ಮಂತ್ರಿ ಪಟ್ಟಕ್ಕಾಗಿ ರೈತರಿಗೆ ಮಧು, ಎಸ್ಸೆಸ್ಸೆಂ ಅನ್ಯಾಯ

KannadaprabhaNewsNetwork |  
Published : Aug 27, 2026, 01:30 AM IST
26ಕೆಡಿವಿಜಿ7-ದಾವಣಗೆರೆಯಲ್ಲಿ ಬುಧವಾರ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ತಮ್ಮ ಮಂತ್ರಿ ಸ್ಥಾನಗಳನ್ನು ಉಳಿಸಿಕೊಳ್ಳಲು ಮಧ್ಯ ಕರ್ನಾಟಕದ ಭದ್ರಾ ಅಚ್ಚುಕಟ್ಟು ರೈತರಿಗೆ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಅನ್ಯಾಯ ಮಾಡುತ್ತಿದ್ದಾರೆ ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಆರೋಪಿಸಿದ್ದಾರೆ.

- ಕೋಲಾರ, ತುಮಕೂರಿಗೆ ಭದ್ರಾ ಡ್ಯಾಂ ಯಾಕೆ, ಸಮೀಪದ ಕಾವೇರಿ ನೀರನ್ನೇ ಹರಿಸಲಿ: ಬಿ.ಪಿ.ಹರೀಶ ತಾಕೀತು - - -

ಕನ್ನಡಪ್ರಭ ವಾರ್ತೆ ದಾವಣಗೆರೆ ತಮ್ಮ ಮಂತ್ರಿ ಸ್ಥಾನಗಳನ್ನು ಉಳಿಸಿಕೊಳ್ಳಲು ಮಧ್ಯ ಕರ್ನಾಟಕದ ಭದ್ರಾ ಅಚ್ಚುಕಟ್ಟು ರೈತರಿಗೆ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಅನ್ಯಾಯ ಮಾಡುತ್ತಿದ್ದಾರೆ ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಆರೋಪಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ವಿಚಾರವಾಗಿ 2 ದಿನದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ಐಸಿಸಿ ಸಭೆಯಲ್ಲಿ ಹೇಳಿ 8-10 ದಿನ ಕಳೆದಿವೆ. ಆದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದರು.

ರಾಜ್ಯ ಸರ್ಕಾರ ಏಕಾಏಕಿ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ ಹಾಗೂ ವಾಣಿವಿಲಾಸಸಾಗರಕ್ಕೆ 3 ಟಿಎಂಸಿ ನೀರು ಹರಿಸಲು ಆದೇಶ ಹೊರಡಿಸಿದೆ. ಭದ್ರಾ ಮೇಲ್ದಂಡೆಗೆ ನೀರು ಹರಿಸುವ ನಿರ್ಧಾರ, ಆದೇಶವನ್ನು ತಕ್ಷಣವೇ ಸರ್ಕಾರ ಹಿಂಪಡೆಯಬೇಕು. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತಕಾಯುವ ಕೆಲಸಕ್ಕೆ ಮುಂದಾಗಲಿ ಎಂದು ತಾಕೀತು ಮಾಡಿದರು.

ಸೊರಬ ಮೂಲಕ ಶಿವಮೊಗ್ಗ ಜಿಲ್ಲಾ ಮಂತ್ರಿ ಮಧು ಬಂಗಾರಪ್ಪಗೂ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೂ ಸಂಬಂಧವೇ ಇಲ್ಲ. ದಾವಣಗೆರೆ ಜಿಲ್ಲಾ ಮಂತ್ರಿ ಎಸ್‌.ಎಸ್‌. ಮಲ್ಲಿಕಾರ್ಜುನಗೆ ಬೆಳಗಾವಿ ಜಿಲ್ಲೆಯ ತಮ್ಮ ಸಕ್ಕರೆ ಕಾರ್ಖಾನೆಯದ್ದೇ ಚಿಂತೆಯಾಗಿದೆ. ಮಂತ್ರಿ ಸ್ಥಾನಕ್ಕೆ ಒಂದೇ ಮನೆಯ ಸಂಸದರು, ಇಬ್ಬರು ಶಾಸಕರು ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಬ್ಲ್ಯಾಕ್ ಮೇಲ್ ಮಾಡಿದ್ದವರು ಈಗ ಭದ್ರಾ ಅಚ್ಚುಕಟ್ಟು ರೈತರ ರಕ್ಷಣೆಗೆ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ಸರ್ಕಾರದ ಮೇಲೂ ಒತ್ತಡ ಹೇರಲಿ ಎಂದು ಸಲಹೆ ನೀಡಿದರು.

