ಅಹಿಂಸಾ ತತ್ವದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾ ಪುರುಷ ಭಗವಾನ್ ಮಹಾವೀರ: ಕೆ.ಎಂ.ಶಿವಪ್ಪ

KannadaprabhaNewsNetwork | Published : Apr 11, 2025 12:32 AM

ಸಾರಾಂಶ

ಜೈನ ಧರ್ಮ ಸಮಷ್ಠಿ ಪ್ರಜ್ಞೆಯಿಂದ ಹುಟ್ಟಿದ್ದು, ಆದಿ ತೀರ್ಥಂಕರ ವೃಷಬದೇವನಬಿಂದ ಮಹಾವೀರರ ವರೆಗೆ 24 ಜನ ತೀರ್ಥಕರರು ಕಾಲಕಾಲಕ್ಕೆ ಮಾನವ ಕುಲದ ಅಗತ್ಯತೆಗಳಿಗೆ ತಕ್ಕಂತೆ ಜೈನ ಧರ್ಮವನ್ನು ಸುಧಾರಿಸಿ ಮಾನವ ಧರ್ಮವನ್ನಾಗಿ ರೂಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅಹಿಂಸಾ ತತ್ವದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾ ಪುರುಷ ಭಗವಾನ್ ಮಹಾವೀರ ಎಂದು ತಾಲೂಕು ನಯನಜ ಕ್ಷತ್ರಿಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತ್ಯುತ್ಸವದಲ್ಲಿ ಮಾತನಾಡಿ, ಜೈನ ಧರ್ಮ ಸಮಷ್ಠಿ ಪ್ರಜ್ಞೆಯಿಂದ ಹುಟ್ಟಿದ್ದು, ಆದಿ ತೀರ್ಥಂಕರ ವೃಷಬದೇವನಬಿಂದ ಮಹಾವೀರರ ವರೆಗೆ 24 ಜನ ತೀರ್ಥಕರರು ಕಾಲಕಾಲಕ್ಕೆ ಮಾನವ ಕುಲದ ಅಗತ್ಯತೆಗಳಿಗೆ ತಕ್ಕಂತೆ ಜೈನ ಧರ್ಮವನ್ನು ಸುಧಾರಿಸಿ ಮಾನವ ಧರ್ಮವನ್ನಾಗಿ ರೂಪಿಸಿದ್ದಾರೆ ಎಂದರು.

ಆದಿ ತೀರ್ಥಂಕರ ವೃಷಬದೇವನಿಂದ ಸಂಸ್ಥಾಪಿಸಲ್ಪಟ್ಟ ಜೈನ ಧರ್ಮವನ್ನು ಮತ್ತಷ್ಟು ಸುಧಾರಿಸಿ ವಿಸ್ತರಿಸಿದ ಕೀರ್ತಿ 24 ನೇ ತೀರ್ಥಂಕರ ಮಹಾವೀರರಿಗೆ ಸಲ್ಲುತ್ತದೆ. ಕ್ರಿ.ಶ. 599ರಲ್ಲಿ ಇಂದಿನ ಬಿಹಾರ ರಾಜ್ಯದಲ್ಲಿ ರಾಜ ಸಿದ್ಧಾರ್ಥ ಮತ್ತು ತ್ರಿಶಲಾ ದೇವಿಯವರ ಪುತ್ರನಾಗಿ ಜನಿಸಿದ ಮಹಾವೀರರು ತಮ್ಮ 28ನೇ ವಯಸ್ಸಿನಲ್ಲಿ ಜಿನ ದೀಕ್ಷೆಯನ್ನು ಪಡೆದು ಮಾನವ ಕುಲದ ಉದ್ದಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು. ವೈಭವದ ರಾಜತ್ವವನ್ನು ತ್ಯಜಿಸಿ ಸಮಾಜದ ಒಳಿತಿಗೆ ಚಿಂತಿಸಿದರು ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ನಂತರ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ಅಗ್ನಿ ಶಾಮಕ ಅಧಿಕಾರಿ ಚಂದ್ರಶೇಖರ್, ಆರೋಗ್ಯ ಪರಿವೀಕ್ಷಕ ಶೀಳನೆರೆ ಸತೀಶ್, ಕಂದಾಯ ಇಲಾಖೆ ಅಮೃತ್ ರಾಜ್, ತಾಲೂಕು ಮಾರ್ವಾಡಿ ಸಮುದಾಯದ ಮುಖಂಡ ರೋಷನ್ ಸೇರಿದಂತೆ ಹಲವರಿದ್ದರು.

ಶ್ರದ್ಧಾಭಕ್ತಿಯಿಂದ ಭಗವಾನ್ ಮಹಾವೀರ ಜಯಂತಿ ಆಚರಣೆ

ಮದ್ದೂರು:

ಭಗವಾನ್ ಮಹಾವೀರ ಜಯಂತಿಯನ್ನು ಜೈನ ಸಮುದಾಯದವರು ಪಟ್ಟಣದಲ್ಲಿ ಗುರುವಾರ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಕೋಟೆ ಬೀದಿ ಶ್ರೀಮಹಾವೀರ ಜೈನ ದೇಗುಲದಲ್ಲಿ ಮಹಾವೀರ ಜಯಂತಿ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ನಂತರ ಅಲಂಕೃತ ಬೆಳ್ಳಿ ಸಾರೋಟಿನಲ್ಲಿ ಶ್ರೀಮಹಾವೀರರ ಭಾವಚಿತ್ರವನ್ನು ಪ್ರತಿಷ್ಠಾಪನೆ ಮಾಡಿ ಮೆರವಣಿಗೆ ನಡೆಸಲಾಯಿತು.

ಮಾರ್ಗದುದ್ದಕ್ಕೂ ಮಹಿಳೆಯರು ಸೇರಿದಂತೆ ಜೈನ ಸಮುದಾಯದ ಜನರು ಭಗವಾನ್ ಮಹಾವೀರರ ನಾಮಸ್ಮರಣೆ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು. ನಂತರ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದ ಗೌತಮ್ ಚಂದ್ ಹಾಗೂ ಭರತ್ ಕುಮಾರ್ ಅವರು, ಭಗವಾನ್ ಮಹಾವೀರರ ಆದರ್ಶ, ಬೋಧನೆ ಮತ್ತು ಅವರ ಕೊಡುಗೆ ನೆನಯುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಶ್ರೀಮಹಾವೀರನ ಜಯಂತಿ ಅಂಗವಾಗಿ ಜೈನ ಸಮುದಾಯದಿಂದ ಅನ್ನ ಸಂತರ್ಪಣೆ ನಡೆಯಿತು. ಸಮುದಾಯದ ಮುಖಂಡರಾದ ಪ್ರಕಾಶ್ ಚಂದ್, ಮದನ್ ಲಾಲ್, ಸಂಪತ್ ಲಾಲ್, ಅಶೋಕ್ ಕುಮಾರ್, ಚಂದನ್ ರಾಂಕ, ಶುಭಂ, ಮಹೇಂದ್ರ ಕುಮಾರ್, ಮಮತಾ ರಂಕ, ಗೀತಾರಾಂಕಾ, ಪ್ರಕಾಶ್ ದೇವಿ ಮತ್ತಿತರು ಪಾಲ್ಗೊಂಡಿದ್ದರು.

Share this article