ಕನ್ನಡಪ್ರಭ ವಾರ್ತೆ ಬೆಂಗಳೂರು
ತಿಲಕನಗರದ ಸಮೀಪದ ನಿವಾಸಿ ಕಿರಣ್ (20) ಹತ್ಯೆಗೀಡಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಪ್ರಿಯತಮೆಯ ಮಾಜಿ ಪ್ರಿಯಕರ ಜೀವನ್ ಬಂಧನವಾಗಿದೆ. ಜಯನಗರದ 3ನೇ ಹಂತದಲ್ಲಿ ಬುಧವಾರ ರಾತ್ರಿ ಕಿರಣ್ ಎದೆಗೆ ಚಾಕುವಿನಿಂದ ಇರಿದು ಆರೋಪಿ ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇ-ಕಾಮರ್ಸ್ ಕಂಪನಿಯಲ್ಲಿ ಡಿಲವರಿ ಬಾಯ್ ಆಗಿ ಕಿರಣ್ ಕೆಲಸ ಮಾಡುತ್ತಿದ್ದು, ತನ್ನ ಕುಟುಂಬದ ಜತೆ ಆತ ನೆಲೆಸಿದ್ದ. ಅದೇ ಏರಿಯಾದ ಯುವತಿ ಜತೆ ಆತನಿಗೆ ಪ್ರೇಮವಾಗಿತ್ತು. ಈ ಮೊದಲು ಜೀವನ್ ಜತೆ ಆಕೆ ಪ್ರೀತಿಯಲ್ಲಿದ್ದಳು. ಆದರೆ ವೈಯಕ್ತಿಕ ಕಾರಣಕ್ಕೆ ಬೇಸರಗೊಂಡ ಆಕೆ, ಜೀವನ್‌ನಿಂದ ದೂರವಾಗಿದ್ದಳು. ಈ ಪ್ರೇಮ ವಿಚಾರ ತಿಳಿದು ಕೆರಳಿದ ಜೀವನ್, ತನ್ನ ಹುಡುಗಿ ಸ್ನೇಹ ಕಡಿದುಕೊಳ್ಳುವಂತೆ ಕಿರಣ್‌ಗೆ ತಾಕೀತು ಮಾಡಿದ್ದ. ಈ ಬೆದರಿಕೆ ಬಳಿಕವು ಪ್ರೇಮ ಮುಂದುವರೆದಿತ್ತು. ಇದರಿಂದ ಕೆರಳಿದ ಆರೋಪಿ, ಜಯನಗರದ 3ನೇ ಹಂತದಲ್ಲಿ ಕಿರಣ್ ಮೇಲೆ ಬುಧವಾರ ರಾತ್ರಿ ಗಲಾಟೆ ಮಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕಿರಣ್ ಎದೆಗೆ ಆತ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.