ಮಧ್ಯಾಹ್ನ 12 ಗಂಟೆಗೆ 108 ಗಣಪತಿ ಮೂರ್ತಿಗಳನ್ನು ವಾಹನಗಳಲ್ಲಿ ಕೂರಿಸಿ ಮೆರವಣಿಗೆ ಆರಂಭಗೊಂಡಿತು. ನಂತರ ನಗರದ ಟಿ.ಬಿ.ಸರ್ಕಲ್, ಹಳೇ ಎಂ.ಸಿ.ರಸ್ತೆ ಸೇರಿದಂತೆ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಳೆ ಆಂಜನೇಯಸ್ವಾಮಿ ದೇಗುಲದ ಶಿಂಷಾ ನದಿಯಲ್ಲಿ ಸಂಜೆ ಗಣೇಶ ಮೂರ್ತಿಗಳನ್ನು ಸಾಮೂಹಿಕವಾಗಿ ವಿಸರ್ಜನೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮದ್ದೂರು
ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿ ನಗರದಲ್ಲಿ ಮೈತ್ರಿ ನಾಯಕರು, ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಯೋಜಿಸಿದ್ದ 108 ಗಣಪತಿ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಬುಧವಾರ ಶಾಂತಿಯುತವಾಗಿ ಮುಕ್ತಾಯಗೊಂಡಿತು.ನಗರದ ಮದ್ದೂರು- ಮಳವಳ್ಳಿ ರಸ್ತೆಯ ಬಿಜೆಪಿ ಕಚೇರಿ ಸಮೀಪದ ಈಶ್ವರ ದೇಗುಲದ ಬಳಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಸಾಮೂಹಿಕ ಗಣೇಶಗಳ ಮೆರವಣಿಗೆಗೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು ಚಾಲನೆ ನೀಡಿದರು.
ಮಧ್ಯಾಹ್ನ 12 ಗಂಟೆಗೆ 108 ಗಣಪತಿ ಮೂರ್ತಿಗಳನ್ನು ವಾಹನಗಳಲ್ಲಿ ಕೂರಿಸಿ ಮೆರವಣಿಗೆ ಆರಂಭಗೊಂಡಿತು. ನಂತರ ನಗರದ ಟಿ.ಬಿ.ಸರ್ಕಲ್, ಹಳೇ ಎಂ.ಸಿ.ರಸ್ತೆ ಸೇರಿದಂತೆ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಳೆ ಆಂಜನೇಯಸ್ವಾಮಿ ದೇಗುಲದ ಶಿಂಷಾ ನದಿಯಲ್ಲಿ ಸಂಜೆ ಗಣೇಶ ಮೂರ್ತಿಗಳನ್ನು ಸಾಮೂಹಿಕವಾಗಿ ವಿಸರ್ಜನೆ ಮಾಡಲಾಯಿತು.ಬಿಜೆಪಿ, ಜೆಡಿಎಸ್ ಮುಖಂಡರು ಭಾಗಿ:
ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಬಿಜೆಪಿ ಮುಖಂಡರಾದ ಎಸ್.ಪಿ.ಸ್ವಾಮಿ, ಸಚ್ಚಿದಾನಂದ, ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಸತೀಶ್, ಜಿಲ್ಲಾ ಯುವಘಟಕದ ಅಧ್ಯಕ್ಷ ಹಾಗಲಹಳ್ಳಿ ರಘು, ಎಂ.ಸಿ.ಸಿದ್ದು, ಚಾಮನಹಳ್ಳಿ ಬಾಲು, ಜೆಡಿಎಸ್ ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ತಾಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಸೇರಿದಂತೆ ಎರಡು ಪಕ್ಷಗಳ ಕಾರ್ಯಕರ್ತರು, ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆಗೆ ಚಾಲನೆ ನೀಡುವ ವೇಳೆ ಗೈರಾಗಿದ್ದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮೆರವಣಿಗೆ ಆರಂಭಗೊಂಡ ಬಳಿಕ ಸೇರಿಕೊಂಡರು. ಮೆರವಣಿಗೆಯಲ್ಲಿ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಸೇರಿದಂತೆ ಮುಖಂಡರು ಯುವಕರ ಜೊತೆ ಡ್ಯಾನ್ಸ್ ಮಾಡಿ ಗಮನ ಸೆಳೆದರು.
ಭದ್ರತೆಗೆ ಹೆಚ್ಚಿನ ಪೊಲೀಸರ ನಿಯೋಜನೆ:ಸಾಮೂಹಿಕ ಗಣೇಶಮೂರ್ತಿಗಳು ಸಾಗಿದ ಮೆರವಣಿಗೆ ಉದ್ದಕ್ಕೂ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ನೇತೃತ್ವದಲ್ಲಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೇ, ಪೇಟೆ ಬೀದಿಯ ಮಸೀದಿ ಬಳಿ ಬ್ಯಾರಿಕೇಡ್ ಅಳವಡಿಸಿ ಪೊಲೀಸರನ್ನು ನಿಯೋಜಿಸಿ ಸೂಕ್ತ ಭದ್ರತೆ ನೀಡಲಾಗಿತ್ತು.
ಮಸೀದಿ ಬಳಿ ಮೆರವಣಿಗೆ ಬರುತ್ತಿದ್ದಂತೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎಂಬ ಘೋಷಣೆ, ಜೈ ಶ್ರೀರಾಮ್ ಎಂದು ಘೋಷಣೆಗಳೊಂದಿಗೆ ಸಂಭ್ರಮಿಸಿದರು. ಈ ವೇಳೆ ವಾಹನದ ಮೇಲೆ ನಿಂತು ಹನುಮ ಧ್ಚಜ ಬೀಸಿ ಕಾರ್ಯಕರ್ತರು ಜೈಕಾರ ಕೂಗಿದರು.ಸಂಜೆ ಗಣೇಶಮೂರ್ತಿಗಳ ಸಾಮೂಹಿಕ ವಿಸರ್ಜನೆ:
ಸುಮಾರು 5 ಗಂಟೆಗಳ ಕಾಲ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿದ ಸಾಮೂಹಿಕ ಗಣಪತಿಗಳ ಮೆರವಣಿಗೆ ಶಿಂಷಾ ನದಿ ತಟದಲ್ಲಿ ಸಂಜೆ ವೇಳೆಗೆ ಅಂತ್ಯಗೊಂಡಿತು. ಸಾಮೂಹಿಕ ಪೂಜೆ ನೆರವೇರಿಸಿದ ಬಳಿ ನದಿ ಬಳಿ ಅಗ್ನಿಶಾಮಕ ದಳ ಸಿಬ್ಬಂದಿ ಕೆಲ ಗಣೇಶ ಮೂರ್ತಿಗಳನ್ನು ಬೋಟ್ ಮೂಲಕ ವಿಸರ್ಜಿಸಿದರೆ, ಕೆಲ ದೊಡ್ಡ ಗಣೇಶ ಮೂರ್ತಿಗಳನ್ನು ಕ್ರೇನ್ ಸಹಾಯದಲ್ಲಿ ವಿಸರ್ಜಿಸಲಾಯಿತು. ಇನ್ನು ಕೆಲವು ಗಣೇಶ ಮೂರ್ತಿಗಳನ್ನು ಕಾರ್ಯಕರ್ತರೇ ವಿಸರ್ಜನೆ ಕಾರ್ಯ ನೆರವೇರಿಸಿದರು.