ಧಾರವಾಡ: ಸಾಮಾನ್ಯವಾಗಿ ಹೊಸ ಸಿನಿಮಾಗಳ ವಿಶೇಷ (ಪ್ರಿಮಿಯರ್) ಪ್ರದರ್ಶನಗಳನ್ನು ಬೆಂಗಳೂರು ಹಾಗೂ ಮೈಸೂರು ನಗರದಲ್ಲಿ ಏರ್ಪಡಿಸುವುದು ವಾಡಿಕೆ. ಆದರೆ, ಡಿ ಕ್ರಿಯೇಶನ್ಸ್ ವತಿಯಿಂದ ನಿರ್ಮಾಣವಾಗಿರುವ ''''ದೂರ ತೀರ ಯಾನ'''' ಹೊಸ ಕನ್ನಡ ಸಿನಿಮಾದ ಪ್ರಿಮಿಯರ್ ಶೋ ಅನ್ನು ಜುಲೈ 9ರಂದು ಇಲ್ಲಿನ ಪದ್ಮಾ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದೆ.
ಈ ಕುರಿತು ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರದ ನಿರ್ಮಾಪಕ ದೇವರಾಜ್ ಆರ್. ಹಾಗೂ ನಿರ್ದೇಶಕ ಮಂಸೋರೆ, ಇಷ್ಟು ವರ್ಷಗಳ ಕಾಲ ಚಿತ್ರರಂಗವನ್ನು ಬರೀ ದಕ್ಷಿಣ ಕರ್ನಾಟಕ ಮಾತ್ರ ಬೆಳೆಸಿಲ್ಲ. ಉತ್ತರ ಕರ್ನಾಟಕದ ಪಾತ್ರ ಸಾಕಷ್ಟಿದೆ. ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ಉತ್ತರ ಕರ್ನಾಟಕ ನೀಡಿದ ಕೊಡುಗೆಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪ್ರಿಮಿಯರ್ ಶೋ ಹಮ್ಮಿಕೊಂಡಿದ್ದೇವೆ. ಜತೆಗೆ ಬೇಂದ್ರೆ ಅಜ್ಜನವರ ಪ್ರಮುಖ ಕಾವ್ಯದ ಒಂದು ಸಾಲಿನಿಂದ ಸ್ಪೂರ್ತಿ ಪಡೆದು ದಕ್ಷಿಣ ದ್ರುವದಿಂ ಉತ್ತರ ದ್ರುವಕೂ ಎಂಬ ಘೋಷ ವಾಕ್ಯದ ಅಡಿ ಪ್ರಚಾರ ಸಹ ನಡೆಸುತ್ತಿದ್ದೇವೆ. ಚಿತ್ರವು ಜುಲೈ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದರು.ಪ್ರೀತಿ ಎಂದರೆ ಬರೀ ಆಕರ್ಷಣೆ, ಮದುವೆ ಅಲ್ಲ. ಪ್ರೀತಿಗೆ ಬೇರೆ ಬೇರೆ ಅರ್ಥಗಳಿದ್ದು ಅಂತಹ ಪ್ರೀತಿ ಹುಡುಕುವ ಕಥೆ ಇದಾಗಿದೆ. ಪ್ರವಾಸ ಮಾಡುತ್ತಲೇ ಪ್ರೀತಿ ಹಾಗೂ ತಮಗಿರುವ ಜವಾಬ್ದಾರಿಗಳನ್ನು ಹೇಗೆ ನಿಬಾಯಿಸುತ್ತಾರೆ ಎಂಬುದು ಚಿತ್ರಕಥೆ. ಪ್ರಸ್ತುತ ಪ್ರೀತಿ ಹೆಸರಿನಲ್ಲಿ ನಡೆಯುತ್ತಿರುವ ಕೊಲೆ- ದೌರ್ಜನ್ಯ, ದುಃಖದ ಬದಲು ಪ್ರೀತಿಯು ಖುಷಿ ಕೊಡುವಂತೆ ಇರಬೇಕು ಎಂಬುದು ನಮ್ಮ ಆಶಯ. ಬೆಂಗಳೂರು, ಉಡುಪಿ, ಗೋಕರ್ಣ ಸೇರಿದಂತೆ ರಾಜ್ಯ ವಿವಿಧೆಡೆ ಚಿತ್ರೀಕರಣವಾಗಿದ್ದು, ಆರು ಹಾಡುಗಳಿವೆ. ವಿಜಯಕೃಷ್ಣ ಚಿತ್ರದ ನಾಯಕ ನಟನಾಗಿದ್ದು, ಪ್ರಿಯಾಂಕ ಕುಮಾರ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಶೃತಿ ಹರಿಹರನ್ ಸೇರಿದಂತೆ ಇತರೆ ಕಲಾವಿದರು ಇದ್ದಾರೆ ಎಂದರು.
ಈಗಾಗಲೇ ಡಿ, ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆಯೊಂದಿಗೆ ಆಕ್ಟ್ 1978 ಹಾಗೂ 19-20-21 ಚಿತ್ರ ನಿರ್ಮಿಸಿದ್ದು ದೂರ ತೀರ ಯಾನ ಮೂರನೇ ಸಿನೆಮಾ. ಇಲ್ಲಿಯ ವರೆಗೂ ಮಾಡಿರುವ ಸಿನೆಮಾಗಳಿಗಿಂತ ವಿಭಿನ್ನವಾದ ಸವಾಲಿನ, ಹೊಸ ತಲೆಮಾರಿನ ಪ್ರೇಮ ಕಥೆಯ ಸಿನೆಮಾ ಇದು ಎಂದು ನಿರ್ದೇಶಕ ಮಂಸೋರೆ ಹೇಳಿದರು.