ಒಳ ಮೀಸಲಾತಿ ಜಾರಿಗೆ ಮಾದಿಗ ದಂಡೋರ ಸಂಘಟನೆ ಆಗ್ರಹ

KannadaprabhaNewsNetwork |  
Published : Mar 08, 2026, 01:45 AM IST
6ಎಚ್ಎಸ್ಎನ್17 :  | Kannada Prabha

ಸಾರಾಂಶ

ರಾಜ್ಯದಲ್ಲಿ ಖಾಲಿ ಇರುವ ೫೬,೩೪೨ ಸರ್ಕಾರಿ ಹುದ್ದೆಗಳ ಭರ್ತಿಯಲ್ಲಿ ೧೫% ಒಳ ಮೀಸಲಾತಿಯನ್ನು ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಜಾರಿಗೊಳಿಸಲು ಸಂಬಂಧಿತ ಆದೇಶಗಳ ತಕ್ಷಣ ತಿದ್ದುಪಡಿ ಮಾಡಲು ಹಾಗೂ ಶೇಕಡ ೫೬ ಮೀಸಲಾತಿಯನ್ನು ಸಂವಿಧಾನದ ೯ನೇ ಅನುಸೂಚಿಯಲ್ಲಿ ಸೇರಿಸಲು ಮತ್ತು ಬಡ್ತಿ ಮೀಸಲಾತಿಯನ್ನು ಸದನದಲ್ಲಿ ಜಾರಿಗೆ ತರಲು ಆಗ್ರಹಿಸಿ ಮಾದಿಗ ದಂಡೋರ ನೇತೃತ್ವದಲ್ಲಿ ನಗರದ ಹೊರ ವಲಯ ಬೂವನಹಳ್ಳಿ ಹೆದ್ದಾರಿಯನ್ನು ಶುಕ್ರವಾರ ತಡೆದು ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯದಲ್ಲಿ ಖಾಲಿ ಇರುವ ೫೬,೩೪೨ ಸರ್ಕಾರಿ ಹುದ್ದೆಗಳ ಭರ್ತಿಯಲ್ಲಿ ೧೫% ಒಳ ಮೀಸಲಾತಿಯನ್ನು ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಜಾರಿಗೊಳಿಸಲು ಸಂಬಂಧಿತ ಆದೇಶಗಳ ತಕ್ಷಣ ತಿದ್ದುಪಡಿ ಮಾಡಲು ಹಾಗೂ ಶೇಕಡ ೫೬ ಮೀಸಲಾತಿಯನ್ನು ಸಂವಿಧಾನದ ೯ನೇ ಅನುಸೂಚಿಯಲ್ಲಿ ಸೇರಿಸಲು ಮತ್ತು ಬಡ್ತಿ ಮೀಸಲಾತಿಯನ್ನು ಸದನದಲ್ಲಿ ಜಾರಿಗೆ ತರಲು ಆಗ್ರಹಿಸಿ ಮಾದಿಗ ದಂಡೋರ ನೇತೃತ್ವದಲ್ಲಿ ನಗರದ ಹೊರ ವಲಯ ಬೂವನಹಳ್ಳಿ ಹೆದ್ದಾರಿಯನ್ನು ಶುಕ್ರವಾರ ತಡೆದು ಪ್ರತಿಭಟಿಸಿದರು.

