ಎಲ್‌ಪಿಜಿ ಅಭಾವ: ಇಂದಿರಾ ಕ್ಯಾಂಟೀನ್‌ನಲ್ಲಿ ಸೌದೆ ಒಲೆ ಬಳಕೆ

KannadaprabhaNewsNetwork |  
Published : Apr 24, 2026, 12:45 AM IST
ಕಡಿಮೆ ದರದಲ್ಲಿ ಆಹಾರ ಒದಗಿಸುವ ಇಂದಿರಾ ಕ್ಯಾಂಟೀನ್‌ಗಳು,ಸದ್ಯದ ಗ್ಯಾಸ್ ಬಿಕ್ಕಟ್ಟಿನಿಂದಾಗಿ ಸಾಮಾನ್ಯ ಜನರಿಗೆ ತೊಂದರೆ | Kannada Prabha

ಸಾರಾಂಶ

ಗೌರಿಬಿದನೂರು ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿ ಎರಡು ದಿನಗಳಿಗೆ 1 ಸಿಲಿಂಡರ್ ಅವಶ್ಯಕತೆ ಇದೆ. 350ರಿಂದ 400 ಮಂದಿ ಇಂದಿರಾ ಕ್ಯಾಂಟೀನ್‌ಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಊಟ ಮಾಡುತ್ತಾರೆ.

ಕಳೆದ 2 ತಿಂಗಳಿನಿಂದ ಸೌದೆ ಒಲೆಯಲ್ಲಿ ಅಡುಗೆ ತಯಾರಿಸುತ್ತಿರುವ ಅಡುಗೆ ಸಿಬ್ಬಂದಿ । ತಿಂಡಿ ಮಾತ್ರವೇ ಲಭ್ಯ

