ಶಿವಮೊಗ್ಗ: ಕನ್ನಡ ಭಾಷೆಯನ್ನು ಪ್ರೀತಿಸಿ ಅನ್ಯ ಭಾಷೆಗಳನ್ನು ಗೌರವಿಸಿ ಎಂದು ರಾಜ್ಯ ವೀರ ಕನ್ನಡಿಗ ಪ್ರಶಸ್ತಿ ವಿಜೇತ ಶಿಕ್ಷಕ ಪುಟ್ಟಸ್ವಾಮಿ ಪಿ. ಚಂಗೊಳ್ಳಿ ಹೇಳಿದರು.
ಶಿವಮೊಗ್ಗ ತಾಲೂಕು ಹೊಸಕೊಪ್ಪ ಗ್ರಾಮದಲ್ಲಿ ಶ್ರೀ ರಾಮಧೂತ ಯುವಕ ಸಂಘ ಆಯೋಜಿಸಿದ್ದ 9ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿ, ನಮಗೆ ಎಲ್ಲಾ ಭಾಷೆಗಳು ಮುಖ್ಯವಾಗುತ್ತವೆ. ಆದರೆ ಕನ್ನಡ ಭಾಷೆ ಮಾತ್ರ ಹೃದಯದ ಭಾಷೆಯಾಗಿರುತ್ತದೆ. ನಮ್ಮ ಭಾವನೆ ಮತ್ತು ವಿಚಾರಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಪ್ರಬಲ ಮಾಧ್ಯಮ ಕನ್ನಡ ಭಾಷೆಯಾಗಿದೆ. ಇದು ಅನ್ನದ ಭಾಷೆಯಾಗಬೇಕು. ಎಲ್ಲಾ ಭಾಷೆಗಳನ್ನು ಈಗ ಕಲಿಯುವುದು ಅನಿವಾರ್ಯ ಮತ್ತು ಅಗತ್ಯವಾಗಿದೆ. ಆದರೆ, ಕನ್ನಡಭಾಷೆಯನ್ನು ಮರೆತು ಬೇರೆ ಕಲಿಯುವುರದಲ್ಲಿ ಅರ್ಥವಿಲ್ಲ ಎಂದರು.
ಕನ್ನಡ ಭಾಷೆಗೆ ತನ್ನದೇ ಆದ ಘನತೆ ಮತ್ತು ಗಟ್ಟಿತನವಿದೆ. ಇದೊಂದು ಗೌರವದ ಪ್ರತಿರೂಪವು ಆಗಿದೆ. ಕನ್ನಡ ಭಾಷೆಗೆ ತೊಂದರೆ ಆಗಿರಬಹುದು ಆದರೆ ಅದು ಎಂದಿಗೂ ಸಾಯುವುದಿಲ್ಲ. ನಮ್ಮ ಭಾಷೆಯನ್ನು ನಮ್ಮ ಜನಪದ ಬೇರುಗಳು ಗಟ್ಟಿಯಾಗಿ ಹಿಡಿದಿಟ್ಟಿವೆ. ನಮ್ಮ ಗ್ರಾಮೀಣ ಜನರೇನಿಜವಾಗಿ ಕನ್ನಡ ಭಾಷೆಯನ್ನು ಉಳಿಸುವವರು ಎಂದರು.
ಶ್ರೀ ಮಲ್ಲಿಕಾರ್ಜುನ ಕ್ಲಿನಿಕ್ ಗಾಜನೂರಿನ ಡಾ.ನಾಗರಾಜ್, ನಟ ಪುನೀತ್‌ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿಮಾತನಾಡಿ, ಭಾಷೆ ಬಹಳ ಮುಖ್ಯ. ಅದರಲ್ಲೂ ಕನ್ನಡ ಭಾಷೆ ಶ್ರೇಷ್ಠವೇ ಆಗಿದೆ. ಕನ್ನಡ ಭಾಷೆಯನ್ನು ಶರಣರು, ವಚನಕಾರರು, ಕವಿಗಳು, ಸಾಹಿತಿಗಳು, ಜನಪದರು ಕಟ್ಟಿ ಬೆಳೆಸಿದ್ದಾರೆ. ರಾಜ್ಯೋತ್ಸವ ನವೆಂಬರ್ ತಿಂಗಳಲ್ಲಿ ಮಾತ್ರವಾಗದೆ ವರ್ಷಪೂರ್ತಿ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಚ್.ಜಿ.ಶಿವಕುಮಾರ್, ಪ್ರಮುಖರಾದ ಎಸ್.ಕಾರ್ತಿಕ್, ಸಿದ್ದನಗೌಡರು, ಶಿವಕುಮಾರ್ ಕೆ. ಸಂಜೀವ್ ಕುಮಾರ್, ಪಿ.ಶಿವರಾಮ್ , ಎಚ್.ಬಿ.ಚಂದ್ರಶೇಖರ್ , ನವೀನ್‌ಕುಮಾರ್, ವೇಲು, ಶರಣ್, ಕಿರಣ್ ಸೇರಿದಂತೆ ಹಲವರು ಇದ್ದರು. ಉಪನ್ಯಾಸಕ ಸರ್ವಜ್ಞ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.