ಜಿಲ್ಲೆಯ 6 ಪಪಂಗಳ ಮೇಲೆ ಲೋಕಾ ದಾಳಿ

KannadaprabhaNewsNetwork |  
Published : Nov 13, 2026, 02:45 AM IST
ಫೋಟೊ11ಬಿಕೆಟಿ1,(1) ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಾಗಲಕೋಟೆ ಜಿಲ್ಲೆಯ ಆರು ಪಟ್ಟಣ ಪಂಚಾಯತಿಗಳಲ್ಲಿ ಗುರುವಾರ ಶೋಧ ಹಾಗೂ ಪರಿಶೀಲನಾ ಕಾರ್ಯಾಚರಣೆ ಕೈಗೊಂಡಿದ್ದಾರೆ.) | Kannada Prabha

ಸಾರಾಂಶ

ಜಿಲ್ಲೆಯ ಆರು ಪಟ್ಟಣ ಪಂಚಾಯತಿಗಳ ಮೇಲೆ ಏಕಕಾಲದಲ್ಲಿಯೇ ದಾಳಿ ಮಾಡುವ ಮೂಲಕ ಲೋಕಾಯುಕ್ತ ಅಧಿಕಾರಿಗಳು ಈ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಗುರುವಾರ ಬಿಸಿ ಮುಟ್ಟಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಆರು ಪಟ್ಟಣ ಪಂಚಾಯತಿಗಳ ಮೇಲೆ ಏಕಕಾಲದಲ್ಲಿಯೇ ದಾಳಿ ಮಾಡುವ ಮೂಲಕ ಲೋಕಾಯುಕ್ತ ಅಧಿಕಾರಿಗಳು ಈ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಗುರುವಾರ ಬಿಸಿ ಮುಟ್ಟಿಸಿದರು.

ಪಟ್ಟಣ ಪಂಚಾಯತಿಗಳ ಆಡಳಿತ ವೈಖರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದ ದೂರುಗಳು, ಅರ್ಜಿದಾರರು ಸಲ್ಲಿಸಿದ ಮನವಿಗಳು ಹಾಗೂ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಆಧಾರದ ಮೇಲೆ ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿಕೊಂಡು ಬಾಗಲಕೋಟೆ ಜಿಲ್ಲೆಯ ಆರು ಪಟ್ಟಣ ಪಂಚಾಯತಿ ಮೇಲೆ ಗುರುವಾರ ದಾಳಿ ನಡೆಸಿದ್ದು, ಶೋಧ ಕಾರ್ಯ ಹಾಗೂ ಕಡತಗಳ ಪರಿಶೀಲನಾ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಲೋಕಾಯುಕ್ತರ ನಿರ್ದೇಶನದಂತೆ ಬಾಲಗಲಕೋಟೆ ಜಿಲ್ಲೆಯ ಶಿರೂರ, ಲೋಕಾಪುರ, ಕೆರೂರ, ಕಮತಗಿ, ಬೀಳಗಿ ಹಾಗೂ ಬೆಳಗಲಿ ಪಟ್ಟಣ ಪಂಚಾಯತಿಗಳ ದಾಳಿ ನಡೆಸಲಾಗಿದ್ದು, ಕಚೇರಿಗಳಿಗೆ ಆಗಮಿಸಿರುವ ಲೋಕಾಯುಕ್ತ ಅಧಿಕಾರಿಗಳು ಕಚೇರಿಯ ವಿವಿಧ ದಾಖಲೆಗಳು ಮತ್ತು ಆಡಳಿತಾತ್ಮಕ ಕಾರ್ಯವೈಖರಿಯನ್ನು ಪರಿಶೀಲಿಸುತ್ತಿದ್ದಾರೆ. ಇ-ಸ್ವತ್ತು, ಎನ್ಓಸಿ ಹಾಗೂ ಕಟ್ಟಡ ನಿರ್ಮಾಣಕ್ಕೆಸಂಬಂಧಿಸಿದಂತೆ ಅನುಮತಿ ನೀಡುವ ಸಂದರ್ಭದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಡುವುದು, ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡುವುದು ಸೇರಿದಂತೆ ಹಲವು ಕರ್ತವ್ಯ ಲೋಪ ಹಾಗೂ ಅಕ್ರಮಗಳ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ನಿಯಮ ಉಲ್ಲಂಘಿಸಿ ನಿವೇಶನಗಳನ್ನು ಸೃಷ್ಟಿಸಿ ವಾಣಿಜ್ಯ ಉದ್ದೇಶಕ್ಕಾಗಿ ಡಿಜಿಟಲ್ ಉತಾರೆ ಹಾಗೂ ನಕಲಿ ಹಕ್ಕುಪತ್ರಗಳನ್ನು ನೀಡಿರುವುದು, ಲೇಔಟ್ ಅಭಿವೃದ್ಧಿಪಡಿಸದಿದ್ದರೂ ನಿಯಮಬಾಹಿರವಾಗಿ ದಾಖಲೆ ಮಾಡಿರುವ ಆರೋಪಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.

ಅಲ್ಲದೆ, ಪಟ್ಟಣಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ, ತೆರಿಗೆ ಸಂಗ್ರಹಣೆ ಹಾಗೂ ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರ ಕರ್ತವ್ಯಲೋಪದ ಆರೋಪಗಳನ್ನೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಹಾಗೂ ವಿಜಯಪುರ ಜಿಲ್ಲೆಗಳ ಲೋಕಾಯುಕ್ತ ಘಟಕಗಳ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಒಟ್ಟು, ಇಬ್ಬರು ಡಿವೈಎಸ್ಪಿ ನೇತೃತ್ವದಲ್ಲಿ 9 ಜನ ಪೊಲೀಸ್ ನಿರೀಕ್ಷಕರು ಹಾಗೂ 30 ಸಿಬ್ಬಂದಿ ಸೇರಿದಂತೆ ಒಟ್ಟು 41 ಅಧಿಕಾರಿಗಳು ಮತ್ತು ಸಿಬ್ಬಂದಿ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