ಮಂಡ್ಯ ನಗರಸಭೆ ಸಿಎಒ ಸಿ.ಪುಟ್ಟಸ್ವಾಮಿ ಮನೆ ಮೇಲೆ ಲೋಕಾಯುಕ್ತ ದಾಳಿ

KannadaprabhaNewsNetwork |  
Published : Nov 26, 2025, 01:30 AM IST
25ಕೆಎಂಎನ್‌ಡಿ-5ಮಂಡ್ಯ ನಗರಸಭೆ ಸಿಎಒ ಸಿ.ಪುಟ್ಟಸ್ವಾಮಿ ಅವರ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿರುವುದು. | Kannada Prabha

ಸಾರಾಂಶ

ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಮಂಡ್ಯ ನಗರಸಭೆಯ ಸಮುದಾಯ ಸಂಘಟನಾಧಿಕಾರಿ (ನಲ್ಮ್‌ ಶಾಖೆ) ತೊರೆಚಾಕನಹಳ್ಳಿ ಸಿ.ಪುಟ್ಟಸ್ವಾಮಿ ಅವರಿಗೆ ಸೇರಿದ ಮನೆಗಳ ಮೇಲೆ ಮಂಗಳವಾರ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ಕಡತ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ನಗರಸಭೆಯ ಸಮುದಾಯ ಸಂಘಟನಾಧಿಕಾರಿ (ನಲ್ಮ್‌ ಶಾಖೆ) ತೊರೆಚಾಕನಹಳ್ಳಿ ಸಿ.ಪುಟ್ಟಸ್ವಾಮಿ ಅವರಿಗೆ ಸೇರಿದ ಮನೆಗಳ ಮೇಲೆ ಮಂಗಳವಾರ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ಕಡತ ಪರಿಶೀಲನೆ ನಡೆಸಿದರು.

ಸಿ.ಪುಟ್ಟಸ್ವಾಮಿ ಅವರಿಗೆ ಸೇರಿದ ಮಂಡ್ಯದಲ್ಲಿನ ಮನೆ, ತೊರೆಚಾಕನಹಳ್ಳಿಯ ಮನೆ, ಸಂಬಂಧಿಕರ ಎರಡು ಮನೆಗಳು ಹಾಗೂ ಫಾರ್ಮ್ ಹೌಸ್ ಸೇರಿದಂತೆ ಐದು ಕಡೆ ಪ್ರತ್ಯೇಕ ತಂಡಗಳಾಗಿ ದಾಳಿ ನಡೆಸಿದ್ದಾರೆ. ಎಲ್ಲೆಡೆ ದಾಖಲೆ ಪತ್ರಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ.

ರಾಜ್ಯಾದ್ಯಂತ ಹಲವು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿಗಾಗಿ ನಿಯೋಜಿಸಲಾಗಿದ್ದ ಲೋಕಾಯುಕ್ತರ ಒಂದು ತಂಡ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪುಟ್ಟಸ್ವಾಮಿ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಈ ಹಿಂದೆ ಚನ್ನಪಟ್ಟಣ ನಗರಸಭೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದ ಪುಟ್ಟಸ್ವಾಮಿ ಅಲ್ಲಿ ಸಾಕಷ್ಟು ವಿವಾದಕ್ಕೀಡಾಗಿದ್ದರು. ನಂತರದಲ್ಲಿ ಮಂಡ್ಯ ನಗರಸಭೆಯ ಆಯುಕ್ತರಾಗಲು ಸಾಕಷ್ಟು ಪ್ರಯತ್ನ ನಡೆಸಿದ್ದ ಪುಟ್ಟಸ್ವಾಮಿ ಇಲ್ಲಿನ ಸಮುದಾಯ ಸಂಘಟಕರಾಗಿ ಮುಂದುವರೆದಿದ್ದರು.

ಸಿ.ಪುಟ್ಟಸ್ವಾಮಿ ಅವರು ಈ ಹಿಂದೆ ಹಲವು ಗಂಭೀರ ಆರೋಪಗಳನ್ನು ಎದುರಿಸಿದ್ದರು. ಎಸಿಬಿ ಅಧಿಕಾರಿಗಳಿಂದ ಬಂಧನ ಭೀತಿ ಎದುರಿಸಿದ್ದರು. ಮಳವಳ್ಳಿ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಸಿ.ಪುಟ್ಟಸ್ವಾಮಿ ಅವರನ್ನು ಕೊಳ್ಳೇಗಾಲ ನಗರಸಭೆ ಆಯುಕ್ತರಾಗಿ ವರ್ಗಾಯಿಸಲಾಗಿತ್ತು. ಸ್ಥಳೀಯ ಶಾಸಕರ ವಿರೋಧದ ಬಳಿಕ ಬನ್ನೂರು ಪುರಸಭೆಗೆ ಸಮುದಾಯ ಸಂಘಟನಾಧಿಕಾರಿ (ಪೌರಾಡಳಿತ ವೃಂದ) ನೇಮಿಸಲಾಗಿತ್ತು. ನಾಲ್ಕು ತಿಂಗಳು ಅಲ್ಲಿದ್ದ ಸಿ.ಪುಟ್ಟಸ್ವಾಮಿ ಅವರಿಗೆ ನಂತರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೃಪೆಯಿಂದ ಮೈಸೂರು ಮಹಾನಗರಪಾಲಿಕೆಯ ವಲಯ ಆಯುಕ್ತರಾಗಿ ನೇಮಕಗೊಂಡಿದ್ದರು.

ನಂತರ ಚನ್ನಪಟ್ಟಣದಲ್ಲಿ ಸಮುದಾಯ ಸಂಘಟನಾಧಿಕಾರಿಯಾಗಿ ನೇಮಕಗೊಂಡಿದ್ದ ಸಿ.ಪುಟ್ಟಸ್ವಾಮಿ ಅವರು ಬಳಿಕ ನಗರಸಭೆ ಆಯುಕ್ತರಾಗಲು ಸಾಕಷ್ಟು ಪ್ರಯತ್ನ ನಡೆಸಿ ವಿಫಲರಾಗಿ ಮಂಡ್ಯ ನಗರಸಭೆಯಲ್ಲೂ ಸಮುದಾಯ ಸಂಘಟನಾಧಿಕಾರಿಯಾಗಿ ಮುಂದುವರೆದಿದ್ದರು.ಸಿ.ಪುಟ್ಟಸ್ವಾಮಿ ವಿರುದ್ಧ ಕೇಳಿಬಂದಿದ್ದ ಆರೋಪಗಳು

ಸಾಲದ ಸುಳಿಗೆ ಸಿಲುಕಿದ್ದ ನಗರದ ಉದ್ಯಮಿ ಕುಮಾರ್‌ ಎಂಬುವರು ತಮ್ಮ ಸಾವಿಗೆ ಮಳವಳ್ಳಿ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಸಿ.ಪುಟ್ಟಸ್ವಾಮಿ ಅವರೇ ಕಾರಣ ಎಂದು 2016ರ ಡಿ.27ರಂದು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಜಾತಿನಿಂದನೆ ಮಾಡಿದ್ದರೆಂದು ಪುರಸಭೆ ಅಂದಿನ ಅಧ್ಯಕ್ಷೆ ಸಾವಿತ್ರಿಕುಮಾರಿ 2016ರ ಮಾ.16ರಂದು ದೂರು ದಾಖಲಿಸಿದ್ದರು. ಅಧ್ಯಕ್ಷರ ಕೊಠಡಿಗೆ ತೆರಳಿದ ತಮ್ಮನ್ನು ಅಧಿಕಾರಿ ಪುಟ್ಟಸ್ವಾಮಿ ಅವಾಚ್ಯಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದರೆಂದು ಸದಸ್ಯ ಚಿಕ್ಕರಾಜು ಕೂಡ ದೂರು ಸಲ್ಲಿಸಿದ್ದರು.

2016ರ ಏ.25ರಂದು ಗುತ್ತಿಗೆದಾರ ಮಂಜುನಾಥ್‌ ಇಎಂಡಿ ಹಣದ ಜೊತೆಗೆ ಸ್ನೇಹಿತರ ಚೆಕ್‌ ಕೇಳಲು ಹೋಗಿದ್ದ ಸಮಯದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ರಿಯಾಜಿನ್‌ ಮತ್ತವರ ಬೆಂಬಲಿಗರು ಅಟ್ಟಾಡಿಸಿ ಹಲ್ಲೆ ಮಾಡಿದ್ದರೆಂದು ಆರೋಪಿಸಲಾಗಿತ್ತು. ಈ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಎಲ್ಲಾ ದೂರುಗಳ ಹಿನ್ನೆಲೆಯಲ್ಲಿ ಸಿ.ಪುಟ್ಟಸ್ವಾಮಿ ಅವರನ್ನು 2016ರ ಮೇ 6ರಂದು ಜಿಲ್ಲಾಧಿಕಾರಿಯಾಗಿದ್ದ ಡಾ.ಅಜಯ್‌ ನಾಗಭೂಷಣ್‌ ಅಮಾನತುಗೊಳಿಸಿದ್ದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