1 ಕೋಟಿ ರು. ವೆಚ್ಚದಲ್ಲಿ ಸಭಾಂಗಣ ನಿರ್ಮಿಸಿಕೊಟ್ಟ ಹಳೆ ವಿದ್ಯಾರ್ಥಿಗಳು

KannadaprabhaNewsNetwork | Updated : Feb 13 2024, 02:55 PM IST

ಸಾರಾಂಶ

ತಾವು ಓದಿದ ಕಾಲೇಜಿಗೆ 1 ಕೋಟಿ ವೆಚ್ಚದಲ್ಲಿ ಹಳೆಯ ವಿದ್ಯಾರ್ಥಿಗಳು ಸಭಾಂಗಣ ನಿರ್ಮಿಸಿಕೊಟ್ಟಿದ್ದಾರೆ. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಭಾಂಗಣವನ್ನು ಲೋಕಾರ್ಪಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಒಂದು ಕೋಟಿ ರು. ವೆಚ್ಚದಲ್ಲಿ ಎರಡು ಸುಸಜ್ಜಿತ ಸಭಾಂಗಣವನ್ನು ನಿರ್ಮಿಸಿ ವಿಶ್ವವಿದ್ಯಾಲಯಕ್ಕೆ ಕೊಡುಗೆಯಾಗಿ ನೀಡಿದೆ. 

ಇದೇ ಕಾಲೇಜಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಪ್ರೊ.ವಿ.ಬಿ ಕುಟಿನೋ ಅವರ ಹೆಸರನ್ನು ಸಭಾಂಗಣಕ್ಕೆ ನಾಮಕರಣ ಮಾಡಿ ಉದ್ಘಾಟಿಸಿದೆ.

ಸೋಮವಾರ ಸಭಾಂಗಣ ಉದ್ಘಾಟಿಸಿ ಮಾತನಾಡಿದ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು, ಬೆಂ.ವಿ.ವಿ.ಕಾನೂನು ಕಾಲೇಜಿನ ನಂಟು, ಪ್ರೊ.ವಿ.ಬಿ. ಕುಟಿನೋ ಅವರ ಸ್ಮರಣೆ ನನ್ನನ್ನು ದೆಹಲಿಯಿಂದ ಇಲ್ಲಿಯವರೆಗೆ ಬರುವಂತೆ ಮಾಡಿದೆ. 

1992 ರಲ್ಲಿ ಪ್ರೊ. ಕುಟಿನೋ ಅವರು ನೀಡಿದ ಸ್ಪೂರ್ತಿ ತಮ್ಮ ಜೀವನವನ್ನೆ ಬದಲಾಯಿಸಿ, ಇಂದು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಕೂರಿಸಿದೆ.

ಬೆಂಗಳೂರು ವಿವಿ ಕಾನೂನು ಕಾಲೇಜು ಕಾಲೇಜು ದೇಶದಲ್ಲಿ ಅಗ್ರಮಾನ್ಯ ಕಾಲೇಜಾಗಿ ತಲೆ ಎತ್ತಿ ನಿಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮಾತನಾಡಿ, ಸರ್ಕಾರಿ ಕಾಲೇಜು, ವಿವಿಗಳೆಂದರೆ ಮೂಗು ಮುರಿಯುವ ಕಾಲದಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿ ಕಾರ್ಪೋರೆಟ್ ಮಾದರಿಯಲ್ಲಿ ಸಭಾಂಗಣ ನಿರ್ಮಿಸಿರುವುದು ಪ್ರತಿಯೊಬ್ಬರಿಗೂ ಮಾದರಿ ಎಂದರು.

ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳಾದ ಎಸ್.ಆರ್.ಕೃಷ್ಣಕುಮಾರ್, ನ್ಯಾ.ರಂಗಸ್ವಾಮಿ ನಟರಾಜ, ಮುಖ್ಯಮಂತ್ರಿಗಳ ಸಲಹೆಗಾರ ಎ.ಎಸ್.ಪೊನ್ನಣ್ಣ, ಬೆಂವಿವಿಯ ಕುಲಪತಿ ಪ್ರೊ.ಎಸ್.ಎಂ.ಜಯಕರ, ಗದಗಿನ ಕೆಎಸ್‌ಆರ್‌ಡಿಪಿ ವಿವಿಯ ಕುಲಸಚಿವ ಪ್ರೊ.ಡಾ। ಸುರೇಶ್ ವಿ.ನಾಡಗೌಡ ಉಪಸ್ಥಿತರಿದ್ದರು.

Share this article