ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗನಿಂದಲೂ ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಡವರ ಜೀವನ ನರಕಸದೃಶ್ಯವಾಗಿಸಿದೆ. ಕಾಂಗ್ರೆಸ್ ಹಿಂದಿನಿಂದಲೂ ಬಡವರು, ರೈತರು, ಜನಸಾಮಾನ್ಯರ ಪರವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್‌ಗೆ ದೇಶದ ಹಿತ ಮುಖ್ಯ. ಜನತೆಯ ಹಿತ ಬಯಸದ ಬಿಜೆಪಿ ದಿನನಿತ್ಯದ ವಸ್ತುಗಳ ಬೆಲೆಗಳನ್ನು ಸತತವಾಗಿ ಏರಿಸುತ್ತ ಇತ್ತ ಬದುಕಲೂ, ಅತ್ತ ಸಾಯಲು ಆಗದೆ ಬಡವರು, ಮಧ್ಯಮ ವರ್ಗದ ಜನತೆ ಒದ್ದಾಡುವಂತಾಗಿದೆ. ಇದೀಗ ನಿತ್ಯವೂ ಅಡುಗೆ ಮನೆಯಲ್ಲಿ ಮಹಿಳೆಯರಿಗೆ ಬೇಕಾಗಿರುವ ಅಡುಗೆ ಅನಿಲ ಏರಿಕೆಯಿಂದ ಬಡವರು, ಮಧ್ಯಮ ವರ್ಗದವರು ತತ್ತರಿಸಿದ್ದಾರೆ. ಕೂಡಲೇ ಬೆಲೆ ಏರಿಕೆ ಹಿಂಪಡೆಯಬೇಕೆಂದು ಕೇಂದ್ರದ ವಿರುದ್ಧ ತರಾಟೆಗೆ ತೆಗೆದುಕೊಂಡರು.
ಮಹಿಳಾ ಕಾಂಗ್ರೆಸ್‌ನ ಸವಿತಾ ಕೊಣ್ಣೂರ ಮಾತನಾಡಿ, ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಅಚ್ಛೇದಿನ್ ತರುತ್ತೇವೆಂದು ಹೇಳಿಕೊಳ್ಳುತ್ತ ₹೪೦೦ ಇದ್ದ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪ್ರತಿ ವರ್ಷ ಹೆಚ್ಚಿಸಿ ಈಗ ಸಾವಿರದ ಗಡಿ ದಾಟಿದೆಯೆಂದು ಹೇಳಿದರು. ಪವಿತ್ರ ರಂಜಾನ್ ಮಾಸದಲ್ಲಿ ಅಮೆರಿಕ-ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸುತ್ತಿರುವುದರಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು, ಅಮಾಯಕರು ಸಾಯುತ್ತಿದ್ದಾರೆ. ಇತ್ತ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸಿ ಶ್ರೀಮಂತರಿಗೆ ಅನುಕೂಲ ಮಾಡುತ್ತಿದ್ದಾರೆ. ತಕ್ಷಣವೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸುಮಿತ್ರ ಗುಲಬಾಳ ಮಾತನಾಡಿದರು.
ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ದಾನಪ್ಪ ಹುಲಜತ್ತಿ, ರಾಜೇಂದ್ರ ಭದ್ರನ್ನವರ, ಸಂಜೀವ ಜೋತಾವರ, ಅಶೋಕ ಆಳಗೊಂಡ, ಯಾಸಿನ್ ಡಾಲಾಯತ್, ಶೇಖರ ಹಕ್ಕಲದಡ್ಡಿ, ಅಶೋಕ ಉಳ್ಳಾಗಡ್ಡಿ, ಸಂಗಮೇಶ ಮಡಿವಾಳ, ದೇವಲ ದೇಸಾಯಿ, ನೇಮಣ್ಣಾ ಸಾವಂತನವರ, ಸುರೇಶ ಪಾಟೀಲ, ಸದಾಶಿವ ಗೊಂದಕರ, ಬಾಲಚಂದ್ರ ಹೂಗಾರ, ಚಂದ್ರು ಹರಿಜನ, ರಾಹುಲ ಕಲಾಲ, ರೇಣುಕಾ ಮಡ್ಡಿಮನಿ, ಜಯಶ್ರೀ ತಿಮ್ಮಾಪೂರ, ವಿದ್ಯಾ ಬಿಳ್ಳೂರ, ಮಹಾನಂದಾ ಅಮರಾಪೂರ, ಆಶಾ ಭೂತಿ, ಆಯೇಶಾ ಫಣಿಬಂದ ಸೇರಿದಂತೆ ಅನೇಕರಿದ್ದರು.