ಅರುಣ್ ಕುಮಾರ್ ಎಸ್ ವಿ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಅಭಾವ ಮತ್ತು ಬೆಲೆ ಏರಿಕೆ ಬಿಸಿ ಇಂದಿರಾ ಕ್ಯಾಂಟೀನ್‌ಗೂ ತಟ್ಟಿದ್ದು, ನಗರದ ಕ್ಯಾಂಟೀನ್ ಮುಚ್ಚುವ ಹಂತಕ್ಕೆ ತಲುಪಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ವಾಣಿಜ್ಯ ಸಿಲಿಂಡರ್‌ಗಳ ಅಭಾವದಿಂದಾಗಿ ಹೋಟೆಲ್ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ಒಂದೆಡೆಯಾದರೆ, ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್‌ಗೂ ಇದರ ಬಿಸಿ ತಟ್ಟಿದೆ. ಸದ್ಯ ಸೌದೆ ಒಲೆಯಲ್ಲಿ ಅಡುಗೆ ಸಿದ್ಧಪಡಿಸಲಾಗುತ್ತಿದೆ. ಇದರಿಂದ ಇಂದಿರಾ ಕ್ಯಾಂಟೀನ್‌ನಲ್ಲಿ ಕೇವಲ ಒಂದು ತಿಂಡಿ ಮಾತ್ರ ತಯಾರಿಸಲಾಗುತ್ತಿದೆ.ಗೌರಿಬಿದನೂರು ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿ ಎರಡು ದಿನಗಳಿಗೆ 1 ಸಿಲಿಂಡರ್ ಅವಶ್ಯಕತೆ ಇದೆ. 350ರಿಂದ 400 ಮಂದಿ ಇಂದಿರಾ ಕ್ಯಾಂಟೀನ್‌ಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಊಟ ಮಾಡುತ್ತಾರೆ. ಈ ಪೈಕಿ ಕಾಲೇಜು ವಿದ್ಯಾರ್ಥಿಗಳು, ಅಂಗವಿಕಲರು, ಗಾರೆ ಕೆಲಸದವರು ಇಂದಿರಾ ಕ್ಯಾಂಟೀನ್ ಮೇಲೆ ಅವಲಂಬಿತರಾಗಿದ್ದಾರೆ. ಗ್ಯಾಸ್ ಸಿಲಿಂಡರ್ ಮುಕ್ತಾಯವಾಗಿ ಬರೋಬ್ಬರಿ 1 ತಿಂಗಳು ಕಳೆದರೂ ಬೆಲೆ ಹೆಚ್ಚಿಸಿದ ಕಾರಣ ಮೆನು ನಲ್ಲಿರುವ 1 ತಿಂಡಿಯನ್ನು ಮಾತ್ರ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ.ಕ್ಯಾಂಟೀನ್ ಒಳಗಡೆ ಸೌದೆ ಒಲೆ ಇಟ್ಟು ಅಡುಗೆ ಮಾಡಲು ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ ಅಡುಗೆ ಸಿಬ್ಬಂದಿ ಅನಿವಾರ್ಯವಾಗಿ ಹೊರಗಡೆಯೇ ಅಡುಗೆ ಮಾಡುತ್ತಿದ್ದಾರೆ. ಸುಡುವ ಬಿಸಿಲಿನಲ್ಲಿ ಸೌದೆ ಉರಿಸಿ ಅಡುಗೆ ಮಾಡುವುದು ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ.ಅಪಾಯ: ಕ್ಯಾಂಟೀನ್‌ ಪಕ್ಕದಲ್ಲೇ ಪೆಟ್ರೋಲ್‌ ಬಂಕ್‌ ಇದೆ. ಸೌದೆ ಒಲೆಯಿಂದ ಹೊರಬರುವ ಸಣ್ಣ ಕಿಡಿ ಏನಾದರೂ ಗಾಳಿಯಲ್ಲಿ ಹಾರಿದರೆ ಬಾರಿ ಗಾತ್ರದ ಅನಾಹುತ ಸಂಬಂವಿಸುತ್ತದೆ. ಎಂದು ಸ್ಥಳೀಯರು ದೂರಿದ್ದಾರೆ.ಕೆಟ್ಟುನಿಂತಿರುವ ಶುದ್ದ ನೀರಿನ ಫಿಲ್ಟರ್: ಇಂದಿರಾ ಕ್ಯಾಂಟೀನ್‌ನಲ್ಲಿ ನಿರ್ವಹಣೆಯ ಕೊರತೆಯಿಂದಾಗಿ ಶುದ್ಧ ನೀರಿನ ಘಟಕ ಮತ್ತು ಫಿಲ್ಟರ್‌ಗಳು ಕೆಟ್ಟು ವರ್ಷಗಳೇ ಕಳೆದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಹೊರಗಡೆಯಿಂದ ಕ್ಯಾನ್‌ನಲ್ಲಿ ನೀರು ತರಿಸಿ ಗ್ರಾಹಕರಿಗೆ ಪೂರೈಸಲಾಗುತ್ತಿದೆ.ಆಹಾರ ಮೆನುವಿನಲ್ಲಿ ವ್ಯತ್ಯಯ: ಬೆಳಗ್ಗೆ 7.30ಕ್ಕೆ ತಿಂಡಿ, ಮಧ್ಯಾಹ್ನ 12.30ಕ್ಕೆ ಊಟ ಹಾಗೂ ಸಂಜೆ 7 ಗಂಟೆಗೆ ಊಟ ಸಿದ್ಧವಾಗಿರಬೇಕು. ಆದರೆ ಸಿಲಿಂಡ‌ರ್ ಇಲ್ಲದ ಕಾರಣ ಮೆನುವಿನಲ್ಲಿರುವ ಅಡುಗೆ ತಯಾರಿಸಲು ಸಾಧ್ಯವಾಗುತ್ತಿಲ್ಲ.ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಗೊತ್ತಿದ್ದರೂ ಆ ಕಡೆ ತಲೆಹಾಕುವವರು ಮಾತ್ರ ಯಾರೂ ಇಲ್ಲ. ಅಡುಗೆ ಸಿಬ್ಬಂದಿ, ಸಹಾಯಕರು ಬಹಳ ದಿನಗಳಿಂದ ಸಮಸ್ಯೆ ಬಗ್ಗೆ ಹೇಳಿಕೊಳ್ಳುತ್ತಿದ್ದು, ಯಾರೂ ಕೇಳಿಸಿಕೊಳ್ಳುತ್ತಿಲ್ಲ. ಇಂತಹ ಸಮಸ್ಯೆಗಳಿಂದ ಸಾರ್ವಜನಿಕರು ಪರದಾಡುತ್ತಿದ್ದು, ಕ್ಯಾಂಟೀನ್‌ಗಳ ಸೇವೆ ಹಳ್ಳ ಹಿಡಿಯುತ್ತಿದೆ ಎನ್ನುತ್ತಾರೆ ಸಾರ್ವಜನಿಕರುಬಡವರೇ ಹೆಚ್ಚಾಗಿ ಬರುವ ಇಂದಿರಾ ಕ್ಯಾಂಟೀನ್‌ಗೆ ಅಡುಗೆ ಅನಿಲ ಪೂರೈಕೆ ಹೆಚ್ಚಿಸಬೇಕು. ಇಲ್ಲವಾದಲ್ಲಿ ಬಡವರು, ಕಾರ್ಮಿಕರಿ ಹಸಿವಿನಿಂದ ಇರಬೇಕಾಗುತ್ತದೆ. ಇಲ್ಲವೇ ದುಬಾರಿ ಹಣ ತೆತ್ತು ಹೋಟೆಲ್‌ಗಳಲ್ಲಿ ತಿನ್ನಬೇಕಾಗುತ್ತದೆ. ಸರ್ಕಾರ ಅಥವಾ ಸ್ಥಳೀಯ ಜನಪ್ರತಿನಿಧಿಗಳು ಇಂದಿರಾ ಕ್ಯಾಂಟೀನ್‌ಗೆ ಅಡುಗೆ ಅನಿಲವನ್ನು ನಿಯಮಿತವಾಗಿ ವ್ಯವಸ್ಥೆ ಮಾಡಬೇಕು ಎಂದು ಕಾಲೇಜಿನ ಬಿ.ಕಾಂ., ವಿದ್ಯಾರ್ಥಿಗಳಾದ ಪ್ರತಾಪ್, ರಾಘವೇಂದ್ರ, ಮತ್ತು ಸರಸ್ವತಿ ಒತ್ತಾಯಿಸಿದರು.ಕೋಟ್‌.....

ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಮತ್ತು ದುಪ್ಪಟ್ಟು ದರದಿಂದಾಗಿ ಇಂದಿರಾ ಕ್ಯಾಂಟೀನ್ ಮೇಲೆ ಭಾರಿ ಪರಿಣಾಮ ಬೀರಿದೆ. ಅಸ್ಲಂ ಎಂಬುವವರ ಬಳಿ ನಾವು ಗ್ಯಾಸ್ ಸಿಲಿಂಡರ್ ಖರೀದಿಸುತ್ತಿದ್ದೆವು, ಅವರು ಕರೆ ಸ್ವೀಕರಿಸುತ್ತಿಲ್ಲ. ಇನ್ನೂ ಗ್ಯಾಸ್ ಸಿಲಿಂಡರ್ ಪೂರೈಕೆ ಇಲ್ಲ. ಇದ್ದಕ್ಕಿಂತೆ ಸಿಲಿಂಡರ್ ಬೆಲೆ ಹೆಚ್ಚಾಗಿದೆ, ಇಂತಹ ಪರಿಸ್ಥಿತಿಯಲ್ಲಿ ನಾವು ಸಿಲಿಂಡರ್ ಖರೀದಿ ಮಾಡಲು ಹೇಗೆ ಸಾಧ್ಯ. ಅನಿವಾರ್ಯವಾಗಿ ಸೌದೆ ತರಿಸಿ ಕ್ಯಾಂಟೀನ್ ನಂಬಿ ಬರುವ ನೂರಾರು ಕೂಲಿ ಕಾರ್ಮಿಕರಿಗೆ ತೊಂದರೆಯಾಗಬಾರದೆಂದು ಈ ಸಾಹಸ ಮಾಡುತ್ತಿದ್ದೇವೆ.ಶ್ವೇತಾ, ಗೌರಿಬಿದನೂರು ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕಿ,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿಯಿಂದ ನಾಳೆಯಿಂದ ಐದು ದಿನ ಇನ್‌ಕಾಮೆಕ್ಸ್‌
ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದು ಗೆದ್ದ ಬಡ ಮಕ್ಕಳು !