ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ಆರಾಧ್ಯ ದೈವ ಲೋಕೇಶ್ವರ ಜಾತ್ರಾ ಮಹೋತ್ಸವ ಮಾ.೫ ರಿಂದ ಮಾ.೧೩ರವರೆಗೆ ಆಚರಿಸುವ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ರಾಕೇಶ ಬಗಲಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಸುತ್ತಮುತ್ತಲಿನ ಗ್ರಾಮದ ಗಣ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.ಪಟ್ಟಣದ ಲೋಕೇಶ್ವರ ದೇವಸ್ಥಾನ ಪುರಾತನ ದೇವಸ್ಥಾನದಲ್ಲಿ ಒಂದಾಗಿದ್ದು, ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಜನ ಆಗಮಿಸುತ್ತಾರೆ. ಪಟ್ಟಣ ಪಂಚಾಯತಿ, ಪೋಲಿಸ್ ಇಲಾಖೆ, ಹೆಸ್ಕಾಂ ಅಧಿಕಾರಿಗಳು, ಭಕ್ತರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮುಖಂಡ ಲೋಕಣ್ಣ ಕತ್ತಿ ಮನವಿ ಮಾಡಿದರು.
ಜಾತ್ರೆಯ ಸಮಯದಲ್ಲಿ ಯಾವುದೇ ರೀತಿಯ ವಿದ್ಯುತ್ ಅವಘಡ, ಲೈಟಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆಯಾಗದಂತೆ ಹೆಸ್ಕಾಂ ಸಿಬ್ಬಂದಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಿ, ಜಾತ್ರೆ ಸಮಯದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ೨೪*೭ ನಿಗಾವಹಿಸಲು ಸೂಚನೆ ನೀಡಲಾಯಿತು.ಪೊಲೀಸ್ ಸಿಬ್ಬಂದಿ ಜಾತ್ರೆಯ ಸಮಯದಲ್ಲಿ ಬೆಳಗಾವಿ-ರಾಯಚೂರು ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ನಿಗಾವಹಿಸುವುದು, ವ್ಯವಸ್ಥಿತವಾಗಿ ಪಾರ್ಕಿಂಗ್ ನಿರ್ವಹಣೆ ಮಾಡಲು ಸಿಬ್ಬಂದಿ ನಿಯೋಜನೆ ಮಾಡಬೇಕೆಂದು ಅಂಜುಮನ್ ಕಮಿಟಿ ಅಧ್ಯಕ್ಷ ಅಲ್ಲಾಸಾಬ ಯಾದವಾಡ ಮನವಿ ಮಾಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಅಂಗಡಿಕಾರರು ಮತ್ತು ಮಾಲೀಕರಿಗೆ ಜಾತ್ರೆಯ ಸಮಯದಲ್ಲಿ ಸ್ವಚ್ಛತೆ ಕಾಪಾಡಲು ತಿಳಿಸಲಾಯಿತು. ಜಾತ್ರೆಯ ಸಮಯದಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಪೋಲಿಸ್ ಇಲಾಖೆ ಸನ್ನದ್ಧವಾಗಿದೆ. ಜಾತ್ರೆಗೆ ಬಂದ ಭಕ್ತರು ಪೊಲೀಸ್ ಇಲಾಖೆ ಸಿಬ್ಬಂದಿಯೊಂದಿಗೆ ಸಹಕರಿಸಲು ಪಿಎಸ್‌ಐ ರಾಕೇಶ ಬಗಲಿ ಮನವಿ ಮಾಡಿದರು.ಜಾತ್ರೆ ಸಮಯದಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಗುಂಪು ಗುಂಪಾಗಿ ಸೇರಿದ ಮಹಿಳೆಯರಲ್ಲಿ ಕಳ್ಳತನ ಹೆಚ್ಚುತ್ತಿವೆ. ಎಲ್ಲರೂ ಎಚ್ಚರಿಕೆಯಿಂದ ಇರಲು ಸೂಚಿಸಿದರು. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ ಜಾತ್ರೆ ಯಶಸ್ವಿಗೆ ಎಲ್ಲರೂ ಒಗ್ಗಟ್ಟಾಗಿ ಜಾತ್ರೆ ಆಚರಿಸೋಣ ಎಂದು ಲೋಕೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷ ಪ್ರಕಾಶ ಚುಳಕಿ ಹೇಳಿದರು.
ಸಭೆಯಲ್ಲಿ ಮುಖಂಡರಾದ ಯಮನಪ್ಪ ಹೊರಟ್ಟಿ, ಪರಮಾನಂದ ಟೊಪಣ್ಣವರ, ವಿನೋದ ಘೋರ್ಪಡೆ, ಗುಲಾಬಸಾಬ ಅತ್ತಾರ, ಕಾಶಲಿಂಗ ಮಾಳಿ, ಗೋವಿಂದಪ್ಪ ಕೌಲಗಿ, ಅಶೋಕ ದೊಡಮನಿ, ಪೋಲಿಸ್ ಸಿಬ್ಬಂದಿ ಎಸ್.ಎಸ್. ಗಂಗಾಯಿ, ಬಿ.ಜಿ. ಅಂಗಡಿ, ಜಿ.ಎಂ. ಕ್ಯಾತನ, ವಿಶ್ವನಾಥ ನಡುಮನಿ, ಆರ್.ಎಲ್.ಬಿ ಪಾಟೀಲ ಹಾಗೂ ಸ್ಥಳೀಯ ಮುಖಂಡರು, ಲೋಕೇಶ್ವರ ಜಾತ್ರಾ ಕಮಿಟಿ ಪದಾಧಿಕಾರಿಗಳು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.