ಎಂ. ಚಂದ್ರೇಗೌಡ ಅಧ್ಯಕ್ಷತೆಯಲ್ಲಿ ಹಾಸನ ನಗರಸಭೆ ಬಜೆಟ್ ಪೂರ್ವಭಾವಿ ಸಭೆ

KannadaprabhaNewsNetwork | Published : Jan 25, 2025 1:01 AM

ಸಾರಾಂಶ

ನಗರದಲ್ಲಿ ಇರುವ ಶೌಚಾಲಯಗಳ ಬಾಗಿಲನ್ನು ಪ್ರತಿನಿತ್ಯ ತೆಗೆಸಿ ಸಾರ್ವಜನಿಕರ ಅನುಕೂಲಕ್ಕೆ ಮಾಡಿಕೊಡಬೇಕು. ಇನ್ನು ಸಂತೆ ವೇಳೆ ಕರುಗಳನ್ನು ಬಿಟ್ಟು ಹೋಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ನಗರಸಭೆ ಅಧ್ಯಕ್ಷರು, ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರಸಭೆಯ ೨೦೨೫-೨೬ನೇ ಸಾಲಿನ ಆಯವ್ಯಯ ತಯಾರಿಸುವ ಸಂಬಂಧ ಮೊದಲನೇ ಸುತ್ತಿನ ಸಾರ್ವಜನಿಕ ಸಮಾಲೋಚನಾ ಸಭೆಯು ನಗರದ ಸಂತೇಪೇಟೆ ವೃತ್ತದ ಬಳಿ ಇರುವ ನಗರಸಭೆಯ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಅಧ್ಯಕ್ಷತೆಯಲ್ಲಿ ಜರುಗಿತು.

