- ಭಗವಾನ್ ಶ್ರೀ ಮಹಾವೀರ ಜಯಂತಿ ಆಚರಣೆ
ಜಗತ್ತು ಎದುರಿಸುತ್ತಿರುವ ಸಮಸ್ಯೆಗೆ ಭಗವಾನ್ ಮಹಾವೀರರ ಸಂದೇಶ ಒಂದೇ ಪರಿಹಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಆಚರಣೆಯಲ್ಲಿ ಮಾತನಾಡಿ ಭಗವಾನ್ ಮಹಾವೀರರು ಜಗತ್ತನ್ನು ಗೆಲ್ಲಲು ಹೋಗಲಿಲ್ಲ, ಬದಲಾಗಿ ತನ್ನನ್ನು ತಾನು ಗೆದ್ದು ’ಜಿತೇಂದ್ರಿಯ‘ರಾದವರು. ಇಂದಿನ ದಿನಗಳಲ್ಲಿ ಮತ ಸಂಪ್ರದಾಯಗಳನ್ನು ಧರ್ಮ ಎಂದು ತಪ್ಪಾಗಿ ಗುರುತಿಸಲಾಗುತ್ತಿದೆ. ಹಿಂಸೆಗೆ ಪ್ರಚೋದನೆ ನೀಡುವಂತಹದ್ದು ಧರ್ಮವಾಗಲು ಸಾಧ್ಯವಿಲ್ಲ. ಪರರ ಆಸ್ತಿ ಕಬಳಿಸುವುದು ಅಧರ್ಮವೇ ಹೊರತು ಧರ್ಮವಲ್ಲ. ಧರ್ಮ ಎನ್ನುವುದು ಕರ್ತವ್ಯ ಮತ್ತು ಕಾಲಧರ್ಮಕ್ಕೆ ಅನುಗುಣವಾಗಿರಬೇಕು ಎಂದು ಹೇಳಿದರು.
ಜಗತ್ತಿಗೆ ಭಾರತೀಯ ಚಿಂತನೆಗಳು ಹಾಗೂ ಭಾರತೀಯ ದೃಷ್ಟಿಕೋನ ಮಾತ್ರ ಶಾಂತಿ ನೀಡಬಲ್ಲುದು. ಏಕೆಂದರೆ ಜಗತ್ತಿಗೆ ಮಹಾವೀರರನ್ನು, ಬುದ್ಧನನ್ನು ನೀಡಿದ್ದು ನಾವು. ವಿಶ್ವ ಒಂದು ಕುಟುಂಬ, ಅಣುರೇಣು ತೃಣಕಾಷ್ಠಗಳಲ್ಲಿ ದೇವರನ್ನು ಕಾಣು ಎಂದು ಹೇಳಿದ್ದು ನಾವು. ದೇವರು ಎಲ್ಲದರಲ್ಲೂ ಇದ್ದಾನೆ ಎಂದು ಹೇಳಿದ್ದು ನಾವು. ಈ ಹಿನ್ನೆಲೆಯಲ್ಲಿ ನಮ್ಮ ಧರ್ಮ, ಚಿಂತನೆ ಗಳು ಶ್ರೇಷ್ಠ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಂದ್ರ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಎ.ಎನ್. ಮಹೇಶ್, ವಿಶ್ವಕ್ಕೆ ಅಹಿಂಸೆ ಮತ್ತು ಶಾಂತಿಯ ಪರಮೋಚ್ಚ ಸಂದೇಶ ನೀಡಿದ ಭಗವಾನ್ ಮಹಾವೀರರ ತತ್ವಗಳು ಇಂದಿನ ಸಂಘರ್ಷ ಮಯ ಕಾಲಘಟ್ಟದಲ್ಲಿ ಇಡೀ ವಿಶ್ವಕ್ಕೆ ಮಾದರಿ ಎಂದು ಹೇಳಿದರು.ಇಂದು ವಿಶ್ವದಾದ್ಯಂತ ಯುದ್ಧದ ಕಾರ್ಮೋಡ ಕವಿದಿದೆ. ಮಧ್ಯಪ್ರಾಚ್ಯ ದೇಶಗಳು ಸೇರಿದಂತೆ ಹಲವೆಡೆ ಸಂಘರ್ಷಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಭಾರತ ವಿವಿಧ ಧರ್ಮ, ವರ್ಗಗಳ ನಡುವೆಯೂ ಸ್ನೇಹ ಮತ್ತು ಸೌಹಾರ್ದತೆಯಿಂದ ಬಾಳುತ್ತಿದೆ ಎಂದರೆ ಅದಕ್ಕೆ ಮಹಾವೀರರಂತಹ ಮಹಾಪುರುಷರು ಹಾಕಿಕೊಟ್ಟ ಅಹಿಂಸೆ ಅಡಿಪಾಯವೇ ಕಾರಣ ಎಂದರು.ಜೈನ ಸಮುದಾಯದ ಜನಸಂಖ್ಯೆ ಕಡಿಮೆ ಇದ್ದರೂ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ದೇಶದ ಒಟ್ಟು ಜನಸಂಖ್ಯೆ ಕೇವಲ ಶೇ.1 ರಷ್ಟಿರುವ ಜೈನ ಸಮುದಾಯ ಭಾರತದ ಜಿಡಿಪಿಗೆ ಶೇ. 25 ರಷ್ಟು ಕೊಡುಗೆ ನೀಡುತ್ತಿ ರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.ಕನ್ನಡ ಸಾಹಿತ್ಯಕ್ಕೆ ಪಂಪ, ರನ್ನ, ಪೊನ್ನ ಮತ್ತು ಜನ್ನರಂತಹ ರತ್ನಗಳನ್ನು ನೀಡಿದ ಕೀರ್ತಿ ಈ ಸಮುದಾಯಕ್ಕೆ ಸಲ್ಲುತ್ತದೆ. ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿಗ್ರಹ ಸೇರಿದಂತೆ ದೇಶದಾದ್ಯಂತ ಇರುವ ಜೈನ ಮಂದಿರ ಅದ್ಭುತ ವಿನ್ಯಾಸ ಮತ್ತು ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿವೆ ಎಂದರು.
ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿದರು. ಉಪ ತಹಸೀಲ್ದಾರ್ ರಾಮರಾವ್ ದೇಸಾಯಿ, ಜೈನ ಸಮಾಜದ ಪ್ರಮುಖರಾದ ಜಿನೇಂದ್ರ ಬಾಬು, ಚಾರಿತ್ರ್ಯ, ಕಾಂತಿಲಾಲ್ ಜೈನ್, ಗೌತಮ್ ಚಂದ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಗೀತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಇದ್ದರು.