ಯಂತ್ರಗಳು ಸಂಸ್ಕೃತಿ ಕದಿಯಲು ಸಾಧ್ಯವಿಲ್ಲ: ಎಚ್.‌ಆರ್.‌ ರಂಗನಾಥ್‌

KannadaprabhaNewsNetwork |  
Published : Feb 11, 2025, 12:47 AM IST

ಸಾರಾಂಶ

ಭರಮಸಾಗರದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ । ಸಮಾಜದಲ್ಲಿ ಮತ್ತೊಬ್ಬರ ಕಷ್ಟಕ್ಕೆ ನೆರವಾಗಬೇಕೆಂದು ಸಲಹೆ

ಕನ್ನಡಪ್ರಭ ವಾರ್ತೆ ಸಿರಿಗೆರೆ

ಭವಿಷ್ಯದ ನಮ್ಮ ಮಾಧ್ಯಮಗಳ ಸ್ವರೂಪ ಈಗ ಇರುವಂತೆ ಇರದೇ ಬದಲಾವಣೆಯಾಗುವ ಎಲ್ಲ ಸಾಧ್ಯತೆಗಳು ಇವೆ ಎಂದು ಹಿರಿಯ ಪತ್ರಕರ್ತ, ಪಬ್ಲಿಕ್‌ ಟಿವಿ ಮುಖ್ಯಸ್ಥ ಎಚ್.‌ಆರ್.‌ ರಂಗನಾಥ್‌ ಹೇಳಿದರು.

ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸೋಮವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಈ ಹಿಂದೆ ಪತ್ರಿಕೆಗಳು, ಆಕಾಶವಾಣಿ, ಟಿ.ವಿ.ಗಳು ಮಾಡುತ್ತಿದ್ದ ಕೆಲಸವನ್ನು ಈಗ ಬೇರೆ ಬೇರೆ ಮಾಧ್ಯಮಗಳು ಆವರಿಸಿಕೊಂಡಿವೆ. ಹುಟ್ಟುವ ಮಗುವಿನ ದೇಹಕ್ಕೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಚಿಪ್‌ಗಳನ್ನು ಅಳವಡಿಸುವ ಕಾಲವೂ ಬರಬಹುದು. ಹುಟ್ಟುವ ಮಗುವಿನ ಕಣ್ಣಿನ ಪರೆದೆಗೆ ಲೆನ್ಸ್‌ ಅಳವಡಿಸುವ ಪ್ರಯತ್ನಗಳೂ ನಡೆಯಬಹುದು. ಆದರೆ ನಮ್ಮ ಸಂಸ್ಕೃತಿಯನ್ನು ಯಂತ್ರಗಳು ಕದಿಯಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು ಎಂದರು.

ಮಾಧ್ಯಮಗಳಲ್ಲಿರುವ ಜನರೂ ವಿಶೇಷ ವ್ಯಕ್ತಿತ್ವದವರೇನಲ್ಲ. ಸಮಾಜದಲ್ಲಿರುವ ಕೃಷಿಕರು, ವೈದ್ಯರು, ವಕೀಲರೂ ಇರುವಂತೆಯೇ ಮಾಧ್ಯಮದವರು ಇದ್ದಾರೆ. ಇವರ ಮಧ್ಯೆ ರೈತರು ಮಾತ್ರ ಮುಗ್ದವಾಗಿ ತಮ್ಮ ದುಡಿತದಲ್ಲಿ ಮುಳುಗಿದ್ದಾರೆ. ಅವರು ಚಿಂತೆಗಳಿಲ್ಲದಂತೆ ರಾತ್ರಿ ನಿದ್ದೆ ಮಾಡುತ್ತಾರೆ. ಶಿಕ್ಷಣದ ವಿಚಾರವಾಗಿ ಬಿತ್ತರಿಸಿದ ಕಾರ್ಯಕ್ರಮಗಳನ್ನು ಸಾವಿರ ಜನ ನೋಡಿದರೆ, ಭೂತದ ವಿಚಾರಗಳನ್ನು ೧೦ ಸಾವಿರ ಜನರು ನೋಡುವುದು ಟಿವಿ ರೇಟಿಂಗ್‌ಗಳ ಮೂಲಕ ಮನವರಿಕೆಯಾಗಿದೆ ಎಂದರು.

