ಕನ್ನಡಪ್ರಭ ವಾರ್ತೆ ಹಾಸನ
ಪ್ರತಿ ಬೂತ್‌ಗಳಿಗೂ ರಾಜಕೀಯ ಪಕ್ಷಗಳು ತಮ್ಮ ಏಜೆಂಟ್ ನೇಮಕ ಮಾಡುವುದರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಹಕಾರಿ ಆಗಲಿದೆ. ಜೊತೆಗೆ ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ತಿಳಿಸಿದ್ದಾರೆ.ನಗರದ ಹಾಸನಾಂಬಾ ಕಲಾಭವನದಲ್ಲಿ ಸೋಮವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಕುರಿತು ಹಾಸನ ವಿಧಾನಸಭಾ ಕ್ಷೇತ್ರದ ಚುನಾಯಿತ ಜನಪ್ರತಿನಿಧಿಗಳು, ಮೇಲ್ವಿಚಾರಕರು, ಮತಗಟ್ಟೆ ಅಧಿಕಾರಿಗಳು ಹಾಗೂ ಮತಗಟ್ಟೆ ಏಜೆಂಟ್ ಅವರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮತಗಟ್ಟೆ ಅಧಿಕಾರಿಗಳು ಜೂ.೩೦ರಿಂದ ಜುಲೈ.೨೯ರವರೆಗೆ ಮನೆ ಮನೆಗೆ ಭೇಟಿ ನೀಡಿ ಪೂರ್ವದಲ್ಲಿ ಮುದ್ರಣ ಗೊಂಡಿರುವ ನಮೂನೆಯನ್ನು ದ್ವಿಪ್ರತಿಯಲ್ಲಿ ನೀಡುತ್ತಾರೆ ಮತದಾರರು ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಪ್ರಸ್ತುತ ಭಾವಚಿತ್ರ ಅಂಟಿಸಿ ಕಡ್ಡಾಯವಾಗಿ ಸಹಿ ಮಾಡಿ ಒಂದು ಪ್ರತಿಯನ್ನು ಮತಗಟ್ಟೆ ಅಧಿಕಾರಿಗೆ ಹಿಂದಿರುಗಿಸಬೇಕು ಎಂದರು.
ಪ್ರಜಾ ಪ್ರಾತಿನಿದ್ಯ ಕಾಯ್ದೆ ಅಡಿಯಲ್ಲಿ ಮತದಾರರ ಪಟ್ಟಿ ತಯಾರಿಸುವುದು ಸಂವಿಧಾನಾತ್ಮಕ ಕರ್ತವ್ಯ. ಈ ನಿಟ್ಟಿನಲ್ಲಿ ದೇಶದಾದ್ಯಂತ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮವು ನಡೆಯುತ್ತಿದ್ದು, ೨೦೨೫ರ ಮತದಾರರ ಪಟ್ಟಿಯಲ್ಲಿರುವ ಹೆಸರುಗಳಿಗೆ ಸಂಬಂಧಿಸಿದಂತೆ ೨೦೦೨ರಲ್ಲಿರುವ ಮತದಾರರ ಪಟ್ಟಿಯ ಮತದಾರರ ಕುಟುಂಬದ ಸಂತತಿಗಳಿಗೆ ಮ್ಯಾಪಿಂಗ್ ಮಾಡಿ ಲಿಂಕ್ ಮಾಡಲಾಗುತ್ತಿರುವುದರಿಂದ ಯಾವ ಪ್ರಜೆಯು ಮತದಾನದಿಂದ ವಂಚಿತರಾಗದಂತೆ ಗಮನಹರಿಸಬೇಕು ಎಂದು ತಿಳಿಸಿದರು.ಈಗಾಗಲೇ ೧೬ ರಾಜ್ಯಗಳಲ್ಲಿ ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಮುಗಿದಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಉಳಿದ ರಾಜ್ಯಗಳಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಅದರಂತೆ ಕರ್ನಾಟಕ ರಾಜ್ಯದಲ್ಲಿಯು ನಡೆಯುತ್ತಿದೆ. ಜಿಲ್ಲೆಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಜಿಲ್ಲಾ ಚುನಾವಣಾಧಿಕಾರಿಯವರ ಪಾತ್ರ ಬಹುಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಾಸ್ಟರ್ ಟ್ರೈನರ್‌ಗಳು ಸರಿಯಾಗಿ ಅರ್ಥ ಮಾಡಿಕೊಂಡು ಮತಗಟ್ಟೆ ಅಧಿಕಾರಿಗಳಿಗೆ ಯಾವುದೇ ಗೊಂದಲವಿಲ್ಲದಂತೆ ಪರಿಣಾಮಕಾರಿಯಾಗಿ ತರಬೇತಿ ನೀಡಲು ಕ್ರಮವಹಿಸಿ ಎಂದು ತಿಳಿಸಿದರು. ೮ರಿಂದ ೧೦ ಮತಗಟ್ಟೆ ಅಧಿಕಾರಿಗಳು ಒಬ್ಬ ಮೇಲ್ವಿಚಾರಕರು ನೋಡಬೇಕಾಗುತ್ತದೆ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಕುರಿತು ಗಂಭೀರವಾಗಿ ಪರಿಗಣಿಸಿ ಮೇಲ್ವಿಚಾರಕರು ತಮ್ಮ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಮತದಾರರ ಪಟ್ಟಿಯಿಂದ ಅರ್ಹ ಮತದಾರರು ಹೊರಗುಳಿಯದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹಾಸನ ಜಿಲ್ಲೆಯು ಶೇ.೯೮ರಷ್ಟು ಮ್ಯಾಪಿಂಗ್ ಆಗಿರುವುದು ಜಿಲ್ಲೆಗೆ ಹೆಮ್ಮೆ ತರುವಂತಹ ವಿಷಯವಾಗಿದೆ, ಉಳಿದ ೨% ಕೆಲಸವನ್ನು ಅತ್ಯುತ್ತಮವಾಗಿ ನಿರ್ವಹಿಸಿ ಜಿಲ್ಲೆಗೆ ಉತ್ತಮ ಹೆಸರನ್ನು ತರುವಂತೆ ತಿಳಿಸಿದರು.
ಕರಡು ಮತದಾರರ ಪಟ್ಟಿಯನ್ನು ೫-೮-೨೦೨೬ರಂದು ಪ್ರಕಟಿಸಲಾಗುತ್ತದೆ, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ೫-೮-೨೦೨೬ರಿಂದ ೪-೯-೨೦೨೬ರವರೆಗೆ, ಹಕ್ಕು ಮತ್ತು ಆಕ್ಷೇಪಣೆಗಳ ತಿರುವಳಿ ೫-೮-೨೦೨೬ರಿಂದ ೩-೧೦-೨೦೨೬ ರವರೆಗೆ, ಅಂತಿಮ ಮತದಾರರ ಪಟ್ಟಿಯನ್ನು ೭-೧೦-೨೦೨೬ರಂದು ಪ್ರಕಟಣೆ ಮಾಡಲಾಗುತ್ತದೆ ಎಂದು ತಿಳಿಸಿದರು.ವರ್ಷದಲ್ಲಿ ನಾಲ್ಕು ಬಾರಿ ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ೧ರಂದು ಮತದಾರರ ಪಟ್ಟಿ ಪರಿಷ್ಕರಣೆ ಆಗುತ್ತದೆ ಆ ಸಂದರ್ಭದಲ್ಲಿ ೧೮ ವರ್ಷ ಪೂರೈಸಿದವರು ಹೊಸ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಸ್ತುತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಾಗಿ ಹೊಸ ಮತದಾರರ ಪಟ್ಟಿ ತಯಾರಿಸಲಾಗುತ್ತದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಮಹಾನಗರ ಪಾಲಿಕೆಯ ಆಯುಕ್ತರಾದ ಕೃಷ್ಣಮೂರ್ತಿ, ತಹಸೀಲ್ದಾರ್ ಗೀತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.