ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಗುಣಮಟ್ಟ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಪ್ರಮುಖ ಧ್ಯೇಯವಾಗಬೇಕು. ಹಣದ ಹಿಂದೆ ಹೋಗದ ಜನರ ವಿಶ್ವಾಸ ಗಳಿಸುವುದು ಮುಖ್ಯವಾಗುತ್ತದೆಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಟೈಮ್ಸ್ ಪಿಯು ಕಾಲೇಜಿನ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮ ಹಾಗೂ ೨೦೨೫-೨೬ನೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣದ ಜೊತೆ ವಿದ್ಯಾರ್ಥಿಗಳಲ್ಲಿ ಉತ್ತಮ ವಾದ ನಡತೆಯನ್ನು ರೂಢಿಸುವುದೇ ಶಿಕ್ಷಣ ಸಂಸ್ಥೆಗಳ ಮುಖ್ಯ ಗುರಿ. ಮಕ್ಕಳಲ್ಲಿ ಉತ್ತಮ ಗುಣವನ್ನು ಬೆಳೆಸುವುದು, ಚಾಣಾಕ್ಷತನ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಣ ಸಂಸ್ಥೆಗಳ ಗುರಿಯಾಗಬೇಕು. ಪ್ರತಿಯೊಬ್ಬ ನಾಗರಿಕನಿಗೂ ವಿದ್ಯಾಭ್ಯಾಸದ ಅವಶ್ಯಕತೆ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಪೈಪೋಟಿ ಇದೆ. ಎಂಬಿಬಿಎಸ್ ಮಾತ್ರವಲ್ಲದೇ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ರೇಡಿಯಾಲಜಿ, ಡಿ.ಫಾರ್ಮಾ, ಬಿ.ಪಾರ್ಮಾ ಸೇರಿ ಅನೇಕ ಕೋಸ್‌ರ್ಗಳಿದ್ದು, ಹೇರಳ ಉದ್ಯೋಗಾವಕಾಶ ಇದೆ. ತಮಗೆ ಸಿಕ್ಕ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದರು.
ನಿತ್ಯ ದಿನಪತ್ರಿಕೆ ಓದುವ ಅಭ್ಯಾಸ ವನ್ನು ರೂಢಿಸಿಕೊಳ್ಳಬೇಕು. ಅದರಿಂದ ಬರೆಯುವ, ಮಾತನಾಡುವ ಕೌಶಲ ವೃದ್ಧಿಯಾಗುತ್ತದೆ. ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತವಾದರೆ ಯಶಸ್ಸು ಕಾಣುವುದು ಕಷ್ಟ. ಸಾಧನೆಯ ಕನಸು ಕಾಣುವ ವಿದ್ಯಾರ್ಥಿಗಳು ಪಠ್ಯದ ಹೊರತಾದ ಜ್ಞಾನವನ್ನು ಸಲಹೆ ಸಂಪಾದಿಸಬೇಕೆಂದು ನೀಡಿದರು. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಮಾತನಾಡಿದರು. ದ್ವಿತೀಯ ಪಿಯು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾ ಯಿತು. ಪ್ರಾಂಶುಪಾಲ ಸುನೀಲ್ ಕುಮಾರ್, ಉಪಪ್ರಾಂಶುಪಾಲ ಎಚ್. ಎಂ. ಶ್ರೀಕಂಠ, ಆಡಳಿತಾಧಿಕಾರಿ ಕೆ. ವಿ. ಸಂಜಯ್ ಮತ್ತಿತರರಿದ್ದರು.