ಹಂಪಿ ಹೆಬ್ಬಂಡೆಗಳ ಮಧ್ಯೆ ಮದಗಜಗಳ ಕಾದಾಟ!

KannadaprabhaNewsNetwork |  
Published : Feb 04, 2024, 01:33 AM IST
ಹಂಪಿ ಉತ್ಸವದ ಕುಸ್ತಿ ಅಖಾಡದಲ್ಲಿ ಕುಸ್ತಿ ಪಟುಗಳು ಸೆಣಸಾಟ | Kannada Prabha

ಸಾರಾಂಶ

ಕುಸ್ತಿಪಟುಗಳು ವಿಭಿನ್ನ ಪಟ್ಟುಗಳನ್ನು ಹಾಕುತ್ತಿದ್ದಂತೆ ನೆರೆದಿದ್ದ ಜನ ಸೀಳ್ಳೆ ಕೇಕೆಗಳನ್ನು ಹಾಕಿ ಚೆಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಚಂದ್ರು ಕೊಂಚಿಗೇರಿ

ಹಂಪಿ: ಐತಿಹಾಸಿಕ ಹಂಪಿ ಸುತ್ತುವರಿದಿರುವ ಹೆಬ್ಬಂಡೆಗಳ ಮಧ್ಯೆ ಹೊಸ ಮಲಪನಗುಡಿಯ ವಿದ್ಯಾರಣ್ಯ ಪೀಠ ಹೈಸ್ಕೂಲ್‌ ಮೈದಾನದಲ್ಲಿ ಯುವಜನ ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾಟಕ್ಕೆ ಶಾಸಕ ಎಚ್‌.ಆರ್‌. ಗವಿಯಪ್ಪ ತೊಡೆ ತಟ್ಟುವ ಮೂಲಕ ಚಾಲನೆ ನೀಡಿದರು.

ವಿಜಯನಗರ ಅರಸರ ಕಾಲದ ಶ್ರೀಕೃಷ್ಣದೇವರಾಯನೂ ಕುಸ್ತಿಪಟು ಆಗಿದ್ದರು. ಇದರಿಂದ ಈ ಭಾಗದಲ್ಲಿ ಕುಸ್ತಿ ಪಂದ್ಯ ಹೆಚ್ಚು ಪ್ರಚಲಿತವಿದೆ. ಪ್ರತಿಬಾರಿ ಹಂಪಿ ಉತ್ಸವದಲ್ಲಿ ಕುಸ್ತಿ ಪಂದ್ಯಾಟಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ.

ಹಂಪಿ ಕೇಸರಿ, ಹಂಪಿ ಕಂಠೀರವ, ಹಂಪಿ ಕಿಶೋರಿ ಎಂಬ ಮೂರು ವಿಭಾಗಗಳಲ್ಲಿ ಕುಸ್ತಿಯನ್ನು ಆಯೋಜಿಸಲಾಗಿತ್ತು, ಪ್ರತಿ ಉತ್ಸವದಲ್ಲಿ ಹಂಪಿ ಕೇಸರಿ, ಹಂಪಿ ಕಿಶೋರಿ ಎಂಬ 2 ವಿಭಾಗಗಳು ಮಾತ್ರ ಆಯೋಜಿಸಲಾಗುತ್ತಿತ್ತು, ಆದರೆ ಈ ಬಾರಿ ಶಾಸಕ ಎಚ್‌.ಆರ್‌. ಗವಿಯಪ್ಪ ಅವರು ಹೆಚ್ಚು ಕುಸ್ತಿಗೆ ಆದ್ಯತೆ ನೀಡುವ ಮೂಲಕ ರಾಜ್ಯ ಮಟ್ಟದ ಕುಸ್ತಿಗೆ ಹಂಪಿ ಕಂಠೀರವ ಎಂಬ ಹೆಸರಿನೊಂದಿಗೆ ಮತ್ತೊಂದು ವಿಭಾಗವನ್ನು ಆರಂಭಿಸಿದ್ದಾರೆ.

