ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರಕ್ಕೆ ಸಂಪುಟ ಅಸ್ತು

KannadaprabhaNewsNetwork |  
Published : May 01, 2026, 03:30 AM IST
Greater Bengaluru

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಿಂದ ರಾಮನಗರ ತಾಲೂಕಿನ 9 ಗ್ರಾಮಗಳ 7,481 ಎಕರೆ ವ್ಯಾಪ್ತಿಯಲ್ಲಿ ಬರೋಬ್ಬರಿ 18,133 ಕೋಟಿ ರು. ವೆಚ್ಚದಲ್ಲಿ ‘ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರ ಯೋಜನೆ’ ಅನುಷ್ಠಾನಗೊಳಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.

  ಬೆಂಗಳೂರು : ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಿಂದ ರಾಮನಗರ ತಾಲೂಕಿನ 9 ಗ್ರಾಮಗಳ 7,481 ಎಕರೆ ವ್ಯಾಪ್ತಿಯಲ್ಲಿ ಬರೋಬ್ಬರಿ 18,133 ಕೋಟಿ ರು. ವೆಚ್ಚದಲ್ಲಿ ‘ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರ ಯೋಜನೆ’ ಅನುಷ್ಠಾನಗೊಳಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವ ಎಚ್.ಕೆ.ಪಾಟೀಲ್‌, ಯೋಜನೆ ಅನುಷ್ಠಾನಕ್ಕೆ 18,133 ಕೋಟಿ ರು. ಹಣ ಅಗತ್ಯವಿದ್ದು ಹುಡ್ಕೋ ಬ್ಯಾಂಕ್‌ನಿಂದ ಸಾಲ ಪಡೆಯಲಾಗುತ್ತಿದೆ. ಸರ್ಕಾರವು 7,500 ಕೋಟಿ ರು.ಗಳ ಸಾಲಕ್ಕೆ ಗ್ಯಾರಂಟಿ ನೀಡಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

ಬಿಡದಿ ಸುತ್ತಮುತ್ತಲಿನ ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಭೈರಮಂಗಲ, ಕೆಂಪಯ್ಯನಪಾಳ್ಯ, ಅರಳಾಳುಸಂದ್ರ, ಹೊಸೂರು, ಬನ್ನಿಗಿರಿ, ಕೆ.ಜಿ.ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ತಾಯಪ್ಪನದೊಡ್ಡಿ, ಮಂಡಲಹಳ್ಳಿ ಹಾರೋಹಳ್ಳಿ ತಾಲೂಕು ವ್ಯಾಪ್ತಿಯ ವಡೇರಹಳ್ಳಿ ಸೇರಿದಂತೆ 9 ಗ್ರಾಮಗಳಲ್ಲಿ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬೆಂಗಳೂರು ಸಮಗ್ರ ಉಪನಗರ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.

ರೈತರಿಂದ ವಿರೋಧವಿಲ್ಲ:

ಯೋಜನೆಗೆ ರೈತರ ವಿರೋಧವಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಭೂ ಮಾಲೀಕರಿಂದ ವಿರೋಧವಿಲ್ಲ. ಭೂ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲು ನಿರ್ಧರಿಸಲಾಗಿದೆ. ನಗದು ಪರಿಹಾರ ಅಥವಾ ಅಭಿವೃದ್ಧಿಪಡಿಸಿದ ಜಮೀನು ನೀಡಲು ತೀರ್ಮಾನಿಸಲಾಗಿದೆ.

ಪ್ರತಿ ಎಕರೆ ಭೂಮಿ ಕಳೆದುಕೊಂಡವರಿಗೆ 9,693 ಚದರಡಿಯಷ್ಟು ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಎಚ್.ಕೆ. ಪಾಟೀಲ್ ತಿಳಿಸಿದರು.ರಾಜ್ಯ ಉನ್ನತ ಅಧಿಕಾರ ಚಾಲನಾ ಸಮಿತಿ:ಭಾರತ ಸರ್ಕಾರದ ಅರ್ಬನ್‌ ಚಾಲೆಂಜ್‌ ಫಂಡ್‌ನಲ್ಲಿ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ರಾಜ್ಯ ಉನ್ನತ ಅಧಿಕಾರ ಚಾಲನಾ ಸಮಿತಿ (ಎಸ್‌ಎಚ್‌ಪಿಎಸ್‌ಸಿ) ಮತ್ತು ರಾಜ್ಯಮಟ್ಟದ ತಾಂತ್ರಿಕ ಸಮಿತಿ (ಎಸ್‌ಎಲ್‌ಟಿಸಿ) ರಚನೆ ಮಾಡಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸ್ಯಾಟಲೈಟ್‌ ಮಾರುಕಟ್ಟೆ ಸ್ಥಾಪನೆ

ಬೆಂಗಳೂರಿನ ದಾಸನಪುರ ಉಪ ಮಾರುಕಟ್ಟೆ ಪ್ರಾಂಗಣಕ್ಕೆ ಹೊಂದಿಕೊಂಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ದಾಸನಪುರ ಹೋಬಳಿ ಮತ್ತಹಳ್ಳಿ ಗ್ರಾಮದ 12.4 ಎಕರೆ ಜಮೀನನ್ನು ಹೊಸ ಸ್ಯಾಟಲೈಟ್‌ ಮಾರುಕಟ್ಟೆ ಸ್ಥಾಪನೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ವಾರ್ಷಿಕ ಬಾಡಿಗೆ ಆಧಾರದ ಮೇಲೆ ನೀಡಲು ನಿರ್ಧರಿಸಲಾಗಿದೆ. ಪ್ರತಿ ವರ್ಷ 10 ಲಕ್ಷ ರು. ಬಾಡಿಗೆ ಹಾಗೂ ಪ್ರತಿ ಆರು ವರ್ಷಗಳಿಗೊಮ್ಮೆ ಶೇ.5 ರಷ್ಟು ಹೆಚ್ಚಳ ಷರತ್ತಿನೊಂದಿಗೆ ಅವಕಾಶ ಕಲ್ಪಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸುಮೋಟ್‌ ಕೇಸ್‌ ದಾಖಲಿಸಲು ಲೋಕಾಯುಕ್ತ ಸೂಚನೆ
ಎಚ್ಚರಗೊಂಡಾಗ ಎಲ್ಲರೂ ಮಣ್ಣಿನಲ್ಲಿ ಮುಚ್ಚಿಹೋಗಿದ್ರು