ಹೂವಿನಹಡಗಲಿ: ಸದನದಲ್ಲಿ ಮಾದಿಗರ ಒಳಮೀಸಲಾತಿ ಕುರಿತು ಶಾಸಕರು ಚರ್ಚಿಸಲು ಒತ್ತಾಯಿಸಿ ಮಾದಿಗರ ಒಳ ಮೀಸಲಾತಿ ಹೋರಾಟ ಸಮಿತಿಯು ಶಾಸಕ ಕೃಷ್ಣನಾಯ್ಕ ಮನೆ ಎದುರು ಶನಿವಾರ ತಮಟೆ ಚಳವಳಿ ನಡೆಸಿದರು.
ಸರ್ಕಾರ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಆಯೋಗ ರಚಿಸಿ, 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು, ಸರ್ಕಾರ ಹಸಿಸುಳ್ಳು ಹೇಳುತ್ತಾ ಬಂದಿದೆ. ಈಗ್ಗೆ 45 ದಿನಗಳಾದರೂ ಆಯೋಗ ತನ್ನ ಕೆಲಸ ಆರಂಭಿಸಿಯೇ ಇಲ್ಲ. ಆಯೋಗವನ್ನು ನಾಮಕವಾಸ್ತೆ ಘೋಷಿಸಿರುವುದು ಬಿಟ್ಟರೆ, ಆಯೋಗಕ್ಕೆ ಕಛೇರಿ, ಸಿಬ್ಬಂದಿ, ಹಣಕಾಸಿನ ನೆರವು ಯಾವುದನ್ನೂ ಕೊಟ್ಟಿಲ್ಲ ಎಂದು ಆರೋಪಿಸಿದರು.
ಮುಖಂಡ ಎಚ್.ಪೂಜೆಪ್ಪ, ಜೆ.ಶಿವರಾಜ ಮಾತನಾಡಿ, ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಒಳ ಮೀಸಲಾತಿ ಜಾರಿ ಮಾಡುವುದಾಗಿ ಹಸಿಸುಳ್ಳು ಹೇಳಿದ್ದು, ಇದೇ ಕಾಂಗ್ರೆಸ್ ನಾಯಕರು ಈಗ ಸಚಿವ ಸಂಪುಟ ಸಭೆಯನ್ನು ಯಾವುದೇ ಸಿದ್ಧತೆಯಿಲ್ಲದೆ ನಡೆಸಿ, ಆಮೆ ವೇಗದಲ್ಲಿ ಸಾಗುತ್ತಿರುವುದನ್ನು ನೋಡಿದರೆ ಈ ಸರ್ಕಾರಕ್ಕೆ ಮೀಸಲಾತಿಯಲ್ಲಿ ಅವಕಾಶ ವಂಚಿತ ಅಸ್ಪೃಶ್ಯ ಸಮುದಾಯಗಳಿಗೆ ಒಳ ಮೀಸಲಾತಿ ಒದಗಿಸಲು ಮನಸ್ಸಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ ಎಂದರು.ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದು ಸರ್ಕಾರ ಈ ಕಾಟಾಚಾರದ ಆಯೋಗ ನೇಮಕದ ನಾಟಕವಾಡುತ್ತಿದೆ, ಮಾದಿಗರನ್ನು ಓಟ ಬ್ಯಾಂಕ್ ಮಾಡಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ದುರ್ಗೇಶ ಹೊಳಗುಂದಿ, ಪಿ.ನಿಂಗಪ್ಪ, ಎಸ್.ನಿಂಗರಾಜ, ಗೋಣೇಶ ಮಕರಬ್ಬಿ ಸೇರಿದಂತೆ ಇತರರು ಶಾಸಕರ ಆಪ್ತ ಸಹಾಯಕ ಮಲ್ಲಣ್ಣ ಇವರಿಗೆ ಮನವಿ ಸಲ್ಲಿಸಿದರು.