ಕುಸ್ತಿಪಟುಗಳು ವಿಭಿನ್ನ ಪಟ್ಟುಗಳನ್ನು ಹಾಕುತ್ತಿದ್ದಂತೆ ನೆರೆದಿದ್ದ ಜನ ಸೀಳ್ಳೆ ಕೇಕೆಗಳನ್ನು ಹಾಕಿ ಚೆಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದರು.

ಕೆಂಪು ಹುಡಿ ಮಣ್ಣಿನಿಂದ ತಯಾರಿಸಿದ ಕುಸ್ತಿ ಅಖಾಡದಲ್ಲಿ, ಎದುರಾಳಿಯನ್ನು ಮಣಿಸಿ ಮಣ್ಣು ಮುಕ್ಕಿಸುವಂತಹ ಪಟ್ಟುಗಳನ್ನು ಹಾಕಿ ಕೆಲ ಕುಸ್ತಿಪಟುಗಳು ತಕ್ಷಣದಲ್ಲೇ ಸೋಲುಣಿಸಿದರು. ಬೃಹತ್ ಕುಸ್ತಿ ಅಖಾಡದಲ್ಲಿ ಮದಗಜಗಳಂತೆ ಕುಸ್ತಿಪಟುಗಳು ಸೆಣಸಾಡಿದರು. ಅಂತಿಮವಾಗಿ ಬೆಳಗಾವಿಯ ಮುಸ್ಲಿಕ್ ಆಲಂ ರಾಜಾಸಾಬ್ ಹಂಪಿ ಕೇಸರಿ ಪಟ್ಟವನ್ನು ತಮ್ಮದಾಗಿಸಿಕೊಂಡರು. ಮುಧೋಳಿನ ಸದಾಶಿವ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.ಮದವೇರಿದ ಮದಗಜಗಳಂಥ ಹುಮ್ಮಸ್ಸು, ಎದುರಾಳಿಯನ್ನು ಕೆಡವಿಹಾಕುವ ಕೆಚ್ಚು, ಭುಜ ತಟ್ಟಿಕೊಂಡು ಕೈ ಕೈ ಮಿಲಾಯಿಸಿ ಕುಸ್ತಿಪಟುಗಳು ಪ್ರತಿಸ್ಪರ್ಧಿಗಳನ್ನು ಮಣಿಸುವ ದೃಶ್ಯ ನೋಡುಗರಲ್ಲಿ ರೋಮಾಂಚನ, ಗೆದ್ದವರಿಗೆ ಚಪ್ಪಾಳೆಯ ಮೆಚ್ಚುಗೆ ವ್ಯಕ್ತವಾದವು.

ನೆತ್ತಿಯ ಮೇಲೆ ರಣಬಿಸಿಲು, ಅಖಾಡದಲ್ಲಿ ಕುಸ್ತಿ ಪಂದ್ಯಾಟದ ಬಿಸಿ ನೆರೆದಿದ್ದ ಸಮೂಹದವರ ಬೆವರಿಳಿಸುತ್ತಿದ್ದರೆ, ಇತ್ತ ಪೈಲ್ವಾನರು ಸಹ ತಮ್ಮ ಎದುರಾಳಿಗಳ ಬೆವರಿಳಿಸುವಲ್ಲಿ ನಿರತರಾಗಿದ್ದ ದೃಶ್ಯ ಎಂಥವರನ್ನೂ ಕುತೂಹಲದಿಂದ ನಿಂತು ವೀಕ್ಷಿಸುವಂತೆ ಮಾಡಿತ್ತು.

ಶಾಸಕ ಗವಿಯಪ್ಪ ಅವರು 86 ಕೆಜಿ ವಿಭಾಗದಲ್ಲಿ ದಾವಣಗೆರೆಯ ಬಸವರಾಜ ಪಾಟೀಲ ಹಾಗೂ ಮರಿಯಮ್ಮನಹಳ್ಳಿಯ ಹನುಮಂತ ಸ್ಪರ್ಧಿಗಳ ನಡುವೆ ಹಸ್ತಲಾಘವ ಮಾಡಿಸಿ, ಕುಸ್ತಿಪಟುಗಳನ್ನು ಅಖಾಡಕ್ಕೆ ಧುಮಿಕಿಸಿದರು.

ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕುಸ್ತಿ ಪಟುಗಳು ಭಾಗವಹಿಸಿದ್ದರು. ಈ ಬಾರಿ 15ಕ್ಕೂ ಹೆಚ್ಚು ಮಹಿಳಾ ಕುಸ್ತಿಪಟುಗಳು ಸ್ಪರ್ಧಿಸಿದ್ದು ವಿಶೇಷವಾಗಿತ್ತು.

ದಾವಣಗೆರೆಯ ಬಸವರಾಜ ಪಾಟೀಲ ಹಾಗೂ ಮರಿಯಮ್ಮನಹಳ್ಳಿಯ ಹನುಮಂತ ಅವರ ನಡುವೆ ನಡೆದ ಪ್ರಾರಂಭಿಕ ಕುಸ್ತಿ ಸ್ಪರ್ಧೆಯಲ್ಲಿ ಬಸವರಾಜ ಪಾಟೀಲ ಎದುರಾಳಿಯನ್ನು ಮಣಿಸಿ ಗೆಲುವಿನ ನಗೆ ಬೀರಿದರು.

ಗದುಗಿನ ತೇಜಸ್ವಿನಿ- ಗದುಗಿನ ಶ್ರೀದೇವಿ ಮಡಿವಾಳ ಮಧ್ಯೆ ನಡೆದ ಪ್ರಾರಂಭದ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ತೇಜಸ್ವಿನಿ ವಿಜಯಶಾಲಿಯಾದರು. ವಿವಿಧೆಡೆಗಳಿಂದ ಆಗಮಿಸಿದ್ದ ಸಾರ್ವಜನಿಕರು ಕುತೂಹಲದಿಂದ ಕುಸ್ತಿ ಪಂದ್ಯಗಳನ್ನು ವೀಕ್ಷಿಸಿದರು.

ಪುರುಷರ ಕುಸ್ತಿ ಸ್ಪರ್ಧೆ ಫಲಿತಾಂಶ

ಹಂಪಿ ಕೇಸರಿ: ಮುಸ್ಲಿಕ್ ಆಲಂ ರಾಜಾಸಾಬ್- ಬೆಳಗಾವಿ

ಹಂಪಿ ಕಂಠೀರವ: ಆದಿತ್ಯ, ಧಾರವಾಡ

ಹಂಪಿ ಕಿಶೋರ: ಮಂಜು ಗೊರವರ, ಹರಪನಹಳ್ಳಿ

ಹಂಪಿ ಕುಮಾರ: ಶರತ್ ಸಾದರ್, ಹರಪನಹಳ್ಳಿ

ಮಹಿಳೆಯರ ಕುಸ್ತಿ ಸ್ಪರ್ಧೆ ಫಲಿತಾಂಶ

ಹಂಪಿ ಕೇಸರಿ- ತೇಜಸ್ವಿನಿ ಬಿಂಗಿ, ಗದಗ

ಹಂಪಿ ಕಂಠೀರವ- ಭುವನೇಶ್ವರಿ ಕೋಳಿವಾಡ, ಗದಗ

ಹಂಪಿ ಕಿಶೋರಿ- ವೈಷ್ಣವಿ ಇಮ್ಮಡಿಯವರ, ಗದಗ

ಹಂಪಿ ಕುಮಾರಿ- ಭುವನೇಶ್ವರಿ ಕೆ.ಎಸ್., ಶಿವಮೊಗ್ಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