ಮಳೆಗಾಗಿ 101 ಕೆಜಿ ಚೀಲ ಹೊತ್ತು ದೀರ್ಘ ದಂಡ ನಮಸ್ಕಾರ

KannadaprabhaNewsNetwork |  
Published : Jun 29, 2026, 02:15 AM IST
ಪೋಟೊ28ಕೆಎಸಟಿ2: ಕುಷ್ಟಗಿ ತಾಲೂಕಿನ ಕವಲ ಬೋದೂರು ಗ್ರಾಮದ ಯುವಕ ಭೀಮನಗೌಡ ಪೋಲಿಸಪಾಟೀಲ ಮಳೆ ಬರಲೆಂದು 101ಕೆಜಿ ಸಜ್ಜೆ ಚೀಲವನ್ನು ಹೊತ್ತುಕೊಂಡು ಧೀರ್ಘದಂಡ ನಮಸ್ಕಾರ ಹಾಕಿದನು. | Kannada Prabha

ಸಾರಾಂಶ

101 ಕೆಜಿ ಚೀಲ ಹೊತ್ತು ದೀರ್ಘ ದಂಡ ನಮಸ್ಕಾರ ಹಾಕುವುದು ದೈಹಿಕವಾಗಿ ಅತ್ಯಂತ ಕಠಿಣವಾದರೂ ಭಕ್ತಿಯಿಂದ ಅದನ್ನು ಪೂರ್ಣಗೊಳಿಸಿದ ಯುವಕನಿಗೆ ಗ್ರಾಮಸ್ಥರು ಮೆಚ್ಚುಗೆ

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ತಾಲೂಕಿನ ಕವಲ ಬೋದೂರು ಗ್ರಾಮದ 21 ವರ್ಷದ ಭೀಮನಗೌಡ ಪೊಲೀಸ್‌ಪಾಟೀಲ್‌ ಎಂಬ ಯುವಕ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂಬ ಸಂಕಲ್ಪದೊಂದಿಗೆ 101 ಕೆಜಿ ಭಾರದ ಸಜ್ಜೆ ಚೀಲ ಭುಜದ ಮೇಲೆ ಹೊತ್ತು ಗ್ರಾಮದ ದೇವಸ್ಥಾನಗಳಿಗೆ ದೀರ್ಘ ದಂಡ ನಮಸ್ಕಾರ ಹಾಕುತ್ತಾ ಹರಕೆ ತೀರಿಸಿದ್ದಾರೆ.

ಬೆಳಗ್ಗೆಯಿಂದಲೇ ಹರಕೆ ಆರಂಭಿಸಿದ ಯುವಕ, ಗ್ರಾಮದ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಪ್ರತಿ ಹೆಜ್ಜೆಯಲ್ಲೂ ದೀರ್ಘ ದಂಡ ನಮಸ್ಕಾರ ಸಲ್ಲಿಸುತ್ತಾ ಭಕ್ತಿಭಾವದಿಂದ ದೇವರ ದರ್ಶನ ಪಡೆದು ಉತ್ತಮ ಮಳೆಯಾಗಿ ಬತ್ತಿದ ಹೊಲಗಳು ಹಸಿರಿನಿಂದ ಕಂಗೊಳಿಸಲಿ, ರೈತರ ಕಷ್ಟ ದೂರವಾಗಲಿ, ಜಾನುವಾರುಗಳಿಗೆ ಮೇವು-ನೀರಿನ ಕೊರತೆ ನಿವಾರಣೆಯಾಗಲಿ ಎಂಬ ಪ್ರಾರ್ಥನೆ ಸಲ್ಲಿಸಿದ್ದಾರೆ.

ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ರೈತರು ಆತಂಕದಲ್ಲಿದ್ದಾರೆ. ಬಿತ್ತನೆ ಮಾಡಿದ ಬೆಳೆ ಮಳೆಯ ನಿರೀಕ್ಷೆಯಲ್ಲಿದ್ದು, ರೈತರಲ್ಲಿ ಚಿಂತೆ ಮನೆ ಮಾಡಿದೆ. ಇದೇ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಪೂಜೆ, ಹರಕೆ, ಭಜನೆ, ದಂಡ ನಮಸ್ಕಾರ, ಮಳೆ ಪ್ರಾರ್ಥನೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ.

101 ಕೆಜಿ ಚೀಲ ಹೊತ್ತು ದೀರ್ಘ ದಂಡ ನಮಸ್ಕಾರ ಹಾಕುವುದು ದೈಹಿಕವಾಗಿ ಅತ್ಯಂತ ಕಠಿಣವಾದರೂ ಭಕ್ತಿಯಿಂದ ಅದನ್ನು ಪೂರ್ಣಗೊಳಿಸಿದ ಯುವಕನಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ ಹುಣ್ಣಿಮೆ ಹಿನ್ನೆಲೆಯಲ್ಲಿ ಗ್ರಾಮದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಆರತಿ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆದವು. ಮಹಿಳೆಯರು, ಯುವಕರು ಹಾಗೂ ಹಿರಿಯರು ದೇವರ ದರ್ಶನ ಪಡೆದು ಉತ್ತಮ ಮಳೆಯಾಗಿ ರೈತರ ಬದುಕು ಸಮೃದ್ಧಿಯಾಗಲೆಂದು ಪ್ರಾರ್ಥಿಸಿದರು.

ಮಳೆಯಿಲ್ಲದೆ ರೈತರು ಆತಂಕದಲ್ಲಿದ್ದಾರೆ. ರೈತರ ಕಷ್ಟ ನಿವಾರಣೆಯಾಗಿ ಭೂಮಿ ಹಸಿರಾಗಬೇಕು ಎಂಬ ಉದ್ದೇಶದಿಂದ 101 ಕೆಜಿ ಚೀಲ ಹೊತ್ತು ದೇವರಿಗೆ ಹರಕೆ ಸಲ್ಲಿಸಿದ್ದೇನೆ. ದೇವರ ಆಶೀರ್ವಾದದಿಂದ ಉತ್ತಮ ಮಳೆಯಾಗಿ ಅನ್ನದಾತನ ಬದುಕು ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ದೀರ್ಘದಂಡ ನಮಸ್ಕಾರ ಹಾಕಿದ ಯುವಕ ಭೀಮನಗೌಡ ಪೊಲೀಸ್‌ಪಾಟೀಲ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾಸ್ಪತ್ರೆಗೆ ಇರುವುದು ಒಂದೇ ಆ್ಯಂಬುಲೆನ್ಸ್
ಹೊರಗುತ್ತಿಗೆ ನೌಕರರ ನೂತನ ಕನಿಷ್ಠ ವೇತನ ಆದೇಶ ತಕ್ಷಣ ಜಾರಿಗೊಳಿಸಲು ಆಗ್ರಹ