ವಿವರಿಸಿದರು.ಕಳೆದ ವರ್ಷದ ಮಳೆಯಲ್ಲಿಯೇ ಈ ಗೋಡೆಯ ಸಣ್ಣ ತೂತುಗಳಿಂದ ನೀರು ಬರ್ತಾ ಇತ್ತು. ಆಗಲೆ ಸ್ವಲ್ಪ ಡೌಟ್ ಇತ್ತು. ಅದನ್ನ ನೆನೆಸಿಕೊಂಡು ನಾನು ಈಗಲೂ ಹಾಗೆಯೇ ಬರಬಹುದು ಅಂದುಕೊಂಡಿದ್ದೆ. ಆದ್ರೆ, ಗೋಡೆಯೇ ಬಿತ್ತು, ಈ ಕಾಂಪೌಂಡ್ ಪಕ್ಕ ಸುಮಾರು 25 ರಿಂದ 30 ಜನ ವ್ಯಾಪಾರ ಮಾಡ್ತಾ ಇದ್ರು, ಆ ಕಡೆ ಯಾರೂ ಇರಲಿಲ್ಲ, ಹೆಚ್ಚಿಗೆ ಜನ ನಮ್ಮ ಕಡೆಯೇ ಇದ್ರು, ಈ ಕಡೆಯೇ ಗೋಡೆ ಬಿತ್ತು, ದೇವರು ಈ ರೀತಿ ಮಾಡ್ಬಾರದಿತ್ತು ಎಂದರು.
ನಾನು ಈ ಚಿಕ್ಕ ಗಲ್ಲಿಯಲ್ಲಿ ಸುಮಾರು 30 ವರ್ಷಗಳಿಂದ ಹಳೆಯ ಪುಸ್ತಕಗಳನ್ನು ವ್ಯಾಪಾರ ಮಾಡುತ್ತಿದ್ದೇನೆ. ಯಾವಾಗಲೂ ಈ ರೀತಿಯ ಮಳೆ ನೋಡಿರಲಿಲ್ಲ. ಜಲಪಾತದಂತೆ ಆ ಗೋಡೆಯ ಕಡೆಯಿಂದ ನೀರು ಬೀಳ್ತಾ ಇತ್ತು. ಆಲಿಕಲ್ಲು ಹೊಡೆತದಿಂದ ಬೆನ್ನೆಲ್ಲಾ ನೋವು ಎಂದರು.