ಕನ್ನಡಪ್ರಭ ವಾರ್ತೆ ದಾವಣಗೆರೆ
ಎಡಗೈ ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6 ಒಳ ಮೀಸಲಾತಿ ಜಾರಿಗೊಂಡಿದ್ದು, ಸಮುದಾಯದ 4 ದಶಕದ ಹೋರಾಟ ಯಶಸ್ವಿಯಾದ ಹಿನ್ನೆಲೆಯಲ್ಲಿ ಸೆ.13ರಂದು ದಾವಣಗೆರೆ ಪಾಲಿಕೆ ಆವರಣದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ರಂಗ ಮಂದಿರದಲ್ಲಿ ಒಳಮೀಸಲಾತಿ ವಿಜಯೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾ ಮುಖಂಡ, ಹಿರಿಯ ವಿಚಾರವಾದಿ, ಲೇಖಕ ಡಾ.ಎಚ್.ವಿಶ್ವನಾಥ ತಿಳಿಸಿದರು.ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 11ಕ್ಕೆ ಮಹಾಸಭಾದಿಂದ ಒಳಮೀಸಲಾತಿ ವಿಜಯೋತ್ಸವದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವರಾದ ಕೆ.ಎಚ್.ಮುನಿಯಪ್ಪ, ಎಸ್.ಎಸ್.ಮಲ್ಲಿಕಾರ್ಜುನ, ಆರ್.ಬಿ.ತಿಮ್ಮಾಪುರ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ಗೋವಿಂದ ಕಾರಜೋಳ, ಎಚ್.ಆಂಜನೇಯ, ಎ.ನಾರಾಯಣಸ್ವಾಮಿ, ಅಲ್ಕೋಡ ಹನುಮಂತಪ್ಪ, ಕೆ.ಎಸ್.ಬಸವಂತಪ್ಪ, ಡಿ.ಜಿ.ಶಾಂತನಗೌಡ, ಬಿ.ದೇವೇಂದ್ರಪ್ಪ, ಬಸವರಾಜ ವಿ.ಶಿವಗಂಗಾ, ಬಿ.ಪಿ.ಹರೀಶ ಅನೇಕರು ಭಾಗವಹಿಸುವರು ಎಂದರು.
ಮಾದಿಗ ಸಮುದಾಯದ 101 ಜಾತಿಗೆ ಒಂದಿಷ್ಟು ಅವಕಾಶ ಸಿಕ್ಕಂತಾಗಿದೆ. ವಿಜಯೋತ್ಸವದಲ್ಲಿ 4 ದಶಕಗಳ ಹೋರಾಟದಲ್ಲಿ ಮಡಿದವರ ಸ್ಮರಣೆ, ಮಾದಿಗ ಸಮುದಾಯದ ಹೋರಾಟಗಾರರಿಗೆ ಗೌರವ ಸಮರ್ಪಿಸಲಾಗುವುದು ಎಂದರು.ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಸರ್ಕಾರವಿದ್ದಾಗಲೂ ಸಮಾಜಕ್ಕೆ ಸ್ಪಂದಿಸಿವೆ. ಕ್ರಾಂತಿಕಾರಕ ಒಳಮೀಸಲಾತಿಗೆ ಈಗಷ್ಟೇ ಕಾಲ ಕೂಡಿ ಬಂದಂತಾಗಿದೆ. ನಾವು ಶೇ.8 ಮೀಸಲಾತಿಗೆ ಬೇಡಿಕೆ ಇಟ್ಟಿದ್ದೆವು. ಕನಿಷ್ಟ ಶೇ.7 ಮೀಸಲಾತಿ ನೀಡಿ ಅಂತಲೂ ಒತ್ತಾಯಿಸಿದ್ದೆವು. ಕಡೆಗೆ ಶೇ.6 ಎಡಗೈ ಸಮುದಾಯ, ಶೇ.6 ಬಲಗೈ ಸಮುದಾಯ ಹಾಗೂ ಶೇ.5ರಷ್ಟನ್ನು ಇತರೆ ಸಮುದಾಯಕ್ಕೆ ಒಳಮೀಸಲಾತಿ ನೀಡಲಾಗಿದೆ. ವಿಜಯೋತ್ಸವದ ನಂತರ ನಮ್ಮ ಮುಂದಿನ ಹೆಜ್ಜೆ, ಸವಾಲುಗಳ ಬಗ್ಗೆ ಗಂಭೀರ ಚರ್ಚೆಯನ್ನು ಮಾಡಲಿದ್ದೇವೆ ಎಂದರು.
