ಮಡಿಕೇರಿ: ಮಕ್ಕಳಲ್ಲಿ ಅತಿಸಾರ ಭೇದಿ ತಡೆಯುವಿಕೆ ಅಭಿಯಾನ

KannadaprabhaNewsNetwork |  
Published : Jun 21, 2025, 12:49 AM IST
ಚಿತ್ರ : 20ಎಂಡಿಕೆ2 : ಅತಿಸಾರ ಭೇದಿ ತಡೆಯುವಿಕೆ ಅಭಿಯಾನ ನಡೆಯಿತು.  | Kannada Prabha

ಸಾರಾಂಶ

ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಪದೇಪದೆ ಅತಿಸಾರ ಭೇದಿ ಉಂಟಾಗುತ್ತದೆ. ಆದ್ದರಿಂದ ಅತಿಸಾರ ಭೇದಿ ತಡೆಯುವಲ್ಲಿ ಪ್ರತಿಯೊಬ್ಬರಲ್ಲಿಯೂ ಅರಿವು ಅಗತ್ಯ. ಅತಿಸಾರ ಭೇದಿಯ ನಿಯಂತ್ರಣ ಮತ್ತು ತಡೆಯುವಿಕೆ ಕುರಿತು ಸ್ವಚ್ಛತೆ, ಪರಿಸರ ಶುಚಿತ್ವಕ್ಕೆ ಗಮನಹರಿಸಬೇಕು. ಓಆರ್‌ಎಸ್ ಮತ್ತು ಜಿಂಕ್ ಲಭ್ಯತೆ ಕಾಯ್ದುಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.

ಆರೋಗ್ಯ ಶಿಕ್ಷಣ ಮೂಲಕ ಜಾಗೃತಿ ಮೂಡಿಸಿ: ವೆಂಕಟ್ ರಾಜಾ

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಕ್ಕಳಲ್ಲಿ ಉಂಟಾಗುವ ಅತಿಸಾರ ಭೇದಿ ತಡೆಯುವಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ‘ಆರೋಗ್ಯ ಶಿಕ್ಷಣ’ ಮೂಲಕ ಜಿಲ್ಲಾದ್ಯಂತ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅತಿಸಾರ ಭೇದಿ ತಡೆಯುವಿಕೆ ಅಭಿಯಾನ ಕುರಿತು ಮಾಹಿತಿ ಪಡೆದು ಅವರು ಮಾತನಾಡಿದರು.ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಪದೇಪದೆ ಅತಿಸಾರ ಭೇದಿ ಉಂಟಾಗುತ್ತದೆ. ಆದ್ದರಿಂದ ಅತಿಸಾರ ಭೇದಿ ತಡೆಯುವಲ್ಲಿ ಪ್ರತಿಯೊಬ್ಬರಲ್ಲಿಯೂ ಅರಿವು ಅಗತ್ಯ. ಅತಿಸಾರ ಭೇದಿಯ ನಿಯಂತ್ರಣ ಮತ್ತು ತಡೆಯುವಿಕೆ ಕುರಿತು ಸ್ವಚ್ಛತೆ, ಪರಿಸರ ಶುಚಿತ್ವಕ್ಕೆ ಗಮನಹರಿಸಬೇಕು. ಓಆರ್‌ಎಸ್ ಮತ್ತು ಜಿಂಕ್ ಲಭ್ಯತೆ ಕಾಯ್ದುಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಅತಿಸಾರ ಭೇದಿ ತಡೆಗಟ್ಟುವಿಕೆ ಅಭಿಯಾನವು ಈಗಾಗಲೇ ಆರಂಭವಾಗಿದ್ದು, ಜುಲೈ 31ರ ವರೆಗೆ ಸಮುದಾಯ ಮತ್ತು ಗ್ರಾಮೀಣ ಮಟ್ಟದಲ್ಲಿ ಜರುಗಲಿದೆ ಎಂದು ತಿಳಿಸಿದರು.ಅತಿಸಾರ ಭೇದಿ ತಡೆಯುವಿಕೆ ಅಭಿಯಾನದಡಿ ಸಮುದಾಯ ಮತ್ತು ಗ್ರಾಮ ಮಟ್ಟದಲ್ಲಿ ಓಆರ್‌ಎಸ್ ಹಂಚುವುದು ಮತ್ತು ಅದನ್ನು ತಯಾರಿಸುವ ವಿಧಾನ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೈ ತೊಳೆಯುವ ವಿಧಾನ ಕುರಿತು ಶಾಲೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ನಗರ ಪ್ರದೇಶದಲ್ಲಿ ಸಂಚಾರಿ ಆರೋಗ್ಯ ತಂಡ ಮೂಲಕ ಜಾಗೃತಿ ಆಯೋಜಿಸಲಾಗುತ್ತದೆ ಎಂದರು. ಆರೋಗ್ಯ ಕೇಂದ್ರ ಮಟ್ಟದಲ್ಲಿ ಓಆರ್‌ಎಸ್ ಮತ್ತು ಜಿಂಕ್ ಕೇಂದ್ರ ಆರಂಭಿಸಲಾಗುತ್ತದೆ. ಅತಿಸಾರ ಭೇದಿಯ ಪ್ರಕರಣ ನಿಗದಿತ ಮಾರ್ಗಸೂಚಿಯ ಪ್ರಕಾರ ಚಿಕಿತ್ಸೆ ನೀಡಲಾಗುತ್ತದೆ. ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ನೀರಿನ ಟ್ಯಾಂಕ್‌ಗಳನ್ನು ಶುಚಿಗೊಳಿಸುವುದು ಅತೀ ಮುಖ್ಯವಾಗಿದೆ ಎಂದು ಡಾ.ಸತೀಶ್ ಕುಮಾರ್ ವಿವರಿಸಿದರು.ಅತಿಸಾರ ಭೇದಿ ತಡೆಗಟ್ಟುವಿಕೆ ಅಭಿಯಾನದಡಿ ಸ್ವಚ್ಛತೆ ಇಲ್ಲದ ಪ್ರದೇಶಗಳಿಗೆ ಭೇಟಿ ನೀಡಿ ಅರಿವು ಮೂಡಿಸುವುದು, ಅಲೆಮಾರಿ ಜನರು ಹಾಗೂ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವ ಜನರಿಗೆ ಅರಿವು ಮೂಡಿಸಲಾಗುತ್ತದೆ ಎಂದರು.* ಶಾಲೆಗಳಲ್ಲಿ ಜಾಗೃತಿ