ಇದೇ ವೇಳೆ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ. ಆರ್‌. ವಿಜಯಕುಮಾರ್‌ ಮಾಧ್ಯಮದೊಂದಿಗೆ ಮಾತನಾಡಿ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿರುವುದು ಮಾದಿಗ ಸಮುದಾಯದ ೩೫ ವರ್ಷಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ಜಯವಾಗಿದೆ. ಸಂವಿಧಾನದ ವಿಧಿ ೧೫(೪) ಮತ್ತು ೧೬(೪)ಗಳ ಆತ್ಮವನ್ನು ಜೀವಂತವಾಗಿರಿಸುವ ಮಹತ್ವದ ಹೋರಾಟ ಎಂದರು. ಆದರೆ ದಿನಾಂಕ ೨೬.೦೨.೨೦೨೬ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದ ನಂತರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿದ ೨೭.೦೨.೨೦೨೬ರ ಸರ್ಕಾರದ ಆದೇಶವು ವಿವಾದಕ್ಕೆ ಕಾರಣವಾಗಿದೆ. ಈ ಆದೇಶದ ಮೂಲಕ ೨೦೨೨ರ ಪೂರ್ವ ಮೀಸಲಾತಿ ವ್ಯವಸ್ಥೆಯಂತೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸೂಚಿಸಿರುವುದು ಮಾದಿಗ ಸಮುದಾಯದ ದೀರ್ಘಕಾಲದ ಹೋರಾಟಕ್ಕೆ ಗಂಭೀರ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಖಾಲಿ ಇರುವ ೫೬,೩೪೨ ಹುದ್ದೆಗಳ ಭರ್ತಿಯನ್ನು ಒಳ ಮೀಸಲಾತಿಯ ೧೫% ಹಂಚಿಕೆಯನ್ನು ಸ್ಪಷ್ಟವಾಗಿ ಅನ್ವಯಿಸಿ ಮಾತ್ರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಉಪಗುಂಪುಗಳವಾರು ಹಂಚಿಕೆ ಹಾಗೂ ಪರಿಷ್ಕೃತ ರೋಸ್ಟರ್ ವ್ಯವಸ್ಥೆಯನ್ನು ಪ್ರಕಟಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಲ್ಲಿ ನೀಡಿರುವ ಅಂಕಿ-ಅಂಶಗಳ ಆಧಾರದ ಮೇಲೆ ಪರಿಶಿಷ್ಟ ಜಾತಿಗಳನ್ನು ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಉಪವರ್ಗೀಕರಣ ಮಾಡಿ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು. ಇದಲ್ಲದೆ ರಾಜ್ಯದಲ್ಲಿ ಜಾರಿಯಲ್ಲಿರುವ ೫೬% ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನದ ೯ನೇ ಅನುಸೂಚಿಯಲ್ಲಿ ಸೇರಿಸುವ ಕುರಿತು ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಸಂವಿಧಾನ ತಿದ್ದುಪಡಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಇದರಿಂದ ಸಾಮಾಜಿಕ ನ್ಯಾಯದ ನೀತಿಯನ್ನು ನ್ಯಾಯಾಂಗೀಯ ಸವಾಲುಗಳಿಂದ ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಒಟ್ಟು ಮೀಸಲಾತಿ ಪ್ರಮಾಣವನ್ನು ೫೦%ಕ್ಕೆ ಇಳಿಸುವ ಪ್ರಯತ್ನಗಳಿಗೆ ವಿರೋಧ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ೫೬% ಮೀಸಲಾತಿಯನ್ನು ನ್ಯಾಯಾಲಯದ ಮುಂದೆ ಸರ್ಕಾರ ದೃಢವಾಗಿ ಸಮರ್ಥಿಸಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಬಡ್ತಿ ಮೀಸಲಾತಿಯನ್ನು ಕೂಡ ಶೀಘ್ರ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಸರ್ಕಾರ ಹೊರಡಿಸಿರುವ ೨೭.೦೨.೨೦೨೬ರ ಆದೇಶವನ್ನು ತಕ್ಷಣ ಹಿಂಪಡೆದು, ಒಳ ಮೀಸಲಾತಿಯನ್ನು ಸ್ಪಷ್ಟವಾಗಿ ಅನ್ವಯಿಸುವ ತಿದ್ದುಪಡಿ ಆದೇಶ ಹೊರಡಿಸಬೇಕು. ಉಪಗುಂಪುಗಳವಾರು ಹಂಚಿಕೆ ಹಾಗೂ ಪರಿಷ್ಕೃತ ರೋಸ್ಟರ್‌ ವ್ಯವಸ್ಥೆ ಪ್ರಕಟಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

ಈ ಎಲ್ಲ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸದಿದ್ದರೆ ಹಾಸನದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಸೇರಿದಂತೆ ಉಗ್ರ ಹೋರಾಟಗಳನ್ನು ಆರಂಭಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು. ಸಾಮಾಜಿಕ ನ್ಯಾಯವು ಕೇವಲ ಘೋಷಣೆ ಆಗದೆ ಸಂವಿಧಾನಬದ್ಧ ಹಕ್ಕಾಗಿರುವುದರಿಂದ ಅದನ್ನು ಸಂಪೂರ್ಣವಾಗಿ ಜಾರಿಗೊಳಿಸುವುದು ಸರ್ಕಾರದ ಕರ್ತವ್ಯ ಎಂದು ಅವರು ಮನವರಿಕೆ ಮಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಎಚ್.ಪಿ. ಶಂಕರರಾಜು, ಸತೀಶ್, ಕಬ್ಬಳ್ಳಿ ರಾಮಚಂದ್ರ, ಲೋಕೇಶ್ ಕ್ಯಾತನಹಳ್ಳಿ, ಕುಶಾ ಆಲೂರು, ರವೀಶ್ ಬಸವಪುರ, ಎಂ. ಆರ್‌. ವೆಂಕಟೇಶ್, ಗಿರೀಶ್ ದೇಶಾಣಿ, ರಮೇಶ್, ಪರಶುರಾಮು, ಬೈರೇಶ್, ಕುಮಾರಸ್ವಾಮಿ ದೊಡ್ಡಪುರ, ಸುನೀಲ್ ದ್ರಾವಿಡ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.15ರ ಒಳ ಮೀಸಲಾತಿಯನ್ನು ಗ್ರೂಪ್‌ ಎಬಿಸಿ ವರ್ಗಿಕರಣದಂತೆ ಜಾರಿಗೊಳಿಸಿ
ಗೆಜ್ಜಲಗೆರೆ ಗ್ರಾಪಂ ನಗರಸಭೆಗೆ ಕೈ ಬಿಡುವವರೆಗೂ ಚುನಾವಣೆಗಳ ಮತದಾನ ಬಹಿಷ್ಕರಿಸಲು ತೀರ್ಮಾನ