ಎಲ್‌ಪಿಜಿ, ಸಿಎನ್‌ಜಿ ಗ್ಯಾಸ್ ತೊಂದರೆ: ಆಟೋ ಚಾಲಕರು ನಿರ್ವಹಿಸಿ

KannadaprabhaNewsNetwork |  
Published : Apr 11, 2026, 02:00 AM IST
ಜಿಲ್ಲಾಧಿಕಾರಿ ಅಧಿಕಾರಿಗಳ ಸಭೆ ನಡೆಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ 21 ಆಟೋ ಎಲ್‌ಪಿಜಿ ಹಾಗೂ 11 ಸಿಎನ್‌ಜಿ ಬಂಕ್‌ಗಳಿದ್ದು ಸಂಕಷ್ಟ ಸಮಯದಲ್ಲಿ ಬಂಕ್ ಮಾಲೀಕರು ಪಾರದರ್ಶಕವಾಗಿ ಗ್ಯಾಸ್ ವಿತರಿಸಬೇಕು. ಯುದ್ಧ ಸನ್ನಿಯಿಂದಾಗಿ ವಿಶೇಷವಾಗಿ ವಾಣಿಜ್ಯ ಬಳಕೆ ಗ್ಯಾಸ್ ಸರಬರಾಜು ಸ್ವಲ್ಪ ವಿಳಂಬವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಧಾರವಾಡ:

ಅನಿರೀಕ್ಷಿತ ಬೆಳವಣಿಗೆ ಹಾಗೂ ಪಾಶ್ಚಿಮಾತ್ಯ ದೇಶಗಳ ಯುದ್ಧ ಭೀತಿಯಿಂದ ಎಲ್‌ಪಿಜಿ, ಸಿಎನ್‌ಜಿ ಗ್ಯಾಸ್ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಿ, ಗ್ಯಾಸ್ ಬಳಕೆದಾರರಿಗೆ ಮತ್ತು ಬಂಕ್ ಮಾಲೀಕರಿಗೆ ಅಲ್ಪ ಮಟ್ಟಿಗೆ ತೊಂದರೆಯಾಗಿದೆ. ಆಟೋ ಚಾಲಕರು ಚಿಂತಿಸದೆ, ಸಮಾಧಾನವಾಗಿ ಸ್ಥಿತಿಗತಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಆಹಾರ ಇಲಾಖೆ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳ ಹಾಗೂ ಎಲ್‌ಪಿಜಿ, ಸಿಎನ್‌ಜಿ ಬಂಕ್ ಮಾಲೀಕರ, ಹು-ಧಾ ಆಟೋ ಚಾಲಕರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ಜರುಗಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 21 ಆಟೋ ಎಲ್‌ಪಿಜಿ ಹಾಗೂ 11 ಸಿಎನ್‌ಜಿ ಬಂಕ್‌ಗಳಿದ್ದು ಸಂಕಷ್ಟ ಸಮಯದಲ್ಲಿ ಬಂಕ್ ಮಾಲೀಕರು ಪಾರದರ್ಶಕವಾಗಿ ಗ್ಯಾಸ್ ವಿತರಿಸಬೇಕು. ಯುದ್ಧ ಸನ್ನಿಯಿಂದಾಗಿ ವಿಶೇಷವಾಗಿ ವಾಣಿಜ್ಯ ಬಳಕೆ ಗ್ಯಾಸ್ ಸರಬರಾಜು ಸ್ವಲ್ಪ ವಿಳಂಬವಾಗುತ್ತಿದೆ. ಆದರೂ ದಾಸ್ತಾನು ಬಂದಂತೆ ವಿತರಿಸಲಾಗುತ್ತಿದೆ. ಆಟೋ ಸೇರಿದಂತೆ ಎಲ್‌ಪಿಜಿ, ಸಿಎನ್‌ಜಿ ಗ್ಯಾಸ್ ಬಳಸುವ ಎಲ್ಲ ವಾಹನಗಳ ಮಾಲೀಕರು, ಚಾಲಕರು ಪರಿಸ್ಥಿತಿಗೆ ಹೊಂದಿಕೊಂಡು ಸಹಕಾರ ನೀಡಬೇಕು ಎಂದರು.

