ಹಾಲ್ನೊರೆಯಂತೆ ಜಲವೈಭವ ಸೃಷ್ಟಿಸಿರುವ ಮಾಧವಮಂತ್ರಿ ಉಳ್ಳಾಣೆ ಅಣೆಕಟ್ಟೆ

KannadaprabhaNewsNetwork | Published : Jul 18, 2024 1:34 AM

ಸಾರಾಂಶ

ಹಳೇ ತಲಕಾಡು ಅರಣ್ಯ ನಿಸರ್ಗಧಾಮದ ನದಿಗೆ ನೂತನ ಸೇತುವೆ ನಿರ್ಮಿಸಲು ಅಳವಡಿಸಿರುವ ಎಲ್ಲ ಪಿಲ್ಲರ್ ಗಳು ಈಗ ಜಲಾವೃತಗೊಂಡಿವೆ. ಪ್ರವಾಸಿಗರು ಇಲ್ಲಿನ ನದಿಯಲ್ಲಿ ನೀರಿಗಿಳಿದು ಆಟವಾಡುವುದು ಅಪಾಯಕ್ಕೆ ಅಹ್ವಾನದ ಹಿನ್ನೆಲೆ ಎಚ್ಚೆತ್ತ ಬಹತೇಕ ಪ್ರವಾಸಿಗರು ನೀರಿಗಿಳಿಯದೆ ವಾಪಸ್ಸಾಗಿದ್ದಾರೆ.

ಅಕ್ರಂಪಾಷ ತಲಕಾಡು

ಕನ್ನಡಪ್ರಭ ವಾರ್ತೆ ತಲಕಾಡು

ತಲಕಾಡಿನ ಪುರಾತನ ಕಾಲದ ಮಾಧವಮಂತ್ರಿ ಉಳ್ಳಾಣೆ ಅಣೆಕಟ್ಟೆಗೆ ಪರ್ಯಾಯವಾಗಿ ನಿರ್ಮಿಸಿರುವ ನೂತನ ಕಟ್ಟೆಯ ಮೇಲಿಂದ ಪ್ರವಾಹದ ನೀರು ಹಾಲ್ನೊರೆಯಂತೆ ಜಲವೈಭವ ಸೃಷ್ಟಿಸಿರುವುದು ವೀಕ್ಷಕರಿಗೆ ಹಬ್ಬದ ರಸದೌತಣ ನೀಡಿದೆ.

ನೂತನ ಅಣೆಕಟ್ಟೆಯ ಮೇಲಿಂದ ಇದೇ ಮೊದಲ ಬಾರಿಗೆ ಧುಮ್ಮಿಕ್ಕಿ ಹರಿಯುತ್ತಿರುವ ಜಲಪಾತ ವೈಭವ ಕಣ್ತುಂಬಿಕೊಳ್ಳಲು ಸಾಲು ಸಾಲಾಗಿ ಇಲ್ಲಿಗೆ ಆಗಮಿಸುತ್ತಿರುವ ಸ್ಥಳೀಯರು, ಪ್ರವಾಸಿಗರಿಗೆ ಅಣೆಕಟ್ಟೆ ಬಳಿಗೆ ತೆರಳದಂತೆ ನಾಲಾ ದಂಡೆಯ ರಸ್ತೆಯ ಗೇಟ್ ಗೆ ಟೆಂಡರ್ ದಾರರು ಬೀಗ ಜಡಿದಿರುವುದು ನಿರಾಸೆಯಾಗಿದ್ದು, ಕಿರಿಕಿರಿ ವಾಗ್ವಾದಕ್ಕೆ ಕಾರಣವಾಗಿದೆ.

ಗೇಟ್ ಪಕ್ಕದಿಂದಲೂ ಹಾದು ಹೋಗದಂತೆ ಭಾರಿ ಗಾತ್ರದ ಬಂಡೆ ಇಟ್ಟು ತಡೆಯೊಡ್ಡಿದ್ದು, ಅಕಸ್ಮಾತ್ ಬಂಡೆ ಹತ್ತಿ ಹೋದರು ಜಾರಿ ಬೀಳುವಂತೆ ಮಣ್ಣು ಸುರಿದು ಜನರ ಉತ್ಸಾಹಕ್ಕೆ ಗುತ್ತಿಗೆದಾರರು ತಣ್ಣೀರು ಸುರಿದಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೇಟ್ ಹಾಕಿದ್ದರು ಬಿಡದ ಕೆಲವರು ಸೆಕ್ಯೂರಿಟಿಯೊಂದಿಗೆ ವಾಗ್ವಾದ ನಡೆಸುತ್ತ ಗೇಟ್ ಬೀಗ ತೆಗೆಸಿ ಒಳ ಹೋಗಲು ಸಫಲರಾದರು ಮತ್ತೆ ಕೆಲವರು ಗೇಟ್ ಹತ್ತಿಕೊಂಡು ಅಥವಾ ಬಂಡೆಯ ಮೇಲಿಂದ ಕಸರತ್ತು ನಡೆಸುತ್ತ, ಜಲಧಾರೆ ವೈಭವ ಕಣ್ತುಂಬಿಕೊಳ್ಳಲು ಯಶಸ್ವಿಯಾದರು.

