ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಹೆಮ್ಮಿಗೆ ಮೋಹನ್ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದ್ದು, ಎಲ್ಲ ಧರ್ಮಗಳ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಗಣಪತಿ ಉತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯ ಧರ್ಮೀಯರೂ ಪಾಲ್ಗೊಂಡು ಪರಸ್ಪರ ಬಾಂಧವ್ಯ ಹಾಗೂ ಸಹೋದರತೆಯನ್ನು ಪ್ರದರ್ಶಿಸುತ್ತಿರುವುದು ಭಾವೈಕ್ಯತೆಗೆ ಉತ್ತಮ ಉದಾಹರಣೆಯಾಗಿದೆ ಎಂದರು. ಗೌರಿಗಣೇಶ ಹಬ್ಬದ ಅಂಗವಾಗಿ ನಡೆದ ಅನ್ನಸಂತರ್ಪಣೆಯಲ್ಲಿ ಹಿಂದೂಗಳೊಂದಿಗೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಸಿಬ್ಬಂದಿಯೂ ಒಟ್ಟಾಗಿ ಪಾಲ್ಗೊಂಡು ಊಟ ಬಡಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿರುವುದು ಶ್ಲಾಘನೀಯ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಜನಪ್ರಿಯ ಆಸ್ಪತ್ರೆಯ ಜನಪ್ರಿಯ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗಣಪತಿ ಮೂರ್ತಿಯ ೧೧ನೇ ವರ್ಷದ ವಿಸರ್ಜನಾ ಕಾರ್ಯಕ್ರಮವು ಭಕ್ತಿ, ಸಂಭ್ರಮ ಹಾಗೂ ಸೌಹಾರ್ದತೆಯೊಂದಿಗೆ ನಡೆಯಿತು. ಈ ಸಂದರ್ಭದಲ್ಲಿ ರಕ್ತದಾನ ಮತ್ತು ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಹೆಮ್ಮಿಗೆ ಮೋಹನ್ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದ್ದು, ಎಲ್ಲ ಧರ್ಮಗಳ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಗಣಪತಿ ಉತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯ ಧರ್ಮೀಯರೂ ಪಾಲ್ಗೊಂಡು ಪರಸ್ಪರ ಬಾಂಧವ್ಯ ಹಾಗೂ ಸಹೋದರತೆಯನ್ನು ಪ್ರದರ್ಶಿಸುತ್ತಿರುವುದು ಭಾವೈಕ್ಯತೆಗೆ ಉತ್ತಮ ಉದಾಹರಣೆಯಾಗಿದೆ ಎಂದರು. ಗೌರಿಗಣೇಶ ಹಬ್ಬದ ಅಂಗವಾಗಿ ನಡೆದ ಅನ್ನಸಂತರ್ಪಣೆಯಲ್ಲಿ ಹಿಂದೂಗಳೊಂದಿಗೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಸಿಬ್ಬಂದಿಯೂ ಒಟ್ಟಾಗಿ ಪಾಲ್ಗೊಂಡು ಊಟ ಬಡಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿರುವುದು ಶ್ಲಾಘನೀಯ ಎಂದು ಹೇಳಿದರು.ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿನಾಕಲಗೂಡು ಮಾತನಾಡಿ, ಜನಪ್ರಿಯ ಆಸ್ಪತ್ರೆ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದ್ದು, ಆರೋಗ್ಯ ಸೇವೆಯ ಜತೆಗೆ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕವೂ ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದೆ. ೧೧ನೇ ವರ್ಷದ ಗಣಪತಿ ಉತ್ಸವವನ್ನು ಸೌಹಾರ್ದತೆ ಮತ್ತು ಭಕ್ತಿಭಾವದಿಂದ ಆಚರಿಸಿರುವುದು ಹಾಗೂ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡಿರುವುದು ಆಸ್ಪತ್ರೆಯ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮಾತನಾಡಿ, ಜನಪ್ರಿಯ ಆಸ್ಪತ್ರೆ ಆರೋಗ್ಯ ಸೇವೆಯೊಂದಿಗೆ ಸಮಾಜಮುಖಿ ಕಾರ್ಯಗಳಿಗೂ ಆದ್ಯತೆ ನೀಡುತ್ತಿರುವುದು ಸಂತಸದ ವಿಚಾರ. ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ರೀತಿಯಲ್ಲಿ ಗಣಪತಿ ಉತ್ಸವ ಆಚರಿಸಿರುವುದು ವಿಶೇಷವಾಗಿದ್ದು, ಧಾರ್ಮಿಕ ಭಾವನೆಯೊಂದಿಗೆ ಸೇವಾ ಮನೋಭಾವವನ್ನೂ ಮೆರೆದಿದ್ದಾರೆ ಎಂದು ಹೇಳಿದರು.ಸಮಾಜ ಸೇವಕ ಕಟ್ಟಾಯ ಶಿವಕುಮಾರ್ ಮಾತನಾಡಿ, ಜಾತಿ, ಮತ, ಪಂಥಗಳ ಎಲ್ಲೆ ಮೀರಿ ಸೌಹಾರ್ದತೆಯಿಂದ ಬದುಕುವ ಸಮಾಜ ನಿರ್ಮಾಣವಾಗಬೇಕು ಎಂಬ ಸಂದೇಶವನ್ನು ಡಾ. ವಿ.ಕೆ. ಅಬ್ದುಲ್ ಬಶೀರ್ ಅವರು ತಮ್ಮ ಕಾರ್ಯಗಳ ಮೂಲಕ ನೀಡುತ್ತಿದ್ದಾರೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಆಸ್ಪತ್ರೆಯ ಆಡಳಿತ ಮಂಡಳಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಅಭಿನಂದನೀಯ ಎಂದರು. ನಂತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿಗೀತೆ ಹಾಗೂ ಘೋಷಣೆಗಳೊಂದಿಗೆ ಗಣಪತಿಗೆ ಬೀಳ್ಕೊಟ್ಟರು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸುವ ಮೂಲಕ ೧೧ನೇ ವರ್ಷದ ಗಣಪತಿ ಉತ್ಸವವು ಸೌಹಾರ್ದತೆ ಮತ್ತು ಸೇವಾ ಮನೋಭಾವದೊಂದಿಗೆ ಸಮಾಪ್ತಿಗೊಂಡಿತು.ಕಾರ್ಯಕ್ರಮದಲ್ಲಿ ಜನಪ್ರಿಯ ಆಸ್ಪತ್ರೆ ಮತ್ತು ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ವಿ.ಕೆ. ಅಬ್ದುಲ್ ಬಶೀರ್, ಜನಪ್ರಿಯ ಫೌಂಡೇಶನ್ ಉಪಾಧ್ಯಕ್ಷೆ ಫಾತಿಮಾ ನಸ್ರೀನ್ ಬಶೀರ್, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶಾರುಖ್ ಅಬ್ದುಲ್ಲಾ, ಹಿರಿಯ ವೈದ್ಯರಾದ ಡಾ. ರಂಗಲಕ್ಷ್ಮೀ, ಡಾ. ಪ್ರಸನ್ನ ಎನ್. ರಾವ್, ಹಿರಿಯ ಪತ್ರಕರ್ತರಾದ ಉದಯ್ ಕುಮಾರ್, ಕೆ.ಜಿ. ಸುರೇಶ್, ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರು, ಪತ್ರಕರ್ತರು, ಸಮಾಜ ಸೇವಕರು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸೇರಿದಂತೆ ಜಿಲ್ಲೆಯ ಗಣ್ಯರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.