ಮಧುಗೆ ತಂದೆ ಹೆಸರನ್ನು ಉಳಿಸುವ ಯೋಗ್ಯತೆ ಇದೆ: ಕೃಷಿ ಸಚಿವ ಸಿಆರ್‌ಎಸ್

KannadaprabhaNewsNetwork |  
Published : Dec 25, 2024, 12:45 AM IST
೨೪ಕೆಎಂಎನ್‌ಡಿ-೩ಮಂಡ್ಯದ ಎ ಅಂಡ್ ಎ ಕನ್ವೆನ್‌ಷನ್ ಹಾಲ್‌ನಲ್ಲಿ ನಡೆದ ವಿಧಾನಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡ ಹುಟ್ಟಹುಬ್ಬ ಸಮಾರಂಭವನ್ನು ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಾಸಕ ಪಿ.ರವಿಕುಮಾರ್, ಮಧು ಜಿ.ಮಾದೇಗೌಡ ಇತರರಿದ್ದರು. | Kannada Prabha

ಸಾರಾಂಶ

ಮಧು ಅವರಿಗೆ ತಂದೆಯ ಹೆಸರನ್ನು ಉಳಿಸುವ ಎಲ್ಲ ಯೋಗ್ಯತೆ ಇದೆ. ಕೆ.ಎಂ.ದೊಡ್ಡಿಯನ್ನು ತಾಲೂಕು ಕೇಂದ್ರದಂತೆ ಕಟ್ಟಿ ಬೆಳೆಸಿದ್ದಾರೆ. ಶಿಕ್ಷಣ ಸಂಸ್ಥೆಯನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಬರುತ್ತಾ ತಂದೆಯ ಹಾದಿಯಲ್ಲೇ ಮುನ್ನಡೆದಿದ್ದಾರೆ. ತಂದೆ ಕನಸಿನ ಗಾಂಧಿ ಗ್ರಾಮವನ್ನು ನನಸಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸರಳ ವ್ಯಕ್ತಿತ್ವದೊಂದಿಗೆ ಮಿತ ಭಾಷಿಯಾಗಿರುವ ಮಧು ಜಿ.ಮಾದೇಗೌಡ ಅವರು ವಿವಾದಾತೀತ ವ್ಯಕ್ತಿಯಾಗಿದ್ದಾರೆ. ಅವರ ತಂದೆಯ ಹೆಸರನ್ನು ಉಳಿಸುವ ಅರ್ಹತೆ ಹೊಂದಿದ್ದಾರೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಎ ಅಂಡ್ ಎ ಕನ್ವೆಷನ್ ಹಾಲ್‌ನಲ್ಲಿ ಮಧು ಜಿ.ಮಾದೇಗೌಡರ ಅಭಿಮಾನಿ ಬಳಗದಿಂದ ನಡೆದ ೬೦ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಷಷ್ಟ್ಯಬ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿ.ಮಾದೇಗೌಡರು ವೈಯಕ್ತಿಕ ಹಿತಕ್ಕಾಗಿ ರಾಜಕಾರಣ ಮಾಡಿದವರಲ್ಲ. ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡವರು. ರಾಜಕೀಯ ಕ್ಷೇತ್ರದಲ್ಲಿ ಸಾಹುಕಾರ್ ಚನ್ನಯ್ಯ, ಎಸ್.ಎಂ.ಕೃಷ್ಣ, ಕೆ.ಆರ್.ಪೇಟೆ ಕೃಷ್ಣ, ಎಚ್.ಡಿ.ಚೌಡಯ್ಯ ಅವರಂತೆ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದವರು. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರಕುವಂತೆ ಮಾಡುವಲ್ಲಿ ಮಾದೇಗೌಡರ ಶ್ರಮ ಅನುಕರಣೀಯ ಎಂದರು.

ಮಧು ಅವರಿಗೆ ತಂದೆಯ ಹೆಸರನ್ನು ಉಳಿಸುವ ಎಲ್ಲ ಯೋಗ್ಯತೆ ಇದೆ. ಕೆ.ಎಂ.ದೊಡ್ಡಿಯನ್ನು ತಾಲೂಕು ಕೇಂದ್ರದಂತೆ ಕಟ್ಟಿ ಬೆಳೆಸಿದ್ದಾರೆ. ಶಿಕ್ಷಣ ಸಂಸ್ಥೆಯನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಬರುತ್ತಾ ತಂದೆಯ ಹಾದಿಯಲ್ಲೇ ಮುನ್ನಡೆದಿದ್ದಾರೆ. ತಂದೆ ಕನಸಿನ ಗಾಂಧಿ ಗ್ರಾಮವನ್ನು ನನಸಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದು ನುಡಿದರು.