ನೂತನ ಅಣೆಕಟ್ಟೆ ವೀಕ್ಷಣೆಗೆ ತೊಂದರೆ:

ನೂತನ ಅಣೆಕಟ್ಟೆ ಕಾಮಗಾರಿ ಮುಕ್ತಾಯ ಗೊಂಡಿದ್ದು, ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ನಾಲಾದಂಡೆಯ ರಸ್ತೆ ಅಭಿವೃದ್ದಿ ಕಾಮಗಾರಿ ಮಾತ್ರ ಇಲ್ಲಿ ಬಾಕಿ ಉಳಿದಿದೆ. ವಾಸ್ತವ ಹೀಗಿದ್ದರು ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಅಣೆಕಟ್ಟೆಯ ಬಳಿಗೆ ಸ್ಥಳೀಯರು, ಪ್ರವಾಸಿಗರು, ಅಣೆಕಟ್ಟೆ ಹಿನ್ನೀರು ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆಗೆ ನಡೆಸುವ ರೈತರು ತೆರಳದಂತೆ ಇಲ್ಲಿ ತೊಂದರೆ ನೀಡಲಾಗುತ್ತಿದೆ ಎಂಬ ವ್ಯಾಪಕ ದೂರು ಕೇಳಿ ಬಂದಿದೆ.

ಈ ಕುರಿತು ನೀರಾವರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹಲವರು ಅಲವತ್ತುಕೊಂಡಿದ್ದಾರೆ.

ಪ್ರವಾಹದ ಬಗ್ಗೆ ಅಧಿಕಾರಿಗಳ ಎಚ್ಚರಿಕೆ:

ಇಲ್ಲಿನ ನದಿಯಲ್ಲಿ ದಿನೇ ದಿನೇ ಪ್ರವಾಹ ನೀರು ಹೆಚ್ಚುತ್ತಿರುವ ಹಿನ್ನೆಲೆ, ಜಾಗೃತರಾದ ಅಧಿಕಾರಿಗಳು ಪ್ರವಾಹದಲ್ಲಿ ಮೊದಲು ನೀರು ನುಸುಳುವ ಮರಡಿಪುರ, ಮಾರನಪುರ ಹೆಮ್ಮಿಗೆ ಅಕ್ಕೂರು, ತಡಿಮಾಲಂಗಿ ಗ್ರಾಮಗಳ ಜನತೆಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ನದಿಪಾತ್ರದ ಕಡೆಗೆ ಜನ ಜಾನುವಾರುಗಳು ತೆರಳದಂತೆ ತಲಕಾಡು ನಾಡಕಚೇರಿ ಉಪ ತಹಸೀಲ್ದಾರ್ ಇ. ಕುಮಾರ್ ಎಚ್ಚರಿಸಿದ್ದಾರೆ.

ಹಳೇ ತಲಕಾಡು ಅರಣ್ಯ ನಿಸರ್ಗಧಾಮದ ನದಿಗೆ ನೂತನ ಸೇತುವೆ ನಿರ್ಮಿಸಲು ಅಳವಡಿಸಿರುವ ಎಲ್ಲ ಪಿಲ್ಲರ್ ಗಳು ಈಗ ಜಲಾವೃತಗೊಂಡಿವೆ. ಪ್ರವಾಸಿಗರು ಇಲ್ಲಿನ ನದಿಯಲ್ಲಿ ನೀರಿಗಿಳಿದು ಆಟವಾಡುವುದು ಅಪಾಯಕ್ಕೆ ಅಹ್ವಾನದ ಹಿನ್ನೆಲೆ ಎಚ್ಚೆತ್ತ ಬಹತೇಕ ಪ್ರವಾಸಿಗರು ನೀರಿಗಿಳಿಯದೆ ವಾಪಸ್ಸಾಗಿದ್ದಾರೆ.

ಮಳೆ ಬೆಳೆಯಿಲ್ಲದೆ ಬರದ ಬೇಗೆಯಲ್ಲಿ ಬೇಯುತ್ತಿದ್ದ ಹೋಬಳಿ ಜನತೆಗೆ, ಕಪಿಲಾ-ಕಾವೇರಿ ತುಂಬಿ ಹರಿಯುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

Share this article