ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರ: ಸಾಮೂಹಿಕ ವಿವಾಹಕ್ಕೆ ಪೂರ್ವಸಿದ್ಧತೆ

KannadaprabhaNewsNetwork | Published : Jun 7, 2024 12:30 AM

ಸಾರಾಂಶ

ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಗಸ್ಟ್ ತಿಂಗಳಿನಲ್ಲಿ ಸಾಮೂಹಿಕ ವಿವಾಹ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಗಸ್ಟ್ ತಿಂಗಳಿನಲ್ಲಿ ಸಾಮೂಹಿಕ ವಿವಾಹ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ತಿಳಿಸಿದರು.

ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಸಾಮೂಹಿಕ ವಿವಾಹ ಸಂಬಂಧ ಕರೆಯಲಾಗಿದ್ದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಆಗಸ್ಟ್ ತಿಂಗಳಿನ ಶ್ರಾವಣ ಮಾಸದಲ್ಲಿ ಸಾಮೂಹಿಕ ವಿವಾಹ ನಡೆಸಲು ಶುಭ ಲಗ್ನದಲ್ಲಿ ನಾಲ್ಕು ದಿನಾಂಕಗಳನ್ನು ಈಗಾಗಲೇ ನಿಗದಿ ಮಾಡಲಾಗಿದೆ. ಕಳೆದ ವರ್ಷದ ಸಾಮೂಹಿಕ ವಿವಾಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಇದೇ ನಿಟ್ಟಿನಲ್ಲಿ ಈ ಬಾರಿಯೂ ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಾಧಿಕಾರದ ಉಪಾಧ್ಯಕ್ಷ ವೆಂಕಟೇಶ್, ಸ್ಥಳೀಯ ಶಾಸಕರು, ಸಾಲೂರು ಬೃಹನ್ ಮಠದ ಅಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ನೇತೃತ್ವದಲ್ಲಿ ಈ ಬಾರಿ ಸುಮಾರು 100 ಜೋಡಿಗಳ ಸಾಮೂಹಿಕ ವಿವಾಹ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ವಿಶೇಷ ಪ್ರಚಾರ: ಈ ಬಾರಿ 100 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡುವ ನಿಟ್ಟಿನಲ್ಲಿ ತಮಿಳುನಾಡಿನ ಸೇಲಂ ಧರ್ಮಪುರಿ, ಹೊಸೂರು, ರಾಜ್ಯದ ಮಂಡ್ಯ ಮೈಸೂರು, ಚಾಮರಾಜನಗರ, ಕನಕಪುರ ಚನ್ನಪಟ್ಟಣ, ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲು ತೀರ್ಮಾನಿಸಲಾಗಿದೆ. ಇದಲ್ಲದೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಸ್ವಾಮಿಯ ಟ್ಯಾಬ್ಲೋ ನಿರ್ಮಾಣ ಮಾಡಿ ವಿನೂತನ ಮಾದರಿಯಲ್ಲಿ ಪ್ರಚಾರ ಮಾಡಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದು. ಈ ಪ್ರಯೋಜನವನ್ನು ಸಾರ್ವಜನಿಕರು ಸದ್ಭಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುವ ಈ ಸೇವೆಗೆ ಸಕಲ ಸಿದ್ಧತೆಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸುವಂತೆ ತಿಳಿಸಿದರು.

ಸಭೆಯಲ್ಲಿ ಉಪ ಕಾರ್ಯದರ್ಶಿ ಚಂದ್ರಶೇಖರ್, ದ್ವಿತೀಯ ದರ್ಜೆ ಸಹಾಯಕರಾದ ಸರಗೂರು ಮಹದೇವಸ್ವಾಮಿ, ಜನಾರ್ಧನ್, ಮಹದೇವಸ್ವಾಮಿ ಇನ್ನಿತರರು ಇದ್ದರು.

Share this article