ಕನ್ನಡಪ್ರಭ ವಾರ್ತೆ, ತುಮಕೂರುತುಳಿತಕ್ಕೊಳಗಾಗಿರುವ ಮಾದಿಗ ಸಮುದಾಯವನ್ನು ಸಂಘಟಿಸಿ, ಶಿಕ್ಷಣ ಜಾಗೃತಿ ಮೂಡಿಸಿ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾಭಿಮಾನದಿಂದ ಬಾಳುವಂತೆ ಅರಿವು ಮೂಡಿಸುವ ಉದ್ದೇಶದಿಂದ ಹಳ್ಳಿಹಳ್ಳಿಗಳಿಗೂ ಹೋಗಿ ಸಮಾಜ ಬಾಂಧವರಿಗೆ ಮಾರ್ಗದರ್ಶನ ಮಾಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಹೇಳಿದರು.ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದೆ. ಒಳಮೀಸಲಾತಿಯಲ್ಲಿ ಲಭಿಸಿರುವ ಶೇಕಡ ೬ರಷ್ಟು ಮೀಸಲಾತಿಯಲ್ಲೂ ಅವಕಾಶ ಪಡೆಯಲಾಗದಷ್ಟು ಹಿಂದೆ ಇದ್ದಾರೆ. ಅವರಲ್ಲಿ ಶಿಕ್ಷಣ ಮಹತ್ವ ತಿಳಿಸಿ ಉನ್ನತ ಶಿಕ್ಷಣ ಪಡೆಯಲು ಪ್ರೇರೇಪಿಸಲಾಗುವುದು. ಪ್ರತಿ ವರ್ಷ ನೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸಭಾದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಮಾರ್ಗದರ್ಶನ ನೀಡುವ ಕಾರ್ಯಕ್ರಮ ಆರಂಭಿಸಲಾಗುವುದು ಎಂದರು.ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಮಾದರ ಮಹಾಸಭಾದ ರಾಜ್ಯಾಧ್ಯಕ್ಷರಾಗಿದ್ದಾರೆ. ಇತ್ತೀಚೆಗೆ ಸಚಿವರು ತುಮಕೂರಿಗೆ ಆಗಮಿಸಿದ್ದಾಗ ಸಮಾಜದ ಮುಖಂಡರು ಸಭೆ ಸೇರಿ ತಮ್ಮನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಅದರಂತೆ ಜಿಲ್ಲಾ ಸಮಿತಿಯನ್ನೂ ರಚಿಸಲಾಗಿದೆ. ಮುಂದೆ ಜಿಲ್ಲಾ ಸಮಿತಿ ಜಿಲ್ಲಾದ್ಯಂತ ಪ್ರವಾಸ ಮಾಡಿ ಸಭಾದ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಿ, ಸಮಾಜಬಾಂಧವರನ್ನು ಸಂಘಟಿಸಲಾಗುವುದು ಎಂದು ಹೇಳಿದರು.ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಮಾದಿಗ ಸಮಾಜ ನಿರೀಕ್ಷಿತವಾಗಿ ಪ್ರಬಲವಾಗಿಲ್ಲ. ನಮ್ಮಲ್ಲಿ ವಿದ್ಯಾವಂತರ ಸಂಖ್ಯೆ ಕಡಿಮೆ ಇದೆ. ಮೊದಲ ಹಂತವಾಗಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಮುಖಂಡರು ತೀರ್ಮಾಸಿದ್ದಾರೆ. ಮಹಾಸಭಾದಿಂದ ಪ್ರತಿ ವರ್ಷ ನೂರು ವಿದ್ಯಾರ್ಥಿಗಳನ್ನು ಆಯ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಪರಿಣತರಿಂದ ತರಬೇತಿ, ಮಾರ್ಗದರ್ಶನ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಶಿಕ್ಷಣ ಒದಗಿಸುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.ಮಾದರ ಮಹಾಸಭಾದ ಪ್ರಧಾನ ಮಹಾಪೋಷಕರು, ಮಾಜಿ ಶಾಸಕ ಗಂಗಹನುಮಯ್ಯ ಮಾತನಾಡಿ, ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಎಲ್ಲಾ ಊರುಗಳಲ್ಲೂ ಪ್ರವಾಸ ಮಾಡಿ ಮಾಹಸಭಾದ ಆಶಯಗಳನ್ನು ತಿಳಿಸಿ ಸದಸ್ಯತ್ವ ಅಭಿಯಾನ ನಡೆಸಿ ಸಂಘಟಿಸಲಾಗುವುದು. ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವುದು, ಅವರಲ್ಲಿ ಶಿಕ್ಷಣದ ಅರಿವು ಮೂಡಿಸುವುದು. ಅಗತ್ಯ ಸಹಕಾರ ನೀಡುವುದು ಮಾಹಾಸಭಾದ ಆಶಯವಾಗಿದೆ ಎಂದರು.