ಬಳ್ಳಾರಿ: ಧರ್ಮದ ತಿರುಳು ಅರಿತು, ಪರಸ್ಪರ ಗೌರವದಿಂದ ಬದುಕಿದಾಗ ಸಮಾಜದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ಸೋಮಸಮುದ್ರ ಗ್ರಾಮದ ಕೊಟ್ಟೂರು ಸ್ವಾಮಿ ಶಾಖಾ ಮಠದ ಶ್ರೀ ಸಿದ್ಧಲಿಂಗಮಹಾಸ್ವಾಮಿ ತಿಳಿಸಿದರು.
ಎಲ್ಲ ಧರ್ಮಗಳಲ್ಲಿಯೂ ಮಾನವೀಯತೆ, ಪ್ರೀತಿ ಮತ್ತು ಸಹಾನುಭೂತಿ ಎಂಬ ಮೂಲ ಮೌಲ್ಯಗಳು ಅಡಗಿವೆ. ಅವುಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಧರ್ಮ ಎಂದರೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಸಾಧನವಾಗಬೇಕೇ ಹೊರತು, ವಿಭಜನೆಗೆ ಕಾರಣವಾಗಬಾರದು ಎಂದು ಹೇಳಿದರು.
ಯುವಜನತೆ ಧಾರ್ಮಿಕ ಸಹಿಷ್ಣುತೆ ಬೆಳೆಸಿಕೊಳ್ಳಬೇಕು. ಪರಸ್ಪರ ನಂಬಿಕೆ ಮತ್ತು ಗೌರವದಿಂದ ನಡೆದುಕೊಂಡರೆ ದೇಶದ ಏಕತೆ ಮತ್ತಷ್ಟು ಬಲವಾಗುತ್ತದೆ. ಭಾರತ ಮತ್ತಷ್ಟು ಶಕ್ತಿಯುತ ರಾಷ್ಟ್ರವಾಗಿ ಬೆಳೆಯಬೇಕಾದರೆ ಎಲ್ಲ ಸಮುದಾಯಗಳು ಒಗ್ಗೂಡಿ ಐಕ್ಯತೆಯಿಂದ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಶ್ರೀಗಳು ತಿಳಿಸಿದರು.ಕ್ರೈಸ್ತ ಧರ್ಮಗುರು ಐವಾನ್ ಪಿಂಟೋ ಮಾತನಾಡಿ, ಸಂವಿಧಾನ ಚೌಕಟ್ಟಿನಲ್ಲಿ ಮತ ಹಾಗೂ ಧರ್ಮಗಳನ್ನು ಪಾಲಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ದೇಶದ ಏಕತೆ ಮತ್ತು ಸೌಹಾರ್ದ ಕಾಪಾಡಲು ಪ್ರತಿಯೊಬ್ಬ ನಾಗರಿಕನು ಸಂವಿಧಾನದ ಮೌಲ್ಯಗಳನ್ನು ಗೌರವಿಸಬೇಕು. ಧರ್ಮಗಳ ನಡುವೆ ಪರಸ್ಪರ ಗೌರವ ಮತ್ತು ಸಹಿಷ್ಣುತೆ ಬೆಳೆಸಿಕೊಳ್ಳುವುದು ಅತ್ಯವಶ್ಯಕವಾಗಿದ್ದು, ಇದೇ ಸಮಾಜದಲ್ಲಿ ಶಾಂತಿ ಮತ್ತು ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು.
ಜಾತಿ, ಧರ್ಮ, ಭಾಷೆ ಎಂಬ ಹೆಸರಿನಲ್ಲಿ ಉಂಟಾಗುವ ವಿಭಜನೆಗಳನ್ನು ದೂರ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಇವುಗಳನ್ನು ಮೀರಿ ಸಹಬಾಳ್ವೆಯ ಮನೋಭಾವವನ್ನು ಬೆಳೆಸುವುದು ಕಾಲದ ಅಗತ್ಯವಾಗಿದೆ. ಶ್ರೇಷ್ಠತೆ ಎಂಬ ಭ್ರಮೆ ಮಾನವ ಸಂಬಂಧಗಳನ್ನು ದುರ್ಬಲಗೊಳಿಸುತ್ತದೆ. ಅದರಿಂದ ಹೊರಬಂದು ವಿನಯ, ಸಹಾನುಭೂತಿ ಮತ್ತು ಸಹಕಾರದ ಮನೋಭಾವವನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಡಾ. ನಿಷ್ಠಿ ರುದ್ರಪ್ಪ ಪ್ರತಿಪಾದಿಸಿದರು.