ಕನ್ನಡಪ್ರಭ ವಾರ್ತೆ ಮದ್ದೂರು
ಪುರಸಭೆ ಹಿಂದಿನ ಮುಖ್ಯ ಅಧಿಕಾರಿಯಾಗಿದ್ದ ಆರ್.ಅಶೋಕ್ ಅಧಿಕಾರ ಅವಧಿಯಲ್ಲಿ ಕೃಷಿ ಭೂಮಿಗಳಿಗೆ ಅಕ್ರಮವಾಗಿ ಇ- ಖಾತೆ ಮಾಡಿ ಸರ್ಕಾರ ಮತ್ತು ಪುರಸಭೆಗೆ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಅಭಿವೃದ್ಧಿ ಸಹಾಯಕ ನಿರ್ದೇಶಕ ಅಮಿತ್ ತಾರದಾಳೆ ನೇತೃತ್ವದಲ್ಲಿ ಸೋಮಶೇಖರ್ ಸೇರಿದಂತೆ ಮೂವರು ತನಿಖಾ ಅಧಿಕಾರಿಗಳ ತಂಡ ಪುರಸಭೆಗೆ ಭೇಟಿ ನೀಡಿ ಕೃಷಿ ಭೂಮಿಗೆ ಇ-ಸ್ವತ್ತು ಖಾತೆ ಮಾಡಿರುವ ಹಗರಣಗಳ ಕುರಿತು ಇಡೀ ದಿನ ಪರಿಶೀಲನೆ ಮಾಡಿ ನಂತರ ಕೆಲವು ಕಡತಗಳನ್ನು ತನಿಖಾಧಿಕಾರಿಗಳ ತಂಡ ವಶಕ್ಕೆ ತೆಗೆದುಕೊಂಡಿದ್ದಾರೆ.ಪುರಸಭೆಯ ಕಂದಾಯ ವಿಭಾಗದಲ್ಲಿ ಬಾರಿ ಪ್ರಮಾಣದಲ್ಲಿ ಅಕ್ರಮವಾಗಿ ಖಾತೆ ಮಾಡಲಾಗಿದೆ. ಹಗರಣದ ತನಿಖೆಗಾಗಿ ತನಿಖಾ ಆಯೋಗ ರಚಿಸುವಂತೆ ಒತ್ತಾಯಿಸಿ ಶಾಸಕ ಉದಯ್ ಕಳೆದ 2024ರ ಜುಲೈನಲ್ಲಿ ಸರ್ಕಾರಕ್ಕೆ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ್ ಅವರಿಗೆ ಮನವಿ ಸಲ್ಲಿಸಿದ್ದರು.
ಇ-ಖಾತೆಗಳನ್ನು ಬದಲಾವಣೆ ಮಾಡುವಾಗ ಪುರಸಭೆ ನಿಯಮ ಅನುಸರಿಸದೇ ಹಣದಾಸೆಗಾಗಿ ನಿವೇಶನಗಳ ಅಕ್ರಮ ಖಾತೆ ಮಾಡಿ ಸಾರ್ವಜನಿಕರು ವಿನಾಕಾರಣ ನ್ಯಾಯಾಲಯದ ಮೊರೆ ಹೋಗುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದರು.
ಪುರಸಭೆಯ 2018ರ ಅವಧಿಯಲ್ಲಿ ಕಾರ್ಯನಿರ್ವಹಿಸಿರುವ ಮುಖ್ಯ ಅಧಿಕಾರಿ ಆರ್.ಅಶೋಕ್ ಹಾಗೂ ಕಂದಾಯ ವಿಭಾಗದ ಸಿಬ್ಬಂದಿ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಶಾಸಕ ಉದಯ್ ಸರ್ಕಾರ ಮತ್ತು ಸಚಿವರಿಗೆ ಸಲ್ಲಿಸಿರುವ ದೂರಿನಲ್ಲಿ ಆಗ್ರಹಪಡಿಸಿದ್ದರು.