ತರಳಬಾಳು ಹುಣ್ಣಿಮೆ ವಿಶೇಷ ಕಾರ್ಯಕ್ರಮ. ಸ್ವಾಮೀಜಿಯವರು ತಮ್ಮ ಸಮಚಿತ್ತದ ಮೂಲಕ ಈ ಕಾರ್ಯಕ್ರಮವನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ಒಂದು ಎಕರೆ ಗದ್ದೆಯಲ್ಲಿ ಎಷ್ಟು ಭತ್ತ ಬೆಳೆದೆವು ಅನ್ನುವುದಕ್ಕಿಂತ ಎಷ್ಟು ಗಟ್ಟಿ ಭತ್ತ ಬೆಳೆದವು ಎಂಬುದನ್ನು ನಾವು ತಿಳಿಯಬೇಕು. ದೇವರ ಮೇಲೆ ನಂಬಿಕೆ ಇರುವ ನಾವು ಮತ್ತೊಬ್ಬರ ಕಷ್ಟಕಾಲದಲ್ಲಿ ಮತ್ತೊಬ್ಬರಿಗೆ ನೆರವಾಗುವುದನ್ನು ರೂಢಿಸಿಕೊಳ್ಳಬೇಕು ಎಂದರು.

ವಿಸ್ತಾರ ನ್ಯೂಸ್‌ನ ಎಂ.ಎಸ್.‌ ಶರತ್‌ ಮಾತನಾಡಿ, ಶೇ.೭೬ರಷ್ಟು ಅಕ್ಷರ ಸಾಕ್ಷರತೆ ಇರುವ ದೇಶದಲ್ಲಿ ಶೇ.೨೪ರಷ್ಟು ಜನರು ಮಾತ್ರವೇ ಹಣಕಾಸಿನ ಸಾಕ್ಷರತೆ ಹೊಂದಿದ್ದಾರೆ. ಬಹುತೇಕರು ಹಣಕಾಸಿನ ನಿರ್ವಹಣೆಯ ವಿಚಾರ ತಿಳಿದುಕೊಂಡಿಲ್ಲ. ನಮ್ಮ ಶಿಕ್ಷಣದ ಯಾವ ಹಂತದಲ್ಲಿಯೂ ಹಣಕಾಸಿನ ನಿರ್ವಹಣೆಗೆ ವಿಚಾರ ಹೇಳಿಕೊಡುವುದಿಲ್ಲ. ಜನರು ಉಳಿಸಿದ ಹಣವನ್ನು ಬೆಳೆಸುವ ಬಗೆ ಕಲಿತುಕೊಳ್ಳಬೇಕು. ಹಣದ ಬಗ್ಗೆ ಮಧ್ಯಮ ವರ್ಗದಲ್ಲೂ ತಿಳಿವಳಿಕೆ ಕಡಿಮೆ ಇದೆ ಎಂದರು.

ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹರಿಹರ ರಾಜನಹಳ್ಳಿ ವಾಲ್ಮಿಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಸುದರ್ಶನ್‌ ಚನ್ನಂಗಿಹಳ್ಳಿ, ಪೊಲೀಸ್‌ ಮಹಾನಿರೀಕ್ಷಕ ಬಿ.ಆರ್.‌ ರವಿಕಾಂತೇಗೌಡ, ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಮೀಡಿಯಾ ಮಾಸ್ಟರ್‌ನ ಎಂ.ಎಸ್.‌ ರಾಘವೇಂದ್ರ, ಬೆಳ್ಳಿ ಪ್ರಕಾಶ್‌, ಎಚ್.ಪಿ, ರಾಜೇಶ್‌, ಎಂಎಲ್‌ಸಿ ನವೀನ್‌, ಎಚ್.‌ಆರ್.‌ ಬಸವರಾಜಪ್ಪ ಮುಂತಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!