ಬಳ್ಳಾರಿ: ಜಿಲ್ಲಾಡಳಿತ ವತಿಯಿಂದ ಇಲ್ಲಿನ ತೇರು ಬೀದಿಯ ಶ್ರೀ ಪಾರ್ಶ್ವನಾಥ್ ಭವನದಲ್ಲಿ ಮಂಗಳವಾರ ಭಗವಾನ್ ಮಹಾವೀರ ಜಯಂತಿ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮೇಯರ್ ಪಿ.ಗಾದೆಪ್ಪ ಅವರು ಮಹಾವೀರರು ಜಗತ್ತಿಗೆ ನೀಡಿದ ಶಾಂತಿ ಮತ್ತು ಅಹಿಂಸೆಯ ಸಂದೇಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ ಎಂದು ಹೇಳಿದರು.
ಎಡಿಸಿ ಮಹಮ್ಮದ್ ಝುಬೇರ್ ಮಾತನಾಡಿದರು.ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಆಲಂಬಾಷಾ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು. ಶ್ರೀ ಶಿರಡಿ ಸಾಯಿ ಸೇವಾ ಸತ್ಸಂಗ ಟ್ರಸ್ಟ್ ವತಿಯಿಂದ ಭಕ್ತಿ ಸಂಗೀತ ಪ್ರಸ್ತುತಪಡಿಸಲಾಯಿತು. ಭಗವಾನ್ ಮಹಾವೀರರ ಜಯಂತಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಸಿರುಗುಪ್ಪ: ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕುಂಥುನಾಥ್ ಜೈನ್ ಸಂಘದ ವತಿಯಿಂದ ಭಗವಾನ ಮಹಾವೀರ ಜಯಂತಿಯ ಅಂಗವಾಗಿ ಮಹಾವೀರ ಭಾವಚಿತ್ರಕ್ಕೆ ಮಂಗಳವಾರ ಪೂಜೆ ಸಲ್ಲಿಸಲಾಯಿತು.ಜಯಂತಿ ಅಂಗವಾಗಿ ದಾಸೋಹ, ಶುದ್ಧ ಕುಡಿಯುವ ನೀರಿನ ಅರವಟಿಗೆ, ಗೋ ಶಾಲೆಯ ಹಸುಗಳಿಗೆ ಮೇವು ದಾನ ಮಾಡಲಾಯಿತು. ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಕುಂಥುನಾಥ್ ಜೈನ್ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೈನ್, ಸದಸ್ಯರಾದ ವಿಕ್ರಮ್ ಜೈನ್, ಸುಭಾಷ್ ಜೈನ್, ಸಂತೋಷ ಜೈನ್, ನೀಲೇಜ್ ಜೈನ್, ರಿಶಬ್ ಜೈನ್, ಪ್ರಶಾಂತ ಜೈನ್ ಹಾಗೂ ಜೈನ್ ಸಮುದಾಯದವರು ಭಾಗವಹಿಸಿದ್ದರು.