ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಮುದ್ನಾಳ ಕ್ರಾಸ್ ಹತ್ತಿರ ಮುದ್ನಾಳ ಅಭಿಮಾನಿಗಳ ಬಳಗ ನಿರ್ಮಾಣ ಮಾಡಿರುವ ಅವರ ಕಂಚಿನ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮದ ನಂತರ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ತಂದೆ, ಮಾಜಿ ಸಚಿವ ದಿ.ಬಾಪುಗೌಡ ಜೊತೆಗೂಡಿ ಮುದ್ನಾಳ್ ಅವರು ಜನತಾ ಪರಿವಾರದಲ್ಲಿಯೇ ಸುದೀರ್ಘ ರಾಜಕಾರಣ, ಸಾಮಾಜಿಕ, ಶೈಕ್ಷಣಿಕ, ಪರೋಪಕಾರಿ ಕಾರ್ಯಗಳನ್ನು ಮಾಡಿಕೊಂಡು ಬರುವ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅವರು ಮಾಡಿರುವ ಒಳ್ಳೆಯ ಕೆಲಸಗಳ ಪರಿಣಾಮ ನಾವೂ ರಾಜಕೀಯದಲ್ಲಿ ಗೌರಯುತವಾಗಿ ಜನರ ಮಧ್ಯೆ ಸೇವೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಹಲವಾರು ದಶಕಗಳ ಹಿಂದೆ ನೇರನುಡಿ, ನಿಷ್ಟುರವಾದಿಯಾಗಿದ್ದ ಮುದ್ನಾಳರು, ಸಮಾನ ಮನಸ್ಕ ನಾಯಕರಾದ ವೈಜನಾಥ ಪಾಟೀಲ್, ವಿದ್ಯಾಧರ ಗುರೂಜೀ, ಹಣಮಂತರಾವ್ ದೇಸಾಯಿಯವರ ಜೊತೆಗೂಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯವನ್ನು ಕೇಂದ್ರ ಸರ್ಕಾರ ಸಂವಿಧಾನದ 371ಜೆ ಕಲಂ ತಿದ್ದುಪಡಿ ತರಲೇಬೇಕು ಎಂದು ಹೋರಾಟ ಸಮಿತಿ ರಚಿಸಿಕೊಂಡು ನಿರಂತರ ಸಭೆ ಮಾಡಿ, ವಾಸ್ತವಿಕ ಪರಿಸ್ಥಿತಿಗಳನ್ನು ಜನರಿಗೆ ಹಾಗೂ ಸರ್ಕಾರಕ್ಕೆ ತಿಳಿಸುವ ಕಾರ್ಯ, ಹೋರಾಟ ಮಾಡಿದ ಪರಿಣಾಮ ಪರಿಸ್ಥಿತಿ ಅರಿತ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅವರು ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ತಿದ್ದುಪಡಿ ತಂದರು. ಪರಿಣಾಮ ಇಂದು ಸಹಸ್ರಾರು ಯುವಕರಿಗೆ ಶಿಕ್ಷಣದಲ್ಲಿ, ಉದ್ಯೋಗ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅವಕಾಶಗಳು ದೊರೆತವು ಎಂದು ಅವರ ಹೋರಾಟ ಬದುಕು ಮೆಲುಕು ಹಾಕಿದರು.
ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಮುದ್ನಾಳ ಅವರು ತಮ್ಮ ಜೀವಿತಾವಧಿಯಲ್ಲಿ ಭ್ರಷ್ಟಾಚಾರ ವಿರೋಧಿಯಾಗಿದ್ದರು, ಅಸ್ಪೃಶ್ಯತೆ ನಿವಾರಣೆಗೆ ಚಳುವಳಿ ಮಾಡಿದಂತಹ ಮಹಾನ್ ವ್ಯಕ್ತಿ, ನೇತಾಜಿ ಪ್ರಭಾವಕ್ಕೆ ಒಳಗಾಗಿದ್ದ ಅವರು ಈ ಭಾಗದಲ್ಲಿ ಅವರ ಜಯಂತಿ, ಇನ್ನಿತರ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಯುವಕರಲ್ಲಿ ರಾಷ್ಟ್ರಪ್ರೇಮ ಮೂಡಿಸಿದರು ಎಂದು ಹೇಳಿದರು.
ಸಮಾರಂಭದ ಸಾನ್ನಿಧ್ಯವನ್ನು ರಂಭಾಪುರಿಶ್ರೀಗಳು, ಅಬ್ಬೆತುಮಕೂರಿನ ಡಾ. ಗಂಗಾಧರ ಸ್ವಾಮಿಜಿ, ದೇವಾಪುರದ ಶಿವಮೂರ್ತಿ ಶಿವಚಾರ್ಯ ಸ್ವಾಮಿಜಿ, ದೋರನಹಳ್ಳಿಯ ಶಿವಲಿಂಗ ರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ, ನೇರಡಗಂನ ಪಂಚಮ ಸಿದ್ದಲಿಂಗ ಸ್ವಾಮಿಜಿ, ನಗರದ ದಾಸಬಾಳ ಮಠದ ವೀರೇಶ್ವರ ಸ್ವಾಮಿಜಿ, ಸಂಗಮನ ಕರುಣೇಶ್ವರ ಸ್ವಾಮಿಜಿ, ಹೆಡಗಿಮದ್ರಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ, ನಗರದ ಏಕದಂಡಗಿ ಮಠದ ಶ್ರೀನಿವಾಸ ಸ್ವಾಮಿಜಿ, ಗೌಡಗಾಂ ಶ್ರೀಗಳು, ಕೆಂಭಾವಿಯ ಚನ್ನಬಸವ ಶಿವಾಚಾರ್ಯ ಸ್ವಾಮಿಜಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಹೇಶರಡ್ಡಿ ಮುದ್ನಾಳ ಮಾತನಾಡಿ, ಲಿಂ. ವಿಶ್ವನಾಥರಡ್ಡಿ ಮುದ್ನಾಳ ನಡೆದು ಬಂದ ದಾರಿ ವಿವರಿಸಿದರು. ರಾಚನಗೌಡ ಮುದ್ನಾಳ ಸ್ವಾಗತಿಸಿದರು. ಶರಣಗೌಡ ಬಾಡಿಯಾಳ ವಂದಿಸಿದರು.