ಕನ್ನಡಪ್ರಭ ವಾರ್ತೆ ಮದ್ದೂರು
ಮದ್ದೂರಿನ ಪೇಟೆ ಬೀದಿಯ ಮಸೀದಿ ಮುಂಭಾಗ ಮೆರವಣಿಗೆ ವೇಳೆ ಹಿಂದೂ ಕಾರ್ಯಕರ್ತರಿಂದ ನೃತ್ಯ ಮಾಡಿ ಪಟಾಕಿ ಹಚ್ಚಲು ಯತ್ನಿಸಿದರು. ಇದಕ್ಕೆ ಪೊಲೀಸರು ಅಡ್ಡಿಪಡಿಸಿದರು. ಆಗ ಹಿಂದೂಪರ ಕಾರ್ಯಕರ್ತರು ಖಾಕಿಧಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಈ ವೇಳೆ ವಾಹನದ ಮೇಲೆ ನಿಂತು ಹನುಮ ಧ್ಚಜ ಬೀಸಿ ಕಾರ್ಯಕರ್ತರು ಜೈಕಾರ ಮೊಳಗಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಮಸೀದಿ ಬಳಿ ಬ್ಯಾರಿಕೇಡ್ ಅಳವಡಿಸಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಮಸೀದಿಗೆ ಭದ್ರತೆ ಒದಗಿಸಿದ್ದರು.
ಪಟಾಕಿ ಹೊತ್ತೊಯ್ದ ಪೊಲೀಸರು:ಜಾಮಿಯಾ ಮಸೀದಿ ಬಳಿಗೆ ಮೆರವಣಿಗೆ ಆಗಮಿಸುತ್ತಿದ್ದಂತೆ ಹಿಂದೂ ಕಾರ್ಯಕರ್ತರು ಪಟಾಕಿ ಸಿಡಿಸಿ, ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು. ಇದೇ ವೇಳೆ ಮಸೀದಿ ಮುಂದೆ ಪಟಾಕಿ ಹಚ್ಚಲು ಮುಂದಾದಾಗ ಪೊಲೀಸರು ತಡೆಯೊಡ್ಡಿದರು. ಪಟಾಕಿ ಮೇಲೆ ನೀರು ಸುರಿದು ಪೊಲೀಸರು ಎತ್ತಿಕೊಂಡು ಹೋದರು. ಆಗ ಅವರೊಂದಿಗೆ ವಾಗ್ವಾದ ನಡೆಸಿದರು. ಪಟಾಕಿ ಹೊಡೆಯಲು ಅವಕಾಶ ನೀಡದಿದ್ದಕ್ಕೆ ರಸ್ತೆಯಲ್ಲೇ ಕುಳಿತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಕ್ಷಣವೇ ಸ್ಥಳದಲ್ಲಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಹಿಂದೂ ಕಾರ್ಯಕರ್ತರ ಮನವೊಲಿಸಿ ಅಲ್ಲಿಂದ ಕಳುಹಿಸಿದರು. ಮೆರವಣಿಗೆಯಲ್ಲಿ ದೋಸ್ತಿ ನಾಯಕರು ಪ್ರತ್ಯೇಕ ಭಾಗಿ
ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ದೋಸ್ತಿ ನಾಯಕರು ಪ್ರತ್ಯೇಕವಾಗಿ ಭಾಗವಹಿಸಿದ್ದುದು ಕಂಡುಬಂದಿತು. ಬೆಳಗ್ಗೆ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಗೆ ಬಿಜೆಪಿ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಇತರರು ಚಾಲನೆ ನೀಡುವ ವೇಳೆ ಜೆಡಿಎಸ್ ನಾಯಕರು ಗೈರು ಹಾಜರಾಗಿದ್ದರು. ಬಿಜೆಪಿ ನಾಯಕರು ತೆರಳಿದ ಬಳಿಕ ಜೆಡಿಎಸ್ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಸೇರಿದಂತೆ ಮುಖಂಡರು-ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿದ್ದು ಕಂಡುಬಂದಿತು.