ರೈತರ ಬಗ್ಗೆ ಎಸ್‌.ಎಸ್‌. ಮಲ್ಲಿಕಾರ್ಜುನಗೆ ಯಾವುದೇ ಕಾಳಜಿಯೇ ಇಲ್ಲ. ಬರ ಪರಿಸ್ಥಿತಿಯಲ್ಲಿ ತಾಲೂಕುಗಳಿಗೆ ಪ್ರವಾಸ ಕೈಗೊಂಡು, ರೈತರ ಕಷ್ಟ ಆಲಿಸುತ್ತಿಲ್ಲ. ಸಮಸ್ಯೆ ಬಗ್ಗೆ ಸಚಿವರಿಗೆ ಪ್ರಶ್ನಿಸಿದರೆ ತಮ್ಮ ಭಟ್ಟಂಗಿಗಳ ಮೂಲಕ ಉತ್ತರ ಕೊಡಿಸಲು ಮುಂದಾಗುತ್ತಾರೆ. ತಮಗೆ ಸಂಬಂಧಿಸದ ವಿಷಯದ ಬಗ್ಗೆ ಮಾತನಾಡಲು ದಿನೇಶ ಕೆ. ಶೆಟ್ಟಿ ಯಾರು? ಭದ್ರಾ ನೀರಿನ ವಿಚಾರಕ್ಕೆ ನಾವು ಜಿಲ್ಲಾ ಮಂತ್ರಿಗೆ ಪ್ರಶ್ನೆ ಮಾಡುತ್ತಿದ್ದೇವೆ. ಉಡಾಫೆ ಮಾತನಾಡುವುದನ್ನು ಬಿಟ್ಟು, ಎಸ್‌.ಎಸ್‌. ಮಲ್ಲಿಕಾರ್ಜುನ ನಮ್ಮ ರೈತರಿಗೆ ಉತ್ತರ ಕೊಡಲಿ ಎಂದು ಹೇಳಿದರು.

ಸಿದ್ದರಾಮಯ್ಯ ಅವಧಿಯಲ್ಲಿ ಬಲದಂಡೆ ನಾಲೆ ಸಮೀಪವೇ ತರೀಕೆರೆ, ಹೊಸದುರ್ಗ, ಅಜ್ಜಂಪುರ ಭಾಗದ ಕೆರೆಗಳನ್ನು ತುಂಬಿಸಲು, ಕುಡಿಯುವ ನೀರಿಗಾಗಿ ಮುಖ್ಯ ಕಾಲುವೆಯನ್ನೇ ಒಡೆದು, 1 ಟಿಎಂಸಿ ನೀರು ಕೊಟ್ಟಿದ್ದರು. ಈಗ ಭದ್ರಾ ಅಚ್ಚುಕಟ್ಟಿನ ಮಳೆಗಾಲದ ಬೆಳೆಗೆ ನೀರು ಕೊಡ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭದ್ರಾ ಮೇಲ್ದಂಡೆ, ವಾಣಿವಿಲಾಸಸಾಗರಕ್ಕೆ ನೀರನ್ನು ಕೊಡಲು ಮುಂದಾಗಿದ್ದಾರೆ. ತಾವು ಸಿಎಂ ಆದ ನಂತರದ ಮೊದಲ ಉಪ ಚುನಾವಣೆ ಹಿರಿಯೂರು ಕ್ಷೇತ್ರಕ್ಕೆ ನಡೆಯಲಿದ್ದು, ಅಲ್ಲಿ ಗೆಲ್ಲಬೇಕೆಂಬ ಲೆಕ್ಕಾಚಾರದಲ್ಲಿ ಭದ್ರಾ ಅಚ್ಚುಕಟ್ಟು ರೈತರಿಗೆ ವಿಷವುಣಿಸಲು ಡಿ.ಕೆ. ಶಿವಕುಮಾರ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾದಿಂದ ದೂರದ ತುಮಕೂರು, ಕೋಲಾರ ಜಿಲ್ಲೆಗೆ ನೀರು ಕೊಡುವ ಮಾತನಾಡುತ್ತಿದ್ದಾರೆ. ಆದರೆ, ಕಾವೇರಿಯಿಂದ ಯಾವುದೇ ಕುಡಿಯುವ ನೀರಿನ ಯೋಜನೆ ರೂಪಿಸುವುದಿಲ್ಲ. ತುಮಕೂುರು, ಕೋಲಾರಕ್ಕೆ ಕಾವೇರಿ ಹತ್ತಿರವೋ ಅಥವಾ ಭದ್ರಾ ಡ್ಯಾಂ ಹತ್ತಿರವೋ? ನವೆಂಬರ್, ಡಿಸೆಂಬರ್ ಒಳಗಾಗಿ ತುಂಗಾನದಿಯಿಂದ ಭದ್ರಾ ಡ್ಯಾಂಗೆ ನೀರು ಲಿಫ್ಟ್ ಮಾಡುವ ಮಾತುಗಳನ್ನಾಡುತ್ತಿದ್ದಾರೆ. ಅಷ್ಟರಲ್ಲಿ ತುಂಗಾದಲ್ಲೇ ನೀರೇ ಇರುವುದಿಲ್ಲ. ಮಧ್ಯ ಕರ್ನಾಟಕದ ಅಚ್ಚುಕಟ್ಟು ರೈತರಿಗೆ, ಇಲ್ಲಿನ ಜನರಿಗೆ ಕಾಂಗ್ರೆಸ್ ಸರ್ಕಾರ ಘೋರ ಅನ್ಯಾಯ ಎಸಗುತ್ತಿದೆ ಎಂದು ದೂರಿದರು.

ಒಗ್ಗಟ್ಟಿನಿಂದ ಇದ್ದ ಭದ್ರಾ ಅಚ್ಚುಕಟ್ಟು ರೈತರನ್ನು ಪರಸ್ಪರರಿಗೆ ಎತ್ತಿ ಕಟ್ಟಿ, ಎರಡು ಗುಂಪುಗಳನ್ನಾಗಿ ಮಾಡಿರುವುದು ಕಾಂಗ್ರೆಸ್ ಪಕ್ಷ. ನಮಗೆ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರೂ ಒಂದೇ. ಮಳೆಗಾಲದ ಬೆಳೆಗೆ ನೀರು ಕೊಡದೇ, ಭದ್ರಾ ಮೇಲ್ದಂಡೆಗೆ 6 ಟಿಎಂಸಿ ನೀರು ಹರಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದೊಂದು ಮಾನ, ಮರ್ಯಾದೆಯೇ ಇಲ್ಲದ ಭಂಡಗೆಟ್ಟ ಸರ್ಕಾರವಾಗಿದೆ. ಈಗ ಮಳೆಗಾಲದ ಬೆಳೆಗೇ ನೀರು ಕೊಡದವರು ಮುಂದೆ ಬೇಸಿಗೆಯಲ್ಲಿ ಕೊಡುತ್ತಾರಾ ಎಂಬುದನ್ನು ಅಚ್ಚುಕಟ್ಟು ರೈತರು ಅರಿಯಲಿ. ಈ ಬಗ್ಗೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಶಾಸಕರೊಂದಿಗೆ ಚರ್ಚಿಸಿ, ಪಕ್ಷಾತೀತ ಹೋರಾಟವನ್ನು ರೂಪಿಸುವುದಾಗಿ ಬಿ.ಪಿ.ಹರೀಶ ತಿಳಿಸಿದರು.

ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ಮುಖಂಡರಾದ ನಂದಿಗಾವಿ ರಮೇಶ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ ಇತರರು ಇದ್ದರು.

- - -

(ಬಾಕ್ಸ್‌)

* ಇಂದು ಹರಿಹರ ತಾಲೂಕು ಕಚೇರಿ ಮುತ್ತಿಗೆ

ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವುದನ್ನು ಖಂಡಿಸಿ ಆ.27ರಂದು ಬೆಳಗ್ಗೆ 10.30 ಗಂಟೆಗೆ ಹರಿಹರ ನಗರದ ನೀರಾವರಿ ಇಲಾಖೆಯ ವಿನಾಯಕ ದೇವಸ್ಥಾನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟು ತಾಲೂಕು ಕಚೇರಿಗೆ ಮುತ್ತಿಗೆ ಹಾಕವಾಗುವುದು. ತಾವು, ಬಿಜೆಪಿ ಮುಖಂಡರಾದ ಎಸ್.ಎಂ. ವೀರೇಶ ಹನಗವಾಡಿ, ಜೆಡಿಎಸ್ ಮಾಜಿ ಶಾಸಕ ಎಚ್.ಎಸ್. ಶಿವಶಂಕರ, ಬಿ.ಚಿದಾನಂದಪ್ಪ ಸೇರಿದಂತೆ ಬಿಜೆಪಿ- ಜೆಡಿಎಸ್ ಪಕ್ಷಗಳ ಮುಖಂಡರು, ಕಾರ್ಯಕರ್ತರು, ರೈತರು ಹೋರಾಟದಲ್ಲಿ ಭಾಗಿಯಾಗಲಿದ್ದೇವೆ ಎಂದು ಶಾಸಕ ಬಿ.ಪಿ.ಹರೀಶ ತಿಳಿಸಿದರು.

- - -

-26ಕೆಡಿವಿಜಿ7: ದಾವಣಗೆರೆಯಲ್ಲಿ ಬುಧವಾರ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುಟ್ಕಾ, ಪಾನ್ ಮಸಾಲ ನಿಷೇಧ ವಿರೋಧಿಸಿ ಹೋರಾಟ ಶುರು
ಪ್ರವಾದಿ ಮುಹಮ್ಮದ್ 1501ನೇ ಜನ್ಮದಿನ ಆಚರಣೆ