ಸಮಾಜದ ಹಿರಿಯ ಮುಖಂಡ ಬಿ.ಎಚ್.ವೀರಭದ್ರಪ್ಪ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದಲೂ ಕನಿಷ್ಠ 1 ಸಾವಿರ ಮಾದಿಗ ಸಮುದಾಯದ ಜನರಿಗೆ ಕಳಿಸಲು ಆಯಾ ಶಾಸಕರು ಕೈಜೋಡಿಸಬೇಕು. ಇದುವರೆಗೂ ಒಗ್ಗರಣೆಯಲ್ಲಿ ಕರಿಬೇವಿನಂತಿದ್ದವರು ನಾವು. ಒಳಮೀಸಲಾತಿಗಾಗಿ ದಶಕಗಳಿಂದ ಹೋರಾಡಿ ಸಣ್ಣಗಾಗಿದ್ದೇವೆ. ಇದೀಗ ಒಳಮೀಸಲಾತಿ ನಮ್ಮ ಸಮುದಾಯಕ್ಕೆ ಒಂದಿಷ್ಟು ಶಕ್ತಿ ತುಂಬಿದೆಯಾದರೂ ರಾಜಕೀಯ ಕ್ಷೇತ್ರದಲ್ಲೂ ಒಳಮೀಸಲಾತಿ, ಅವಕಾಶ ನೀಡಿದಾಗ ಮಾತ್ರ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತದೆ ಎಂದರು.ಸಮಾಜದ ಮುಖಂಡರಾದ ನಿವೃತ್ತ ಎಎಸ್ಪಿ ರವಿನಾರಾಯಣ, ಹೆಗ್ಗೆರೆ ರಂಗಪ್ಪ, ಎಲ್.ಡಿ.ಗೋಣೆಪ್ಪ, ಪೇಪರ್ ಕೆ.ಚಂದ್ರಣ್ಣ, ಎಸ್.ಮಲ್ಲಿಕಾರ್ಜುನ, ಎಚ್.ಮಲ್ಲೇಶ, ಸಿ.ಬಸವರಾಜ, ಎಚ್.ಸಿ.ಗುಡ್ಡಪ್ಪ, ಅಂಜಿನಪ್ಪ ಕಡತಿ, ಬಿ.ದುಗ್ಗಪ್ಪ ಕೆಟಿಜೆ ನಗರ, ಕುಂದುವಾಡ ಮಂಜುನಾಥ, ಕೆ.ಎಸ್.ಗೋವಿಂದರಾಜ, ಎಲ್.ಎಂ.ಎಚ್.ಸಾಗರ್, ರಾಕೇಶ ಗಾಂಧಿ ನಗರ, ಪಂಜು ಪೈಲ್ವಾನ್, ಕಣ್ಣಾಳು ಅಂಜಿನಪ್ಪ, ನಿರಂಜನ್, ರಂಗಸ್ವಾಮಿ, ಅರಸೀಕೆರೆ ಮರಿಯಣ್ಣ, ಚನ್ನಗಿರಿ ಗೋವಿಂದರಾಜ, ಶಾಂತರಾಜ ಹೊನ್ನಾಳಿ, ಹೊನ್ನಾಳಿ ಹಾಲೇಶ, ಪುಣಬಘಟ್ಟ ಮಂಜುನಾಥ, ಚಿದಾನಂದ, ಉಜಯಪ್ರಕಾಶ, ಶಾಮನೂರು ಎಸ್.ಎನ್.ಈಶ್ವರ ಇತರರು ಇದ್ದರು.
ಮುಂದಿನ ದಿನಗಳಲ್ಲಿ ಶೇ.6 ಮೀಸಲಾತಿಯನ್ನು ಹೇಗೆಲ್ಲಾ ಸದ್ಭಳಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ಮಾದಿಗ ಮಹಾಸಭಾ ರಾಜ್ಯವ್ಯಾಪಿ ಅರಿವು ಮೂಡಿಸಲಿದೆ. ಐಎಎಸ್, ಐಪಿಎಸ್, ಉನ್ನತ ಶಿಕ್ಷಣ ಹೀಗೆ ನಮ್ಮ ಮಕ್ಕಳಿಗೂ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವ ಕೆಲಸವನ್ನೂ ಮಾಡಲಿದೆ.ರವಿ ನಾರಾಯಣ, ನಿವೃತ್ತ ಪೊಲೀಸ್ ಅಧೀಕ್ಷಕ.