ಮಾದೇಗೌಡರಿಗೊಸ್ಕರ ನಾನು ಮಧು ಮಾದೇಗೌಡರನ್ನು ಶಾಸಕ ಅಥವಾ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎಂಬ ಉದ್ದೇಶವಿತ್ತು. ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಹಠ ಮಾಡಿದ್ದೆ. ಅದಕ್ಕಿಂತ ಹೆಚ್ಚಾಗಿ ಎಲ್ಲರ ಜೊತೆ ಪ್ರೀತಿ, ವಿಶ್ವಾಸದಿಂದ ಇದ್ದಾರೆ. ಮಧು ಮಾದೇಗೌಡ ಹೆಚ್ಚು ಮಾತನಾಡಲ್ಲ. ಆದರೆ, ಒಳ್ಳೆಯ ಕೆಲಸ ಮಾಡಬೇಕು ಎಂಬ ದೊಡ್ಡತನವಿದೆ. ಮಾದೇಗೌಡರು ರೈತರು, ಕಾವೇರಿ ನೀರಿನ ಪರ ಹೋರಾಟ ಮಾಡುವ ಮೂಲಕ ಎತ್ತರಕ್ಕೆ ಬೆಳೆದಿದ್ದರು. ಅದರಂತೆ ಮಧು ಸಹ ಎತ್ತರಕ್ಕೆ ಬೆಳೆಯಬೇಕು ಎಂದು ಆಶಿಸಿದರು.

ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ಮಾತನಾಡಿ, ಮಧು ಜಿ.ಮಾದೇಗೌಡರಿಗೆ ನಾನು ಯಾವತ್ತೂ ಋಣಿಯಾಗಿರುತ್ತೇನೆ. ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ೪೦ ಮಂದಿ ನನ್ನ ಮೇಲೆ ಕತ್ತಿ ಹಿಡಿದುಕೊಂಡು ನಿಂತಿದ್ದರು. ಆಗ ಮಧು ಮಾದೇಗೌಡರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭಿನ್ನಮತ ಶಮನ ಮಾಡುವಂತೆ ಸೂಚಿಸಿದ್ದರು. ಅದರಂತೆ ಮಧು ಮಾದೇಗೌಡರು ರವಿಕುಮಾರ್ ಗೆದ್ದೆ ಗೆಲ್ಲುತ್ತಾರೆ. ಕಾಂಗ್ರೆಸ್ ಸರ್ಕಾರವೂ ಬರಲಿದೆ ಎಂದು ಎಲ್ಲರ ಭಿನ್ನಮತ ಶಮನಗೊಳಿಸುವ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.

ಮಧು ಅವರು ಶುದ್ಧ ಹಸ್ತರಾಗಿ ರಾಜಕಾರಣ ಮಾಡುತ್ತಿದ್ದಾರೆ. ಎಲ್ಲಿಯೂ ಲಂಚ, ಭ್ರಷ್ಟಾಚಾರ ಇಲ್ಲದೆ, ದಕ್ಷ, ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡುತ್ತಿದ್ದಾರೆ. ಭಾರತೀ ಎಜುಕೇಷನ್ ಟ್ರಸ್ಟ್ ಅನ್ನು ಉತ್ತಮ ರೀತಿಯಲ್ಲಿ ನಡೆಸುತ್ತಿದ್ದಾರೆ. ಅದು ದೇವರ ಕೊಟ್ಟ ಶಕ್ತಿಯಾಗಿದೆ. ನಾನು ಸದಾ ಅವರ ಬೆಂಬಲಕ್ಕೆ ಇರುತ್ತೇನೆ ಎಂದು ಭರವಸೆ ನೀಡಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ಹಾಗೂ ಕೊಮ್ಮೇರಹಳ್ಳಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಹಿತಿ ಡಾ.ಮ.ರಾಮಕೃಷ್ಣ ಅವರು ಜಿ.ಮಾದೇಗೌಡರ ಹಿನ್ನೋಟ ಹಾಗೂ ಮಧು ಜಿ.ಮಾದೇಗೌಡ ಕುರಿತು ಡಾ.ಎಸ್.ಬಿ.ಶಂಕರಗೌಡ ಮುನ್ನೋಟದ ಬಗ್ಗೆ ಮಾತನಾಡಿದರು. ಮಧು ಜಿ.ಮಾದೇಗೌಡ ಅವರ ಜೀವನ ಮತ್ತು ಸಾಧನೆ ಕುರಿತು ಡಾ.ಕೆಂಪಮ್ಮ ಅವರು ರಚಿಸಿದ ‘ಮಕರಂದ’ ಪುಸ್ತಕ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜ್ ಅವರು ಅಭಿನಂದನಾ ನುಡಿಗಳನ್ನಾಡಿದರು. ನಂತರ ಮಧು ಜಿ.ಮಾದೇಗೌಡ ದಂಪತಿಯನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ಮೂಡಾ ಅಧ್ಯಕ್ಷ ನಹೀಮ್ ಸೇರಿದಂತೆ ಮತ್ತಿತರರಿದ್ದರು.

ಗಾಂಧಿ ಗ್ರಾಮದ ನಿರ್ಮಾಣಕ್ಕಾಗಿ ಕೆಲಸ: ಮಧು ಮಾದೇಗೌಡ

ಮಂಡ್ಯ:

ಗಾಂಧೀಜಿಯವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಲು ತಂದೆ ಜಿ.ಮಾದೇಗೌಡರ ಪರಿಕಲ್ಪನೆಯಂತೆ ಗಾಂಧಿ ಗ್ರಾಮ ನಿರ್ಮಾಣ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.

ನಗರದ ಎ ಅಂಡ್ ಎ ಕನ್ವೆಷನ್ ಹಾಲ್‌ನಲ್ಲಿ ಮಧು ಜಿ.ಮಾದೇಗೌಡರ ಅಭಿಮಾನಿ ಬಳಗದಿಂದ ನಡೆದ 60ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಷಷ್ಟ್ಯಬ್ಧಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ರಾಜಕಾರಣಕ್ಕೆ ಯಾಕೆ ಬಂದೆ ಅನಿಸುತ್ತಿದೆ. ಮುಂದಿನ ದಿನಗಳಲ್ಲಿ ಗಾಂಧಿ ಮಾರ್ಗದಲ್ಲಿ ಗಾಂಧಿ ಗ್ರಾಮದ ನಿರ್ಮಾಣಕ್ಕೆ ಪೂರ್ಣ ಶ್ರಮ ಹಾಕುವ ಮೂಲಕ ಗಾಂಧೀಜಿ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂಬ ಆಲೋಚನೆಯಲ್ಲಿದ್ದೇನೆ ಎಂದರು.

ಇಂಥ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳುವುದು ಮುಜುಗರದ ವಿಷಯವಾಗಿದೆ. ಆದರೆ. ನಮ್ಮ ಹಿತೈಷಿಗಳು, ಸ್ನೇಹಿತರು, ಅಭಿಮಾನಿಗಳ ಒತ್ತಡಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾಗಿದೆ. ಅಭಿನಂದನೆ ಸ್ವೀಕರಿಸಲು ನಾನು ಏನು ಮಾಡಿದ್ದೇನೆ ಎಂಬುದು ಗೊತ್ತಿಲ್ಲ. ತಂದೆ ಹಾದಿಯಲ್ಲಿ ನಡೆಯುತ್ತಿದ್ದೇನೆ. ನಾನು ಇದರಲ್ಲಿ ದೊಡ್ಡ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಳ್ಳುವುದಿಲ್ಲ ಎಂದರು.

ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಶಕ್ತಿ ಏನು ಎಂಬುದು ವಿಧಾನ ಪರಿಷತ್ ಚುನಾವಣೆಯಲ್ಲಿ ತಿಳಿಯಿತು. ನಮ್ಮ ವಿದ್ಯಾರ್ಥಿಗಳು ನನ್ನ ಗೆಲುವಿಗೆ ಕಾರಣರಾಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