ಕೊಪ್ಪಳ: ಒಂದೇ ವಾರದಲ್ಲಿ ಬಸ್ ಪ್ರಯಾಣ ದರ, ಹಾಲು, ಮೊಸರು ಹಾಗೂ ತುಪ್ಪದ ಬೆಲೆಗಳನ್ನು ಕಂಡು ಕೇಳರಿಯದ ಪ್ರಮಾಣದಲ್ಲಿ ಏರಿಸಿ, ಬೆಳಕಿನ ಹಬ್ಬ ದೀಪಾವಳಿಗೆ ಜನರಿಗೆ ಕತ್ತಲೆಯ ಗಿಫ್ಟ್ ನೀಡಿರುವ ಕಾಂಗ್ರೆಸ್ ಆಡಳಿತದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದೆ. ಜನವಿರೋಧಿ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವೇ ಅಧಿಕಾರದಿಂದ ನಿರ್ಗಮಿಸಬೇಕು ಎಂದು ಜೆಡಿಎಸ್ ಮುಖಂಡರು ಆಗ್ರಹಿಸಿದರು.
ಸರ್ಕಾರದ ತಪ್ಪಿಗೆ ಜನರ ಮೇಲೆ ಹೊರೆ: ಅವೈಜ್ಞಾನಿಕ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದ್ದು, ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂದು ಹೇಳಿ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಸರ್ಕಾರದ ನೀತಿಗಳಿಂದಾಗಿ ಸಾರಿಗೆ ಸಂಸ್ಥೆಗಳು 2023-24ರಲ್ಲಿ ₹296.43 ಕೋಟಿ, 2024-25ರಲ್ಲಿ ₹81.83 ಕೋಟಿ ಹಾಗೂ 2025-26ರಲ್ಲಿ ₹473.80 ಕೋಟಿ ನಷ್ಟ ಅನುಭವಿಸಿವೆ. ಒಟ್ಟಾರೆ ನಾಲ್ಕು ಸಾರಿಗೆ ನಿಗಮಗಳು ₹1,527 ಕೋಟಿ ನಷ್ಟದಲ್ಲಿವೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಆಕ್ರೋಶ ವ್ಯಕ್ತಪಡಿಸಿದರು.
ಡೀಸೆಲ್ ಖರೀದಿಸಲು ಸರ್ಕಾರದ ಬಳಿ ಹಣವಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರದ ತಪ್ಪಿಗೆ ಸಾರ್ವಜನಿಕರು ಕಷ್ಟಪಟ್ಟು ದುಡಿದ ಹಣವನ್ನು ಕಿತ್ತುಕೊಳ್ಳಲಾಗುತ್ತಿದೆ. ಸಾರಿಗೆ ನಿಗಮಗಳಿಗೆ ಸರ್ಕಾರ ₹5,600 ಕೋಟಿ ಬಾಕಿ ಉಳಿಸಿಕೊಂಡಿದೆ. ಈ ಹಣವನ್ನು ಪಾವತಿಸಿದ್ದರೆ ದರ ಏರಿಕೆಯ ಅಗತ್ಯವೇ ಇರುತ್ತಿರಲಿಲ್ಲ. ಬಿಡಿಭಾಗಗಳನ್ನು ಖರೀದಿಸಲೂ ನಿಗಮಗಳ ಬಳಿ ಹಣವಿಲ್ಲ. ಸುಮಾರು ಶೇ. 35ರಷ್ಟು ಪ್ರಯಾಣ ದರ ಹೆಚ್ಚಳ ಮಾಡಿರುವುದು ರಾಜ್ಯದ ಇತಿಹಾಸದಲ್ಲೇ ದಾಖಲೆಯಾಗಿದೆ ಎಂದು ದೂರಿದರು.ಸಾರಿಗೆ ವ್ಯವಸ್ಥೆಯನ್ನೇ ಹಾಳುಗೆಡವಿದ ಕಾಂಗ್ರೆಸ್: ಸಾಲ ಮಾಡಿರುವುದರಿಂದ ದರ ಏರಿಕೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ ಹೇಳುತ್ತಾರೆ. ಡೀಸೆಲ್ ಖರೀದಿಸಲು ಹಣವಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ದೇಶದಲ್ಲೇ ನಂಬರ್ 1 ಸ್ಥಾನದಲ್ಲಿದ್ದ ಸಾರಿಗೆ ಸಂಸ್ಥೆಯನ್ನು ಕಾಂಗ್ರೆಸ್ ಸರ್ಕಾರ ಹಾಳು ಮಾಡಿ ಬೀದಿಗೆ ತಂದಿದೆ. ಸಾರಿಗೆ ನಿಗಮಗಳ ನೌಕರರಿಗೂ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಆರೋಪಿಸಿದರು.
ಪ್ರತಿಭಟನಾಕಾರರು ಸಹಾಯಕ ಆಯುಕ್ತ ಮೆಹಬೂಬ್ ಜಿಲಾನಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಬಸ್ ಪ್ರಯಾಣ ದರ ಹಾಗೂ ಹಾಲು, ಮೊಸರು, ತುಪ್ಪದ ಬೆಲೆ ಏರಿಕೆ ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿದರು.