ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಅಪೆಂಡಿಕ್ಸ್ ಇ- 5054 ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ₹2 ಕೋಟಿ ಅನುದಾನದಲ್ಲಿ ಮಡಹಳ್ಳಿ ಸರ್ಕಲ್‌ನಿಂದ ಸುಮಾರು 800 ಮೀ. ರಸ್ತೆ ಡಾಂಬರೀಕರಣವಾಗಲಿದೆ. ರಸ್ತೆಯ ಎರಡು ಬದಿ ತಲಾ 800 ಮೀ. ಉದ್ದದ 7 ಮೀ. ಆಗಲದ ರಸ್ತೆ, ಎರಡು ಬದಿ ಚರಂಡಿ ಆಗಲಿದೆ.
ಲೋಕೋಪಯೋಗಿ ಸಹಾಯಕ ಕಾರ್ಯ ಪಾಲಕ ರವಿಕುಮಾರ್ ಮಾತನಾಡಿ, ಮಳೆ ಬಂದಾಗಲೆಲ್ಲ ಮಳೆ ನೀರು ನಿಲ್ಲುವ ಜಾಗದಲ್ಲಿ 13 ಮೀ. ಡೆಕ್ ಕೂಡ ನಿರ್ಮಾಣವಾಗಲು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ₹2 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇ ಕಾರಣ ಎಂದು ಮಾಹಿತಿ ನೀಡಿದರು. ₹2 ಕೋಟಿ ವೆಚ್ಚದ ರಸ್ತೆ, ಚರಂಡಿ, ಡೆಕ್ ಕಾಮಗಾರಿ ಮುಗಿಸಲು ಕನಿಷ್ಟ ಮೂರು ತಿಂಗಳ ಕಾಲಾವಕಾಶ ನೀಡಿದ್ದು, ಕಾಮಗಾರಿ ಬೇಗ ಮುಗಿಸಲು ಶಾಸಕರು ಕೂಡ ಸೂಚನೆ ನೀಡಿದ್ದಾರೆ ಎಂದರು.ಸರ್ಕಲ್ ಅಲ್ಲ, ಚಿಕ್ಕ ಕೆರೆ: ಪಟ್ಟಣದಲ್ಲಿ ಮಳೆ ಬಂದಾಗಲೆಲ್ಲ ಮಡಹಳ್ಳಿ ಸರ್ಕಲ್ ತುಂಬೆಲ್ಲ ನೀರು ನಿಂತು ಕೆರೆಯಂತಾಗುತ್ತಿತ್ತು. ವಾಹನ ಸವಾರರು, ಪಾದಚಾರಿಗಳು ಸಂಚರಿಸಲು ಪರದಾಡುವಂತಾಗಿತ್ತು. ಈ ರಸ್ತೆಯಲ್ಲಿ ಪೊಲೀಸ್ ಠಾಣೆ, ವಲಯ ಅರಣ್ಯ ಕಚೇರಿ, ನ್ಯಾಯಾಲಯ, ಜೆಎಸ್‌ಎಸ್ ಕಾಲೇಜು, ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಜೊತೆಗೆ ಬರಗಿ ಗ್ರಾಮಕ್ಕೆ ತೆರಳಲು ಪ್ರಮುಖ ರಸ್ತೆ ಇದಾಗಿತ್ತು.
ಹತ್ತಾರು ವರದಿ ಪ್ರಕಟ:ಮಡಹಳ್ಳಿ ಸರ್ಕಲ್ ಹಾಗು ಅದ್ವಾನವಾಗಿ ಹೋಗಿದ್ದ ಬಗ್ಗೆ ಕನ್ನಡಪ್ರಭ ಹತ್ತಾರು ವರದಿಗಳನ್ನು ಪ್ರಕಟಿಸಿ ತಾಲೂಕು ಆಡಳಿತ ಹಾಗು ಸ್ಥಳೀಯ ಶಾಸಕರ ಗಮನಕ್ಕೆ ತರುವ ಕೆಲಸ ಮಾಡಿದೆ.