- ಲೂಯಿ ಬ್ರೈಲ್ ೨೧೭ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ನ್ಯಾ. ಆರ್.ಚೇತನ್ - - -
ಅಂಧರ, ಅಂಧರಲ್ಲದವರ ನಡುವಿನ ಸಾಕ್ಷರತೆ, ಶಿಕ್ಷಣ, ಉದ್ಯೋಗ ಮತ್ತು ಸ್ವಾತಂತ್ರ್ಯದಿಂದ ಅಸಮಾನತೆಯನ್ನು ದೊಡ್ಡಮಟ್ಟದಲ್ಲೇ ಬದಲಾಯಿಸಿದ ಕೀರ್ತಿವಂತ ಲೂಯಿ ಬ್ರೈಲ್ ಎಂದು ಜಗಳೂರು ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶ ಆರ್. ಚೇತನ್ ಹೇಳಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಸೋಮವಾರ ರೇಣುಕಾ ಅಕಾಡೆಮಿ ಅಂಧರ ಆನ್‌ಲೈನ್ ತರಬೇತಿ ಕೇಂದ್ರ, ವಕೀಲರ ಸಂಘ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲೂಯಿ ಬ್ರೈಲ್ ಅವರ ೨೧೭ನೇ ಜನ್ಮ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೃಷ್ಟಿಯೊಂದಿದ್ದರೆ ಇಡೀ ಜಗತ್ತನ್ನೇ ನೋಡಬಹುದು. ಆದರೆ ಕಣ್ಣಿಲ್ಲದ ವ್ಯಕ್ತಿಯೂ ಬದುಕುವ ರೀತಿಯನ್ನು ಒಮ್ಮೆ ಊಹಿಸಿ ನೋಡಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ರೇಣುಕಾ ಅಕಾಡೆಮಿ ಸ್ಥಾಪಿಸಿ ಗ್ರಾಮೀಣ ಪ್ರದೇಶದಲ್ಲಿ ಕಚೇರಿ ತೆರೆದು ತಾಲೂಕಿನ ಅಂಧರ ಬಾಳಿಗೆ ಬೆಳಕಾಗಲು, ಅವರಿಗೆ ಜಾಗೃತಿ, ತಂತ್ರಜ್ಞಾನ ನೀಡಲು ರಂಗಸ್ವಾಮಿ ಮುಂದಾಗಿರುವುದು ಶ್ಲಾಘನೀಯ. ಇವರು ಎರಡನೇ ಲೂಯಿ ಬ್ರೈಲ್ ಎಂದರೆ ತಪ್ಪಾಗಲಾರದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೇಣುಕಾ ಅಕಾಡೆಮಿ ಸ್ಥಾಪಕ ರಂಗಸ್ವಾಮಿ ಮಾತನಾಡಿ, ಲೂಯಿ ಬ್ರೈಲ್ ತನ್ನ ಬಾಲ್ಯದಲ್ಲಿ ನಡೆದ ಆಘಾತದಿಂದಾಗಿ ತನ್ನ ದೃಷ್ಟಿ ಕಳೆದುಕೊಂಡಿದ್ದರು. ೧೫ನೇ ವಯಸ್ಸಿನಲ್ಲಿ ಬ್ರೈಲ್ ಲಿಪಿಯನ್ನು ಕಂಡುಹಿಡಿದರು. ಒಂದು ಕಾಗದದ ತುಂಡಿನಲ್ಲಿ ಚುಕ್ಕಿಗಳನ್ನು ಜೋಡಿಸುವ ಮೂಲಕ ಬ್ರೈಲ್ ಲಿಪಿಯನ್ನು ಅಭಿವೃದ್ಧಿಪಡಿಸಿದರು. ಅನಂತರದ ದಿನಗಳಲ್ಲಿ ಲಿಪಿಯಲ್ಲಿ ಸಾಕಷ್ಟು ಬದಲಾವಣೆ ತಂದರು. ಈಗ ಅಂಧರಿಗೆ ವರದಾನವಾಗಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ಟಿ.ಬಸವರಾಜ್ ಮಾತನಾಡಿ, ರಂಗಸ್ವಾಮಿ ಬೆಂಗಳೂರು ಮಟ್ಟದಲ್ಲಿ ಬೆಳೆದು ಅನೇಕ ಅಂಧರಿಗೆ ಶಿಕ್ಷಕರಾಗಿ ತರಬೇತಿ ನೀಡಿದ್ದಾರೆ. ಹುಟ್ಟಿದ ತಾಲೂಕಿನ ಅಂಧರಿಗೆ ಜಾಗೃತಿ ಮೂಡಿಸಲು ಅಕಾಡೆಮಿ ಸ್ಥಾಪಿಸಿ ಕಂಪ್ಯೂಟರ್ ತರಬೇತಿ, ಬ್ರೈಲ್ ಲಿಪಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಲೋಕೇಶ್ ಎಂ. ಐಹೊಳೆ ಮಾತನಾಡಿ, ಮಾನವನ ಪ್ರತಿಯೊಂದು ಅಂಗಾಂಗವು ಅತ್ಯಮೂಲ್ಯ. ಯಾವುದಕ್ಕೂ ಬೆಲೆ ಕಟ್ಟಲಾಗದು. ಅದರಲ್ಲೂ ಕಣ್ಣುಗಳು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗ. ಸುಂದರ ಪ್ರಪಂಚವನ್ನು ನೋಡಲು ನಮಗೆ ಸಹಾಯ ಮಾಡುವುದೇ ಕಣ್ಣುಗಳು. ಆದರೆ ಲಕ್ಷಾಂತರ ಮಂದಿ ಹುಟ್ಟುವಾಗಲೇ ಅಂಧರಾಗಿ ಜನಿಸುತ್ತಾರೆ. ಲೂಯಿ ಬ್ರೈಲ್ ಅಪಘಾತದಲ್ಲಿ ಕಣ್ಣು ಕಳೆದುಕೊಂಡರೂ, ಜಿಗುಪ್ಸೆಗೊಳ್ಳದೇ ಬ್ರೈಲ್ ಲಿಪಿ ಕಂಡುಹಿಡಿದು ಅಂಧರಿಗೆ ಬೆಳಕು ನೀಡಿದ ದೇವತಾ ಮನುಷ್ಯ ಎನಿಸಿದರು. ಅವರ ದಾರಿಯಲ್ಲಿ ರಂಗಸ್ವಾಮಿ ಸಾಗುತ್ತಿರುವುದು ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಸರ್ಕಾರಿ ವಕೀಲ ಮಂಜುನಾಥ್, ವಕೀಲರಾದ ವಂಶಿ ಮೋಹನ್, ಕರಿಬಸಯ್ಯ, ಮಹಾಂತೇಶ್, ಆರ್.ಓಬಳೇಶ್, ಮಲ್ಲಿಕಾರ್ಜುನ್, ಮಾಳಮ್ಮನಹಳ್ಳಿ ರಂಗನಾಥ್, ನಾಗೇಶ್, ಅಂಜಿನಪ್ಪ, ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರಿದ್ದರು.
- - --19ಜೆ.ಜಿ.ಎಲ್.1:
ಜಗಳೂರು ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲೂಯಿ ಬ್ರೈಲ್ ೨೧೭ನೇ ಜನ್ಮ ದಿನ ಕಾರ್ಯಕ್ರಮವನ್ನು ನ್ಯಾಯಾಧೀಶ ಆರ್.ಚೇತನ್ ಉದ್ಘಾಟಿಸಿದರು.