ಕೈತೊಳೆಯುವ ವೈಜ್ಞಾನಿಕ ವಿಧಾನವನ್ನು ಶಾಲಾ ಮಕ್ಕಳಿಗೆ ತಿಳಿಸುವಲ್ಲಿ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತದೆ. ಭಿತ್ತಿಪತ್ರ ಹಾಗೂ ಗೋಡೆ ಬರಹಗಳ ಮೂಲಕ ಅರಿವು ಮೂಡಿಸುವುದು, ಶಾಲೆಗಳಲ್ಲಿ ಬೆಳಗ್ಗಿನ ಪ್ರಾರ್ಥನೆಯ ನಂತರ ಕೈತೊಳೆಯುವ ಮಹತ್ವ ಮತ್ತು ಲಾಭ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್‌ ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಮಾತನಾಡಿ, ಶಿಕ್ಷಣ ಬಗ್ಗೆ ವಸ್ತು ಪ್ರದರ್ಶನ ಏರ್ಪಡಿಸುವುದು, ತಾಯಂದಿರೊಂದಿಗೆ ಸಮಾಲೋಚನೆ ಮತ್ತು ಪ್ರಾತ್ಯಕ್ಷಿಕೆ ಮಾಡುವುದು. ಓಆರ್‌ಎಸ್ ದ್ರಾವಣ ತಯಾರಿಕೆ ಮತ್ತು ಜಿಂಕ್ ಮಾತ್ರೆ ಬಳಕೆ, ಸ್ತನ್ಯಪಾನ ಸೇರಿದಂತೆ ಮುಂದುವರಿದ ಆಹಾರವನ್ನು ಉತ್ತೇಜಿಸುವ ಸಂಬಂಧ ಅಂಗನವಾಡಿಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ರಂಗಧಾಮಪ್ಪ ಮಾತನಾಡಿ, ಅತಿಸಾರ ಭೇದಿ ತಡೆಯುವ ಸಂಬಂಧ ಶಾಲಾ ಮಕ್ಕಳಲ್ಲಿ ಜಾಥಾ ಏರ್ಪಡಿಸಿ ಅರಿವು ಮೂಡಿಸಲಾಗುತ್ತದೆ. ಶೌಚಾಲಯಗಳ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.ಪೌರಾಯುಕ್ತ ಎಚ್.ಆರ್.ರಮೇಶ್ ಮಾಹಿತಿ ನೀಡಿದರು. ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ ಮಾತನಾಡಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶರತ್ ಕುಮಾರ್, ತಾಲೂಕು ವೈದ್ಯಾಧಿಕಾರಿಗಳಾದ ಡಾ.ಚೇತನ್ (ಮಡಿಕೇರಿ), ಡಾ.ಯತಿರಾಜು (ವಿರಾಜಪೇಟೆ), ಡಾ.ಇಂದೂಧರ(ಸೋಮವಾರಪೇಟೆ), ಇಂಡಿಯನ್ ಮೆಡಿಕಲ್ ಅಸೋಷಿಯೇಷನ್‌ನ ಪ್ರತಿನಿಧಿ ಡಾ.ಶ್ಯಾಮ್ ಅಪ್ಪಣ್ಣ, ಪರಿಸರ ಅಧಿಕಾರಿ ರಘುರಾಮ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