ಸುರೇಶ್ ಗೂರುಜಿ ಮಾತನಾಡಿ, ಬಿಸಿಲಿಗೆ ಗಿಡಗಳೆಲ್ಲಾ ಬಾಡಿ ಹೋಗುತ್ತಿದ್ದು, ನಗರದಲ್ಲಿ ಹಾಕಲಾಗಿರುವ ಗಿಡಗಳಿಗೆ ನಗರಸಭೆಯಿಂದ ನೀರು ಹಾಕಬೇಕು, ರಸ್ತೆ ಡಾಂಬರೀಕರಣ, ನಗರಸಭೆಯಲ್ಲಿ ಆನ್ಲೈನ್ ಪೇಮೆಂಟ್ ಬಗ್ಗೆ ಗಮನ ಸೆಳೆದರು. ಇದಕ್ಕೆ ಆ ಕ್ಷಣದಲ್ಲೆ ಉತ್ತರಿಸಿದ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಮಾತನಾಡಿ, ಎನ್.ಆರ್‌. ವೃತ್ತದಿಂದ ಡೇರಿ ವೃತ್ತದವರೆಗೂ ಪ್ರತಿನಿತ್ಯ ನೀರನ್ನು ಹಾಕಲಾಗುತ್ತಿದ್ದು, ಈಗಾಗಲೇ ಎಸ್.ಡಿ.ಎಂ. ಕಾಲೇಜಿನವರು ಗಿಡಗಳಿಗೆ ನೀರು ಹಾಕುವುದಾಗಿ ಮೂಂದೆ ಬಂದಿರುವುದರಿಂದ ಅವರಿಗೆ ಅನುಮತಿ ಕೊಡಲಾಗುವುದು. ನಗರದ ಕೆಲ ಕಡೆ ರಸ್ತೆ ಹಾಳಾಗಿದ್ದು, ಕೆಲ ದಿನಗಳಲ್ಲೆ ಉಳಿದ ಕಡೆ ಡಾಂಬರೀಕರಣವನ್ನು ಮಾಡಲಾಗುವುದು. ಬ್ರಹ್ಮಕುಮಾರಿ ಸಮಾಜದ ಭಾಗದಲ್ಲಿ ರಸ್ತೆ ಸರಿಪಡಿಸಲಾಗುವುದು. ನಗರಸಭೆಯಲ್ಲಿ ಆನ್ಲೈನ್ ಪೇಮೆಮಟ್ ಮಾಡುವ ಬಗ್ಗೆ ಕೇಳಲಾಗಿದ್ದು, ಇದಕ್ಕೆ ಗಮನಹರಿಸಲಾಗುವುದು ಎಂದರು. ತಮ್ಲಾಪುರ ಗಣೇಶ್ ಮಾತನಾಡಿ, ನಗರ ಪಾಲಿಯಾಕೆಯಾದ ಮೇಲೆ ಅನೇಕ ಗ್ರಾಮ ಪಂಚಾಯಿತಿ ಒಳಪಟ್ಟಿದೆ. ಒಟ್ಟು ೨೫ ಗ್ರಾಮ ಪಂಚಾಯಿತಿಗೆ ಸೇರಿದ್ದು, ಈಗ ಎಲ್ಲಾ ಶಾಪಗಳು ನಗರಸಭೆ ಮೇಲೆ ಹಾಕಲಾಗುತ್ತಿದೆ. ಖಾತೆ ಮಾಡಲು ನಗರಸಭೆಗೆ ವಯಸ್ಸಾದವರು ಅಲೆದಾಡುತ್ತಿದ್ದಾರೆ. ಡಬಲ್ ಮೀಟರ್ ಬಡ್ಡಿ ಹಾಕಲಾಗುತ್ತಿದೆ. ಕೂಡಲೇ ಗ್ರಾಮಸ್ಥರನ್ನು ಅಲೆಸಬೇಡಿ ಕೆಲಸ ಮಾಡಿಕೊಡಿ. ಎಲ್ಲಾ ನಗರಸಭೆ ಸದಸ್ಯರನ್ನು ಕರೆದು ಇದನ್ನು ಸರಿಪಡಿಸಿ ಎಂದರು. ಇದಕ್ಕೆ ಉತ್ತರಿಸಿದ ನಗರಸಭೆ ಅಧ್ಯಕ್ಷರು ಈ ಬಗ್ಗೆ ಗಮನವಹಿಸಿ ಸರಿಪಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮಾತನಾಡಿ, ಎಂಸಿಇ ಕಾಲೇಜು ಮುಂಭಾಗ ನಿಲ್ದಾಣ ಮಾಡಲಾಗಿದ್ದು, ನಾಲ್ಕೈದು ಸ್ಲ್ಯಾಬ್ ಹಾಕದೇ ಅನೇಕ ಹುಡುಗರು ಬಿದ್ದಿದ್ದಾರೆ. ಇನ್ನು ಇನ್ನೊಂದು ಬಸ್ ನಿಲ್ದಾಣ ಕಾಲೇಜು ಮುಂದೆ ಅವಶ್ಯಕತೆ ಇದೆ. ಸಂಜೆ ಸಮಯದಲ್ಲಿ ಗಲಾಟಿ ಆಗಿದ್ದು, ಫಾಸ್ಟ್ ಫುಡ್ ಅಂಗಡಿ ತೆರವು ಮಾಡಿಸಿ ಹಾಗೂ ಮುಖ್ಯವಾಗಿ ಮಂಗಳವಾರದಂದು ಸಂತೆ ಮೈದಾನ ಸಾಲಗಾಮೆ ರಸ್ತೆ ಬಳಿ ನಡೆಯುತ್ತದೆ. ಇದರಿಂದ ಸಮಸ್ಯೆ ತುಂಬ ಆಗುತ್ತಿದೆ. ಕಳೆದ ಸಭೆಯಲ್ಲೂ ಗಮನಕ್ಕೆ ತರಲಾಗಿತ್ತು. ಆದರೇ ಗಮನವಹಿಸಿರುವುದಿಲ್ಲ. ಕೂಡಲೇ ಇರುವ ಸಂತೇ ಮೈದಾನವನ್ನು ಶ್ರೀ ಜವೇನಹಳ್ಳಿ ಮಠದ ಬಳಿ ಖಾಲಿ ಇರುವ ಕೆರೆ ಸುತ್ತ ಮುತ್ತ ನಡೆಸಲು ಬದಲಾವಣೆ ಮಾಡುವಂತೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ನಗರಸಭೆ ಅಧ್ಯಕ್ಷರು, ಸ್ಲ್ಯಾಬ್ ಬಗ್ಗೆ ಪರಿಶೀಲನೆ ಮಾಡಿ ಹಾಕಿಸಲಾಗುವುದು. ಇನ್ನು ಸಂತೆ ನಡೆಸುವ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ನಿಲ್ದಾಣದ ಬಗ್ಗೆ ಮುಂದೆ ತಿಳಿಸುವುದಾಗಿ ಹೇಳಿದರು. ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಮಾತನಾಡಿ, ನಗರದಲ್ಲಿ ಇರುವ ಶೌಚಾಲಯಗಳ ಬಾಗಿಲನ್ನು ಪ್ರತಿನಿತ್ಯ ತೆಗೆಸಿ ಸಾರ್ವಜನಿಕರ ಅನುಕೂಲಕ್ಕೆ ಮಾಡಿಕೊಡಬೇಕು. ಇನ್ನು ಸಂತೆ ವೇಳೆ ಕರುಗಳನ್ನು ಬಿಟ್ಟು ಹೋಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ನಗರಸಭೆ ಅಧ್ಯಕ್ಷರು, ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಇದಾದ ನಂತರ ಭಾಗವಹಿಸಿದ್ದ ಸಾರ್ವಜನಿಕರು ನಗರದ ವಿವಿಧ ಸಮಸ್ಯೆಗಳ ಹಾಗೂ ಮೂಲಭೂತ ಸೌಕರ್ಯದ ಬಗ್ಗೆ ಗಮನ ಸೆಳೆದರು.

ನಗರಸಭೆಯ ೨೦೨೫-೨೬ನೇ ಸಾಲಿನ ಆಯವ್ಯಯ ತಯಾರಿಸುವ ಸಂಬಂಧ ಮೊದಲನೇ ಸುತ್ತಿನ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ನಗರಸಭೆಯ ಇಂಜಿನಿಯರ್ ಚನ್ನೇಗೌಡ, ಸೂಪರಿಡೆಂಟ್ ಮನೋಹರ್, ಆರ್‌.ಒ. ಅಭಿಲಾಶ್, ಪ್ರಕಾಶ್, ಇತರರು ಉಪಸ್ಥಿತರಿದ್ದರು.

Share this article