ಜಿಲ್ಲೆಯಲ್ಲೂ ಲಾರಿ ಸಂಚಾರ ಸ್ಥಗಿತ

KannadaprabhaNewsNetwork | Published : Apr 16, 2025 12:30 AM

ಸಾರಾಂಶ

ಡೀಸೆಲ್‌, ಟೋಲ್‌ ದರ ಏರಿಕೆ ಹಾಗೂ ಪೊಲೀಸರು, ಆರ್‌ಟಿಓ ಅಧಿಕಾರಿಗಳ ಕಿರುಕುಳ ಖಂಡಿಸಿ ರಾಜ್ಯಾದ್ಯಂತ ಆರಂಭವಾಗಿರುವ ಲಾರಿ ಮುಷ್ಕರದ ಬಿಸಿ ಜಿಲ್ಲೆಯಲ್ಲೂ ತಟ್ಟಿದೆ.

ಕನ್ನಡಪ್ರಭವಾರ್ತೆ ಹಾಸನ

ಡೀಸೆಲ್‌, ಟೋಲ್‌ ದರ ಏರಿಕೆ ಹಾಗೂ ಪೊಲೀಸರು, ಆರ್‌ಟಿಓ ಅಧಿಕಾರಿಗಳ ಕಿರುಕುಳ ಖಂಡಿಸಿ ರಾಜ್ಯಾದ್ಯಂತ ಆರಂಭವಾಗಿರುವ ಲಾರಿ ಮುಷ್ಕರದ ಬಿಸಿ ಜಿಲ್ಲೆಯಲ್ಲೂ ತಟ್ಟಿದೆ.

ರಾಜ್ಯದಲ್ಲಿ ಡೀಸೆಲ್‌ ದರ ಏರಿಕೆ, ಹೆದ್ದಾರಿಗಳಲ್ಲಿ ಟೋಲ್‌ ದರ ಹೆಚ್ಚಳ, ರಾಜ್ಯದ ಗಡಿ ಭಾಗದ ಚೆಕ್‌ ಪೋಸ್ಟ್‌ಗಳಲ್ಲಿ ಆರ್‌ಟಿಓ ಅಧಿಕಾರಿಗಳ ಕಿರುಕುಳ ಹಾಗೂ ಹೆದ್ದಾರಿಗಳಲ್ಲಿ ಪೊಲೀಸರ ಕಿರುಕುಳ ಖಂಡಿಸಿ ರಾಜ್ಯ ಲಾರಿ ಮಾಲೀಕರ ಸಂಘ ಕರೆ ನೀಡಿರುವಂತೆ ಸೋಮವಾರ ನಡು ರಾತ್ರಿಯಿಂದಲೇ ರಾಜ್ಯಾದ್ಯಂತ ಲಾರಿಗಳು ಸಂಚಾರ ನಿಲ್ಲಿಸಿರುವಂತೆ ಜಿಲ್ಲೆಯಲ್ಲಿ ಕೂಡ ಎಲ್ಲಾ ಲಾರಿಗಳು ಸಂಚಾರ ಸ್ಥಗಿತ ಮಾಡಿವೆ. ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಗೂಡ್ಸ್ ಶೆಡ್‌ ಹಾಗೂ ಸಂತೇಪೇಟೆ ಬಳಿ ಲಾರಿಗಳನ್ನು ನೂರಾರು ಸಂಖ್ಯೆಯಲ್ಲಿ ನಿಲ್ಲಿಸಲಾಗಿದೆ. ಹಾಗೆಯೇ ಸರಕು ಸಾಗಣೆ ಮಾಡುತ್ತಿದ್ದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ನೂರಾರು ಲಾರಿಗಳನ್ನು ಕೂಡ ಅವುಗಳ ಚಾಲಕರು ಹೆದ್ದಾರಿಯ ಆಸುಪಾಸು ಹಾಗೂ ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸಿಕೊಂಡಿದ್ದಾರೆ. ಬಹುತೇಕ ಲಾರಿಗಳ ಚಾಲಕ ಹಾಗೂ ನಿರ್ವಾಹಕರು ಲಾರಿಗಳಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂದವು.

ಭಾರೀ ವ್ಯತ್ಯಯದ ಸಾಧ್ಯತೆ:

ಲಾರಿ ಮುಷ್ಕರ ಹೆಚ್ಚು ದಿನಗಳ ಕಾಲ ಮುಂದುವರೆದಿದ್ದೇ ಆದಲ್ಲಿ ನಾಗರೀಕ ಸರಬರಾಜು ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಯವಾಗುವ ಸಾಧ್ಯತೆ ಇದೆ. ಇದರಿಂದ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ತೀವ್ರ ಅಡಚಣೆ ಉಂಟಾಗಲಿದೆ. ಈಗಾಗಲೇ ಲಾರಿ ಮುಷ್ಕರದ ಮುನ್ಸೂಚನೆ ಅರಿತು ಕೆಲ ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗದ ಪೆಟ್ರೋಲ್‌ ಮತ್ತು ಡೀಸೆಲನ್ನು ಪೆಟ್ರೋಲ್‌ ಬಂಕ್‌ ಮಾಲೀಕರು ಒಂದು ಬಾರಿ ತರಿಸಿ ಟ್ಯಾಂಕುಗಳಲ್ಲಿ ದಾಸ್ತಾನು ಮಾಡಿಕೊಂಡಿದ್ದಾರೆ. ಆದರೆ, ಮುಷ್ಕರ ಎರಡು ದಿನ ಮುಂದುವರೆದರೂ ಆ ದಾಸ್ತಾನು ಖಾಲಿಯಾಗಲಿದೆ. ಬಂಕುಗಳಲ್ಲಿ ಇರುವ ಪೆಟ್ರೋಲ್‌ ಡೀಸೆಲ್‌ ಖಾಲಿಯಾದರೆ ಇರುವ ಎಲ್ಲಾ ವಾಹನಗಳು ಎಲ್ಲಿವೆಯೋ ಅಲ್ಲೇ ನಿಲ್ಲಲಿವೆ.

ಹಾಗೆಯೇ ಹಾಲು ತರಕಾರಿ ಸಾಗಣೆಯಲ್ಲೂ ವ್ಯತ್ಯಯವಾಗಲಿದೆ. ಏಕೆಂದರೆ ಇಲ್ಲಿನ ಸಾಕಷ್ಟು ತರಕಾರಿಗಳನ್ನು ಹೊರ ರಾಜ್ಯಕ್ಕೆ ಕಳುಹಿಸಲಾಗುತ್ತದೆ. ಹೊರ ರಾಜ್ಯದಿಂದಲೂ ಕೆಲವೊಂದು ತರಕಾರಿಗಳನ್ನು ಇಲ್ಲಿಗೆ ತರಿಸಲಾಗುತ್ತದೆ. ಆದರೆ ಲಾರಿ ಮುಷ್ಕರ ಕೇವಲ 2 ದಿನ ಮುಂದುವರೆದರೂ ಈ ಎಲ್ಲಾ ವ್ಯವಸ್ಥೆ ಅವ್ಯವಸ್ಥೆಗೊಳ್ಳಲಿದೆ.

Share this article