ಎಂಎಡಿಬಿ ಅಭಿವೃದ್ಧಿಯತ್ತ ಕೊಂಡೊಯ್ಯುವೆ: ಮಂಜುನಾಥ್‌ ಗೌಡ ಭರವಸೆ

KannadaprabhaNewsNetwork |  
Published : Mar 05, 2024, 01:36 AM IST
ಪೋಟೋ: 4ಎಸ್ಎಂಜಿಕೆಪಿ02ಶಿವಮೊಗ್ಗದಲ್ಲಿ ನಗರದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಸೋಮವಾರ ಎಂಎಡಿಬಿ ನೂತನ ಅಧ್ಯಕ್ಷರಾಗಿ ಆರ್‌.ಎಂ.ಮಂಜುನಾಥ್ ಗೌಡ ಅಧಿಕಾರ ಸ್ವಿಕರಿಸಿದರು. | Kannada Prabha

ಸಾರಾಂಶ

ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲೂ ಪ್ರಾಧಿಕಾರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವೆ. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಎಂಬುವುದು ದಿ. ಎಸ್‌. ಬಂಗಾರಪ್ಪ ಅವರ ಕನಸು. ಇಲ್ಲಿ ಬೇಕಾದಷ್ಟು ಕೆಲಸವಿದೆ ಎಂಬುವುದು ನಿಜ. ನಿಭಾಯಿಸುವುದು ಅಷ್ಟು ಸುಲಭವಲ್ಲ ಎಂಬ ಅರಿವಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷ ಆರ್‌.ಎಂ.ಮಂಜುನಾಥ್‌ ಗೌಡ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವರ್ತೆ ಶಿವಮೊಗ್ಗ ಆರ್ಥಿಕ ಮುಗ್ಗಟ್ಟಿನ ಇಂತಹ ಪರಿಸ್ಥಿತಿಯಲ್ಲೂ ಪ್ರಾಧಿಕಾರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ಎಂಎಡಿಬಿ) ನೂತನ ಅಧ್ಯಕ್ಷ ಆರ್‌.ಎಂ.ಮಂಜುನಾಥ್‌ ಗೌಡ ಭರವಸೆ ನೀಡಿದರು.

ನಗರದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಸೋಮವಾರ ಎಂಎಡಿಬಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಎಂಬುವುದು ದಿ. ಎಸ್‌. ಬಂಗಾರಪ್ಪ ಅವರ ಕನಸು. ನನಗೆ ಕೊಟ್ಟ ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ. ಮಲೆನಾಡು ಅಭಿವೃದ್ಧಿ ಮಂಡಳಿ ಎಂಬುವುದು ಬಹುದೊಡ್ಡ ಪ್ರಾಧಿಕಾರವಾಗಿದೆ. ಇಲ್ಲಿ ಬೇಕಾದಷ್ಟು ಕೆಲಸವಿದೆ ಎಂಬುವುದು ನಿಜ. ನಿಭಾಯಿಸುವುದು ಅಷ್ಟು ಸುಲಭವಲ್ಲ ಎಂಬ ಅರಿವಿದೆ. ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಮಲೆನಾಡು ಭಾಗಗಳಲ್ಲಿ ಕಾಲುಸಂಕಗಳು ಅಭಿವೃದ್ಧಿ ಆಗಬೇಕಾಗಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಈ ಹುದ್ದೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಎಲ್ಲ ಸಚಿವರಿಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಆರ್.ಎಂ.ಮಂಜುನಾಥ್‍ಗೌಡ ಅವರ ದಕ್ಷತೆಗಾಗಿ ಈ ಹುದ್ದೆ ಬಂದಿದೆ. ಅವರ ಜವಬ್ದಾರಿ ಮತ್ತಷ್ಟು ಹೆಚ್ಚಿದೆ. ಸಹಕಾರಿ ಕ್ಷೇತ್ರದ ಸಾಮಾನ್ಯ ಪ್ರತಿನಿಧಿಯಾಗಿ ಬಂದಿದ್ದಾರೆ. ಪ್ರಬಲ ಮುಖಂಡರಾಗಿ ಸಹಕಾರ ರತ್ನ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಹೋಗಿ ಈಗ ಈ ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದು ತಿಳಿಸಿದರು.

ಚಂಡು ಎಷ್ಟು ಪುಟಿದರೂ ಅಷ್ಟೇ ವೇಗವಾಗಿ ವಾಪಸ್‌ ಬರುವಂತೆ ಅನೇಕ ಏಳುಬೀಳುಗಳ ನಡುವೆಯೂ ಆರ್.ಎಂ. ಮಂಜುನಾಥಗೌಡರು ಮತ್ತೆ ಮತ್ತೆ ಪುಟಿದೆದಿದ್ದಾರೆ. ಅವರು ಗಟ್ಟಿಕುಳ. ಅವರು ಈ ಹುದ್ದೆಯನ್ನು ಮತ್ತಷ್ಟು ವಿಸ್ತಾರಗೊಳಿಸಲಿ. ಅಭಿವೃದ್ಧಿಪಡಿಸಲಿ. ಇದೊಂದು ಬಹುದೊಡ್ಡ ವಿಸ್ತಾರವಾದ ಕ್ಷೇತ್ರವಾಗಿದೆ. 13 ಜಿಲ್ಲೆಗಳು ಬರುತ್ತವೆ. 72ಕ್ಕೂ ಹೆಚ್ಚು ಶಾಸಕರು ಇಲ್ಲಿರುತ್ತಾರೆ. ಹಾಗಾಗಿ, ಈ ಕ್ಷೇತ್ರವನ್ನು ಅವರು ಮತ್ತಷ್ಟು ವಿಸ್ತರಿಸಲಿ ಎಂದರು.

ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ಆರ್.ಎಂ. ಮಂಜುನಾಥಗೌಡ ಅವರು ಯುವಕರಿಗೆ ಪ್ರೋತ್ಸಾಹ ನೀಡುತ್ತಾರೆ. ಅತ್ಯಂತ ಪ್ರೀತಿಯ ಮನುಷ್ಯ ಶಾಸಕರಾಗ ಬಯಸಿದ್ದರು ಆಗಲಿಲ್ಲ. ಆದರೆ, 68 ಶಾಸಕರು ಕೂಡ ಅವರ ಮುಂದೆ ಕುಳಿತುಕೊಳ್ಳುತ್ತಾರೆ. ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ತೀರ್ಥಹಳ್ಳಿಯ ಶಾಸಕರನ್ನಾಗಿ ಆರ್.ಎಂ. ಮಂಜುನಾಥ್‍ಗೌಡ ಅವರನ್ನು ನೋಡಬೇಕೆಂಬುದೇ ನನ್ನ ಆಸೆ. ಮುಂದಿನ ದಿನಗಳಲ್ಲಿ ಇದು ಈಡೇರುತ್ತದೆ. ಗೌಡರ ಪರವಾಗಿ ನಾನು ಯಾವಾಗಲೂ ಇರುತ್ತೇನೆ ಎಂದರು.

ರಾಜಕೀಯದ ಈ ತುಳಿತದ ಕ್ಷೇತ್ರವನ್ನು ಮೆಟ್ಟಿ ನಿಂತವರು ಗೌಡರು, ಸಹಕಾರ ಕ್ಷೇತ್ರ, ರಾಜಕೀಯ ಕ್ಷೇತ್ರ ಎರಡರಲ್ಲೂ ಮಿಂಚಿದವರು. ಅವರ ಪ್ರೇರಣೆ ಅಪಾರವಾದುದು. ಅನೇಕ ಹೋರಾಟಗಳಿಂದ ಅವರು ಮೇಲೆ ಬಂದಿದ್ದಾರೆ. ಪಕ್ಷ ಬೇದ ಮರೆತು ನಾನು ಸಹ ಹೋರಾಟದಲ್ಲಿ ತೊಡಗಿದ್ದೆ. ಅವರಿಗೆ ಒಳ್ಳೆಯದಾಗಲಿ, ಅವರು ಕೂಡ ಮುಂದೆ ಶಾಸಕರಾಗಲಿ ಎಂದರು.

ಈ ಸಂದರ್ಭದಲ್ಲಿ ಆರ್.ಎಂ.ಮಂಜುನಾಥಗೌಡ ಅವರ ಅಭಿಮಾನಿಗಳು, ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳು ಮುಖಂಡರು ಅಭಿನಂದಿಸಿದರು.

ಪ್ರಮುಖರಾದ ಎಂ.ಶ್ರೀಕಾಂತ್, ಶಿವಕುಮಾರ್, ಅನಿತಾಕುಮಾರಿ, ಮೈಲಾರಪ್ಪ, ಎಚ್.ಸಿ. ಯೋಗೀಶ್, ಎಸ್.ಕೆ.ಮರಿಯಪ್ಪ, ಬಲ್ಕೀಶ್‌ ಬಾನು, ರಮೇಶ್ ಶಂಕರಘಟ್ಟ, ಚಂದ್ರಭೂಪಾಲ್, ಗೋಣಿ ಮಾಲತೇಶ್, ಎಚ್.ಪಿ. ಗಿರೀಶ್, ಮಧು, ಪದ್ಮನಾಭ್, ಕೆಸ್ತೂರು, ಹೊಳೆಯಪ್ಪ ಮುಂತಾದವರಿದ್ದರು.

- - -

ಕೋಟ್‌ ಸರ್ಕಾರ ಗ್ಯಾರಂಟಿಗಳ ನಡುವೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಜನರಲ್ಲಿ ಧೈರ್ಯ ಮೂಡಿದೆ. ವಿರೋಧ ಪಕ್ಷಗಳು ಏನೇ ಹೇಳಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಚಿಕ್ಕಪುಟ್ಟ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ಸರ್ಕಾರ ಜನರಲ್ಲಿ ವಿಶ್ವಾಸ ಮೂಡಿಸಿದೆ

- ಆರ್‌.ಎಂ.ಮಂಜುನಾಥಗೌಡ, ಅಧ್ಯಕ್ಷ, ಎಂಎಡಿಬಿ

- - - -4ಎಸ್ಎಂಜಿಕೆಪಿ02:

ಶಿವಮೊಗ್ಗದಲ್ಲಿ ನಗರದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಸೋಮವಾರ ಎಂಎಡಿಬಿ ನೂತನ ಅಧ್ಯಕ್ಷರಾಗಿ ಆರ್‌.ಎಂ.ಮಂಜುನಾಥ್ ಗೌಡ ಅಧಿಕಾರ ಸ್ವಿಕರಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