ಸಿದ್ದು ಚಿಕ್ಕಬಳ್ಳೇಕೆರೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ನಡೆಯುತ್ತಿದ್ದ ವ್ಯಾಪಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕೂಲಿಕಾರರ ಫೇಸ್ ಅಥೆಂಟಿಫಿಕೇಷನ್ (ಮುಖ ಗುರುತು ಸೆರೆ ಹಿಡಿಯುವ ವ್ಯವಸ್ಥೆ) ಕಡ್ಡಾಯ ಮಾಡುವ ಯೋಜನೆ ಏ.1ರಿಂದಲೇ ಜಾರಿಗೆ ಬರುವುದು ಅನುಮಾನವಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಏ.1ರಿಂದಲೇ ರಾಜ್ಯದಲ್ಲಿ ನರೇಗಾ ಯೋಜನೆಯಡಿ ನಡೆಯುವ ಸಮುದಾಯ(ಕಮ್ಯೂನಿಟಿ) ಕೆಲಸಗಳಲ್ಲಿ ಕಾರ್ಯ ನಿರ್ವಹಿಸುವವರ ಫೇಸ್ ಅಥೆಂಟಿಫಿಕೇಷನ್ ಬಳಸಿ ಹಾಜರಾತಿ ಪಡೆಯಬೇಕಿತ್ತು.
ಇದಕ್ಕಾಗಿ ಈಗಾಗಲೇ ಹಲವೆಡೆ ಪ್ರಾಯೋಗಿಕ ಪರೀಕ್ಷೆಯನ್ನೂ ನಡೆಸಲಾಗಿತ್ತು. ಆದರೆ ಕೆಲ ತಾಂತ್ರಿಕ ಕಾರಣಗಳಿಂದಾಗಿ ಸದ್ಯಕ್ಕೆ ಯೋಜನೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
‘ನರೇಗಾ ಯೋಜನೆಯಲ್ಲಿ, ಅದರಲ್ಲೂ ವೈಯಕ್ತಿಕ ಕೆಲಸ ಹೊರತುಪಡಿಸಿ ಸಮುದಾಯದ ಕಾಮಗಾರಿಗಳಲ್ಲಿ ಜೆಸಿಬಿ ಸೇರಿದಂತೆ ಯಂತ್ರಗಳನ್ನು ಬಳಸಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗುತ್ತಿದೆ.
ಯಂತ್ರಗಳನ್ನು ಬಳಸಿದರೂ ಸ್ಥಳೀಯ ಅಧಿಕಾರಿಗಳು ಶಾಮೀಲಾಗಿ ಕಾರ್ಮಿಕರಿಂದಲೇ ಕೆಲಸ ನಿರ್ವಹಿಸಿದಂತೆ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂಬ ಆರೋಪ ಕೇಳಿಬಂದಿತ್ತು.
ಎನ್‌ಎಂಎಂಎಸ್ ಹಾಜರಾತಿಯಲ್ಲೂ ಅಕ್ರಮ: ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2023ರ ಜನವರಿಯಿಂದ ಎನ್‌ಎಂಎಂಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂ) ಆ್ಯಪ್‌ನಲ್ಲಿ ಪ್ರತಿ ದಿನವೂ ಬೆಳಿಗ್ಗೆ ಮತ್ತು ಸಂಜೆ ಕೆಲಸಗಾರರ ಫೋಟೋ ತೆಗೆದು ಅಪ್‌ಲೋಡ್ ಮಾಡುವುದನ್ನು ಕಡ್ಡಾಯ ಮಾಡಿತ್ತು.
ಈ ಫೋಟೋಗಳಲ್ಲಿ ಕೆಲಸದ ಪ್ರದೇಶ ಮತ್ತು ಸಮಯ ನಮೂದಿಸಬೇಕಿತ್ತು. ಆದರೆ ಇದರಲ್ಲೂ ಅವ್ಯವಹಾರ ನಡೆಸಲು ಅವಕಾಶವಿತ್ತು.
