ಮದ್ದೂರು ಕೊತ ಕೊತ ! ನಿಷೇಧಾಜ್ಞೆ ಜಾರಿ, ಇಂದು ಬಂದ್‌

KannadaprabhaNewsNetwork |  
Published : Sep 09, 2025, 01:00 AM ISTUpdated : Sep 09, 2025, 05:44 AM IST
ಮದ್ದೂರು ಗಲಾಟೆ | Kannada Prabha

ಸಾರಾಂಶ

ಭಾನುವಾರ ಸಂಜೆ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅನ್ಯಕೋಮಿನ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

 ಮಂಡ್ಯ/ಮದ್ದೂರು :   ಭಾನುವಾರ ಸಂಜೆ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅನ್ಯಕೋಮಿನ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. 

 ಘಟನೆ ಖಂಡಿಸಿ ಬಿಜೆಪಿ-ಜೆಡಿಎಸ್‌ ಹಾಗೂ ಹಿಂದೂಪರ ಸಂಘಟನೆಗಳು ಸೋಮವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಮೆರವಣಿಗೆ ಮೇಲೆ ಎರಡು ಬಾರಿ ಕಲ್ಲು ತೂರಾಟ, ಮಾರಕಾಸ್ತ್ರ ಝಳಪಿಸಿದ ಘಟನೆಗಳು ನಡೆದಿವೆ. ಈ ವೇಳೆ, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಮಹಿಳೆಯರು ಸೇರಿ 6 ಮಂದಿ ಗಾಯಗೊಂಡಿದ್ದಾರೆ. 

ಈ ಮಧ್ಯೆ, ಹಿಂದೂಪರ ಸಂಘಟನೆಗಳು ಮಂಗಳವಾರ ಮದ್ದೂರು ಬಂದ್‌ಗೆ ಕರೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ. ಇದೇ ವೇಳೆ, ಬುಧವಾರ ಪಟ್ಟಣದಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಆಯೋಜಿಸಲಾಗಿದ್ದು, ರಾಜ್ಯ ಬಿಜೆಪಿ ನಾಯಕರ ನಿಯೋಗ ಇದರಲ್ಲಿ ಪಾಲ್ಗೊಳ್ಳಲಿದೆ.

ಮತ್ತೊಂದೆಡೆ, ಭಾನುವಾರದ ಗಲಭೆ ಸಂಬಂಧ 21 ಮಂದಿಯನ್ನು ಬಂಧಿಸಲಾಗಿದೆ. ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿದೆ. ಈ ಮಧ್ಯೆ, ರಾಮನಗರದ ಚನ್ನಪಟ್ಟಣ ಹಾಗೂ ಕೋಲಾರ ಮೂಲದವರೂ ಈ ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಇದೊಂದು ಪೂರ್ವಯೋಜಿತ ಸಂಚು ಇದ್ದಂತೆ ಕಾಣುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ನಿನ್ನೆಯೂ ಮೆರವಣಿಗೆ ಮೇಲೆ ಕಲ್ಲು ತೂರಾಟ :ಭಾನುವಾರದ ಘಟನೆ ಖಂಡಿಸಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪಟ್ಟಣದ ಉಗ್ರನರಸಿಂಹಸ್ವಾಮಿ ದೇವಾಲಯದಿಂದ ಹಳೇ ಪೇಟೆಬೀದಿ ಮೂಲಕ ಪ್ರವಾಸಿ ಮಂದಿರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರವಾಸಿ ಮಂದಿರದ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು, ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಮೆರವಣಿಗೆ ಕೆಮ್ಮಣ್ಣು ನಾಲಾ ಸಮೀಪದ ಮುಖ್ಯ ಮಸೀದಿ ಬಳಿ ಬಂದಾಗ ಅಲ್ಲಿ ಕರ್ಪೂರ ಮತ್ತು ಟೈರ್‌ಗೆ ಬೆಂಕಿ ಹಚ್ಚಿ, ಭಗವಾ ಧ್ವಜ ಹಾರಿಸಿ, ಆಕ್ರೋಶ ವ್ಯಕ್ತಪಡಿಸಿದರು. 

ಈ ವೇಳೆ ಪ್ರತಿಭಟನಾಕಾರರ ಮೇಲೆ ಒಂದು ಗುಂಪು ಕಲ್ಲು ತೂರಾಟ ನಡೆಸಿ, ಮಾರಕಾಸ್ತ್ರಗಳನ್ನು ಝಳಪಿಸಿತು. ಇದರಿಂದ ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರು ಕಲ್ಲುತೂರಾಟ ನಡೆಸಿದಾಗ, ಪೊಲೀಸರು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಗುಂಪನ್ನು ಚದುರಿಸಿದರು.ನಂತರ, ಮೆರವಣಿಗೆ ಕೆನರಾ ಬ್ಯಾಂಕ್ ಬಳಿ ಬಂದಾಗ ಯುವಕನೋರ್ವ ಚಪ್ಪಲಿ ಅಂಗಡಿ ಬಳಿ ಹಾರಾಡುತ್ತಿದ್ದ ಮುಸ್ಲಿಂ ಧ್ವಜವನ್ನು ಕಿತ್ತೆಸೆದ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಲ್ಲಿ ಭಗವಾ ಧ್ವಜ ಹಾರಿಸುವ ಸಮಯದಲ್ಲಿ ಗುಂಪೊಂದು ನಡೆಸಿದ ಕಲ್ಲು ತೂರಾಟದಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು. ಪೊಲೀಸರು ಮತ್ತೆ ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಹಿಂದೂಪರ ಮಹಿಳೆಯರು ಸೇರಿ ಒಟ್ಟು 6 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದ್ದೂರು ಉದ್‌ವಿಘ್ನಅಲ್ಲಿಂದ ನೇರವಾಗಿ ಪ್ರವಾಸಿ ಮಂದಿರದ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು, ಅಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ನಂತರ, ತಾಲೂಕು ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರ ಗುಂಪು ಗಣೇಶಮೂರ್ತಿಯೊಂದಿಗೆ ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು. ಕೊನೆಗೆ, ಪ್ರತಿಭಟನಾಕಾರರು ಡಿಜೆಯೊಂದಿಗೆ ತಾಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ಮಧ್ಯೆ, ಮಾಜಿ ಸಂಸದ ಪ್ರತಾಪ್‌ ಸಿಂಹ ಹಾಗೂ ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿಯವರು ಆಗಮಿಸಿ, ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ನಂತರ, ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. 

21 ಆರೋಪಿಗಳ ಬಂಧನ:ಭಾನುವಾರ ರಾತ್ರಿ ನಡೆಸಿದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 21 ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಎರಡನೇ ಅಪರ ಸಿವಿಲ್ ನ್ಯಾಯಾಧೀಶರಾದ ಗೋಪಾಲಕೃಷ್ಣ ಅವರು, ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಮಧ್ಯೆ, ರಾಮನಗರದ ಚನ್ನಪಟ್ಟಣ ಹಾಗೂ ಕೋಲಾರ ಮೂಲದವರೂ ಈ ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದು ಬಂದಿದೆ.---

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