ಎಲ್‌ಪಿಜಿ, ಸಿಎನ್‌ಜಿ ಗ್ಯಾಸ್ ಬಂಕ್‌ಗಳಲ್ಲಿ ಪ್ರತಿ ದಿನದ ಗ್ಯಾಸ್ ದರ, ಬಂಕ್‌ದಲ್ಲಿನ ಗ್ಯಾಸ್ ದಾಸ್ತಾನು ಕುರಿತು ಮಾಹಿತಿ ಫಲಕ ಕಡ್ಡಾಯವಾಗಿ ಅಳವಡಿಸಿ ಗ್ರಾಹಕರಿಗೆ ಗೊಂದಲ ಉಂಟಾಗದಂತೆ ಕ್ರಮವಹಿಸಬೇಕು ಎಂದ ಜಿಲ್ಲಾಧಿಕಾರಿ, ಮೇಲುಸ್ತುವಾರಿ ಸಮಿತಿ ರಚಿಸಲಿದ್ದು, ನೋಡಲ್ ಅಧಿಕಾರಿಗಳು ಪ್ರತಿದಿನ ಗ್ಯಾಸ್ ಬಂಕ್‌ಗಳಲ್ಲಿ ಹೊಂದಿರುವ ಗ್ಯಾಸ್ ದಾಸ್ತಾನು, ಮಾರಾಟವಾದ ಗ್ಯಾಸ್ ಪ್ರಮಾಣ ಮತ್ತು ಆಕರಿಸಿದ ದರ ಕುರಿತು ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ಸೂಚಿಸಿದರು.

ಆಟೋ ಚಾಲಕರು ಸೇರಿದಂತೆ ಸಾರ್ವಜನಿಕರು ಎಲ್‌ಪಿಜಿ, ಸಿಎನ್‌ಜಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಎದುರಾದಲ್ಲಿ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 1077ಕ್ಕೆ ಕರೆ ಮಾಡಿ, ಮಾಹಿತಿ ನೀಡಬಹುದು. ಬಂದ ದೂರುಗಳನ್ನು ಶೀಘ್ರ ಪರಿಹರಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವರ್ಚುವಲ್‌ ಮೂಲಕ ಭಾಗವಹಿಸಿ, ಕಾಳಸಂತೆ ಮೂಲಕ ಇಂಧನ ಮಾರಾಟಕ್ಕೆ ಯಾವುದೇ ರೀತಿಯ ಅವಕಾಶ ನೀಡುವುದಿಲ್ಲ. ಎಲ್‌ಪಿಜಿ ಗ್ಯಾಸ್ ವಿತರಣೆಯ ಮೇಲ್ವಿಚಾರಣೆಗಾಗಿ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿದ್ದ ಎಲ್‌ಪಿಜಿ, ಸಿಎನ್‌ಜಿ ಗ್ಯಾಸ್ ಬಂಕ್‌ಗಳ ಮಾಲೀಕರು ಮತ್ತು ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಎಲ್‌ಪಿಜಿ ಗ್ಯಾಸ್ ವಿತರಣೆಯಲ್ಲಿ ಆಗುತ್ತಿರುವ ತೊಂದರೆಗಳ ಕುರಿತು ಕೇಂದ್ರ ಸಚಿವ ಜೋಶಿ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಸಭೆಯಲ್ಲಿ ಎಸ್ಪಿ ಗುಂಜನ್ ಆರ್ಯ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋರ್ಟ್‌ನಲ್ಲಿ ವಾದ ಮಾಡುವಾಗಲೇ ಹೃದಯಾಘಾತದಿಂದ ವಕೀಲ ಸಾವು
ಹಿಟ್ನಾಳ-ಹುಲಿಗಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