‘ಯಂತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು ಪ್ರತಿ ದಿನವೂ ಜನರು ಕೆಲಸ ಮಾಡುತ್ತಿರುವ ಫೋಟೋ ತೆಗೆದುಕೊಳ್ಳುವುದಿಲ್ಲ. ಕಾಮಗಾರಿ ಪೂರ್ಣಗೊಂಡ ಬಳಿಕ ಕಾರ್ಮಿಕರನ್ನು ಕೆಲಸದ ಸ್ಥಳದಲ್ಲಿ ನಿಲ್ಲಿಸಿ ಫೋಟೋ ತೆಗೆಯಲಾಗುತ್ತದೆ.
ಮತ್ತೆ ಕೆಲವೆಡೆ, ಕೈಗೆ ಸಿಕ್ಕವರನ್ನು ಕರೆದುಕೊಂಡು ಹೋಗಿ ಕೂಲಿಕಾರರಂತೆ ಫೋಟೋ ತೆಗೆಸಿ ಭ್ರಷ್ಟಾಚಾರ ನಡೆಸುತ್ತಾರೆ’ ಎಂಬ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಫೇಸ್ ಅಥೆಂಟಿಫಿಕೇಷನ್‌ಗೆ ಅವಕಾಶ ಕಲ್ಪಿಸಿದ್ದು, ಕೆಲಸದ ಸ್ಥಳದಲ್ಲಿ ಕಾರ್ಯನಿರ್ವಹಿಸುವವರ ಫೋಟೋ ತೆಗೆದು ಆಧಾರ್ ಮಾಹಿತಿ ಆಧರಿಸಿ ನೈಜ ಕಾರ್ಮಿಕರ ಆಧಾರ್‌ಗೆ ಲಿಂಕ್ ಆಗಿರುವ ಖಾತೆಗೆ ಕೂಲಿ ಹಣ ಸಂದಾಯವಾಗುವ ಯೋಜನೆಗೆ ಚಿಂತನೆ ನಡೆಸಿತ್ತು.
ಈ ನಿಟ್ಟಿನಲ್ಲಿ ರಾಜ್ಯದ ಹಲವೆಡೆ ಪ್ರಾಯೋಗಿಕವಾಗಿ ಪರಿಶೀಲನೆಯನ್ನೂ ನಡೆಸಲಾಗಿತ್ತು. ಹೊಸ ಪ್ರಯೋಗವಾಗಿರುವುದರಿಂದ ವ್ಯಾಪಕ ಚರ್ಚೆ ನಡೆಯಬೇಕು.
ಸಾಧಕ-ಬಾಧಕಗಳ ಪರಿಶೀಲನೆಯಾಗಬೇಕು. ಮತ್ತೊಂದೆಡೆ, ಲೋಕಸಭಾ ಚುನಾವಣೆಯೂ ಇರುವುದರಿಂದ ಸದ್ಯಕ್ಕೆ ಫೇಸ್ ಅಥೆಂಟಿಫಿಕೇಷನ್ ಮೂಲಕ ಕೆಲಸ ದೃಢೀಕರಿಸುವ ಕಾರ್ಯ ಒಂದಷ್ಟು ದಿನ ಮುಂದಕ್ಕೆ ಹೋಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.
ಕೋಟ್: ಏಕಪಕ್ಷೀಯ ನಿರ್ಧಾರ ಬೇಡ: ನರೇಗಾದಡಿ ಪ್ರಾಯೋಗಿಕವಾಗಿ ಕೆಲವೆಡೆ ಫೇಸ್ ಅಥೆಂಟಿಫಿಕೇಷನ್ ಕೈಗೊಂಡು ಪರೀಕ್ಷಿಸಲಾಗಿದೆ. ಕೇಂದ್ರ ಸರ್ಕಾರ ನೂತನ ತಂತ್ರಜ್ಞಾನ ಬಳಸುವುದಕ್ಕೆ ರಾಜ್ಯದ ವಿರೋಧವಿಲ್ಲ. ಆದರೆ, ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡು ಜನವಿರೋಧಿ ನೀತಿ ಅನುಸರಿಸದಿರಲಿ. - ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ.