ಕನ್ನಡಪ್ರಭ ವಾರ್ತೆ ಹೊಸದುರ್ಗ
ಶ್ರೀಗಳಿಗೆ ಅಸ್ಪೃಶ್ಯತೆ ಆಗಿದೆ ಎಂದು ಹೇಳುವುದಾದರೆ ದಾಖಲೆ ಏನಿದೆ? ಸಾಕ್ಷಿ ಏನಾದರೂ ಇದ್ದರೆ ಮೊದಲು ಬಿಡುಗಡೆ ಮಾಡಲಿ. ಅಮೇಲೆ ಚರ್ಚೆ ಮಾಡೋಣ. ಕಳೆದ ಐದಾರು ವರ್ಷಗಳಿಂದಲೂ ಶ್ರೀಗಳು ದೇವಸ್ಥಾನಕ್ಕೆ ಬರುತ್ತಿದ್ದಾರೆ. ಅಂದು ಇಲ್ಲದ ಸಮಸ್ಯೆ ಈಗ ಯಾಕೆ ಬಂತು ಎಂದು ಗೊತ್ತಿಲ್ಲ. ಶ್ರೀಗಳು ದೇವಾಲಯದ ಹೆಸರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಗ್ರಾಮದ ಯುವಕ ಅರುಣ ಸೇರಿದಂತೆ ಹಲವಾರು ಗ್ರಾಮಸ್ಥರು ಪ್ರತಿಕ್ರಿಯಿಸಿದರು. ಗ್ರಾಮಸ್ಥರಿಗೆ ಘಟನೆ ಸಂಬಂಧವಿಲ್ಲ: ಕುಂಚಟಿಗಶ್ರೀ
ದೇಗುಲದ ಗರ್ಭಗುಡಿ ಪ್ರವೇಶಕ್ಕೆ ನಿಷೇಧದ ಕಹಿ ಘಟನೆ ನಡೆದಾಗ ಈಶ್ವರನಂದಪುರಿ ಶ್ರೀಗಳೊಂದಿಗೆ ನಾವೂ ಇದ್ದೆವು. ಮೂವರು ಮಠಾಧೀಶರು ವೈಕುಂಠ ಏಕಾದಶಿಯಲ್ಲಿ ಭಾಗಿಯಾಗಿದ್ದೆವು. ಪ್ರಧಾನ ಅರ್ಚಕರು ಗರ್ಭಗುಡಿಯಲ್ಲಿ ಇದ್ದರು. ಪೂಜಾರ ಮಹಿಳೆಯರನ್ನು ಗರ್ಭಗುಡಿಯ ಪ್ರಾಂಗಣಕ್ಕೆ ಬಿಟ್ಟರು. ಮಠಾಧೀಶರ ಮುಂದೆಯೇ ಪೂಜಾರಿ ಕುಟುಂಬದ ಮಹಿಳೆಯರನ್ನು ಒಳಗೆ ಕರೆದರು. ಈ ಬಗ್ಗೆ ಮಠಾಧೀಶರನ್ನು ಹೊರಗಿಟ್ಟರು ಎಂಬ ಭಾವನೆಯನ್ನು ಈಶ್ವರನಂದಪುರಿ ಶ್ರೀ ವ್ಯಕ್ತಪಡಿಸಿದ್ದಾರೆ. ನಮ್ಮನ್ನು ಭಕ್ತರು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದ್ದಾರೆ. ಗ್ರಾಮಸ್ಥರಿಗೂ ಈ ಘಟನೆಗೂ ಸಂಬಂಧವಿಲ್ಲ. ಅರ್ಚಕರ ಕುಟುಂಬಸ್ಥರಿಂದ ಅಚಾತುರ್ಯವಾಗಿದೆ. ತಹಶೀಲ್ದಾರ್, ಅರ್ಚಕರ ಸಮ್ಮುಖದಲ್ಲಿ ಸೌಹಾರ್ದತಾ ಸಭೆ ನಡೆಸಲಿದ್ದೇವೆ. ಇನ್ನು, ಏಕಾದಶಿಯಂದು ದೇಗುಲ ಸ್ವಚ್ಛಗೊಳಿಸಿಲ್ಲ, ಗರ್ಭ ಗುಡಿಗೆ ನಾವೇ ಹೋಗಲ್ಲ ಎಂದು ಹೊಸದುರ್ಗದ ಕುಂಚಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.ಗರ್ಭಗುಡಿ ಪ್ರವೇಶ ಬಯಕೆ ಇಲ್ಲ: ಭಗೀರಥ ಶ್ರೀಭಾರತೀಯ ಹಿಂದೂ ಧರ್ಮದಲ್ಲಿ ನಮ್ಮದೇ ಆದ ಸಂಪ್ರದಾಯ, ಆಚರಣೆ ನಡೆಸುತ್ತಿದ್ದೇವೆ. ಗರ್ಭಗುಡಿಗೆ ಪ್ರವೇಶಿಸುವ ಬಯಕೆ ನಮಗಿಲ್ಲ. ಗ್ರಾಮದ ಎಲ್ಲಾ ಸಮಾಜದವರು ಏಕಾದಶಿ ಆಚರಿಸುತ್ತಿದ್ದರು. ಪ್ರಧಾನ ಅರ್ಚಕರು ಪೂಜೆ ಮಾಡುವ ವೇಳೆ ಅವರ ಸಹಾಯಕರು, ಕುಟುಂಬಸ್ಥರು ಪೂಜೆಗೆ ನಿಂತರು. ಆಗ ಪೂಜ್ಯರಾದ ನಮಗೆ ಗೌರವ ಸಿಗದ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಹೇಗೆ ಗೌರವ ಸಿಗಲಿದೆ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಕೆಲ ಭಕ್ತರು ಅಸಮಾಧಾನ ಹೊರ ಹಾಕಿದ್ರು ವಿವಾದ ಮಾಡಬಾರದೆಂಬ ಉದ್ದೇಶದಿಂದ ಎಲ್ಲೂ ವಿಚಾರ ಪ್ರಸ್ತಾಪಿಸಿಲ್ಲ. ಬಾಗೂರಿನಲ್ಲಿ ಎಲ್ಲಾಜನಾಂಗದ ಜನರು ನಮ್ಮನ್ನು ಗೌರವಿಸಿದ್ದಾರೆ. ಹಿಂದುಳಿದ, ಶೋಷಿತ ಸಮುದಾಯಗಳಿಗೂ ಗೌರವ ಸಿಗಬೇಕು. ದೇಗುಲಗಳಲ್ಲಿ ಶೋಷಣೆ ಆಗದಂತೆ ಎಚ್ಚರ ವಹಿಸಬೇಕು ಈ ಬಗ್ಗೆ ತಾಲೂಕು ಆಡಳತದೊಂದಿಗೆ ಚರ್ಚಿಸಿ ವಿವಾದ ತಿಳಿಗೊಳಿಸುತ್ತೇವೆ ಎಂದು ಭಗೀರಥ ಪೀಠದ ಪುರುಷೊತ್ತಮನಂದಾಪುರಿ ಶ್ರೀಗಳು ಹೇಳಿದರು.ಚರ್ಚಿಸಿ ವಿವಾದಕ್ಕೆ ತೆರೆ ಎಳೆಯುತ್ತೇವೆ: ಕನಕಶ್ರೀಸಮಸಮಾಜ ನಿರ್ಮಾಣದ ಕನಸು ಬಸವಾದಿ ಶಿವಶರಣರದ್ದಾಗಿತ್ತು. ದೇಗುಲ, ಮಠ, ಮಂದಿರಗಳಲ್ಲಿ ಜಾತಿ ಅಸಮಾನತೆ ಜೀವಂತವಾಗಿದೆ. ದೇಗುಲ ಉದ್ಘಾ ಟನೆ ವೇಳೆ ದಲಿತ ಹೆಣ್ಣು ಮಕ್ಕಳನ್ನು ಹೊರಹಾಕಿದ ಅನೇಕ ಪ್ರಸಂಗಗಳಿವೆ. ಪೂಜಾರ ಪರಿವಾರದ ಮಹಿಳೆಯರಿಗೆ ದೇಗುಲ ಪ್ರವೇಶವಿದೆ. ಆದರೆ ಶೋಷಿತ ಸಮುದಾಯದವರಿಗೆ ಯಾಕೆ ಪ್ರವೇಶವಿಲ್ಲ ಎಂಬ ಚರ್ಚೆ ವಿಷಯವಾಗಿ ಸಾಣೆಹಳ್ಳಿ ಗೋಷ್ಠಿಯಲ್ಲಿ ಮಾತನಾಡಿದ್ದೇವೆ. ದೇವಸ್ಥಾನವನ್ನು ಏಕಾದಶಿಯಂದು ಸ್ವಚ್ಛತೆ ಗೊಳಿಸಿಲ್ಲ. ಆ ವಿಚಾರ ಹಳೆಯದು. ಇದನ್ನು ಯಾರೋ ನನಗೆ ಹೇಳಿದ್ದ ಹಿನ್ನೆಲೆಯಲ್ಲಿ ಆತಂಕ ವ್ಯಕ್ತಪಡಿಸಿದ್ದೇನೆ. ಅಸಮಾನತೆ ವಾತಾವರಣ ಬೇಡ, ದಲಿತ ಮಹಿಳೆ ಅಂತ ಹೊರಗೆ ನಿಲ್ಲಿಸೋದೂ ಬೇಡ. ಹಿಂದೂ ನಾವೆಲ್ಲಾ ಒಂದು ಎಂಬ ಘೋಷಣೆಗೆ ಈ ವಿವಾದ ಅಪವಾದ ಎನ್ನಿಸಲಿದೆ. ತಾಲ್ಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳೊಂದಿಗೆ ಮತ್ತು ಗ್ರಾಮಸ್ಥರ ಜೊತೆ ಚರ್ಚಿಸಿ ಸೌಹಾರ್ದತೆಯಿಂದ ವಿವಾದಕ್ಕೆ ತೆರೆ ಎಳೆಯುತ್ತೇವೆ ಎಂದು ಈಶ್ವರಾನಂದಪುರಿ ಶ್ರೀ ಹೇಳಿದ್ದಾರೆ.