ಮಡಿಕೇರಿ: ಮಾವು, ಹಲಸು ಮೇಳಕ್ಕೆ ಜಿಲ್ಲಾಧಿಕಾರಿ ಚಾಲನೆ

KannadaprabhaNewsNetwork | Published : May 23, 2025 11:46 PM
ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆಯಾದ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಸಂಸ್ಥೆ ವತಿಯಿಂದ ನಗರದ ಅಂಚೆ ಕಚೇರಿಯ ಎದುರು ಇರುವ ಹೈಟೆಕ್ ಮಾರಾಟ ಮಳಿಗೆಯ ಆವರಣದಲ್ಲಿ ‘ಮಾವು ಮತ್ತು ಹಲಸು ಮೇಳ’ ನಡೆಯಿತು.
Follow Us

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಹಾಪ್‌ಕಾಮ್ಸ್ ವತಿಯಿಂದ ಮೇ 26ರ ವರೆಗೆ ನಗರದ ಹಾಪ್ ಕಾಮ್ಸ್ ಆವರಣದಲ್ಲಿ ಮಾವು ಮತ್ತು ಹಲಸು ಮೇಳ ನಡೆಯಲಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆಯಾದ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಸಂಸ್ಥೆ ವತಿಯಿಂದ ನಗರದ ಅಂಚೆ ಕಚೇರಿಯ ಎದುರು ಇರುವ ಹೈಟೆಕ್ ಮಾರಾಟ ಮಳಿಗೆಯ ಆವರಣದಲ್ಲಿ ‘ಮಾವು ಮತ್ತು ಹಲಸು ಮೇಳ’ಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಮಾವು ಮತ್ತು ಹಲಸು ಮೇಳದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಜನರು ಬರುತ್ತಾರೆ. ಮಾವು ಮತ್ತು ಹಲಸು ಮೇಳವನ್ನು ಈ ವರ್ಷವೂ ನಾಲ್ಕು ದಿನಗಳವರೆಗೆ ಏರ್ಪಡಿಸಲಾಗಿದೆ. ಮಾವಿನ ಹಣ್ಣುಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚು ಇರುತ್ತದೆ ಹಾಗೂ ತೋಟಗಾರಿಕೆ ಇಲಾಖೆ ಮತ್ತು ಹಾಪ್ ಕಾಮ್ಸ್ ವತಿಯಿಂದ ಈ ಮೇಳ ನಡೆಯುತ್ತಿದೆ. ಕೊಡಗಿನಲ್ಲಿ ಮಾವಿನ ಮೇಳ ಆಯೋಜಿಸಿರುವುದರಿಂದ ಜನರಿಗೆ ಬೇರೆ ಬೇರೆ ರೀತಿಯ ಮಾವಿನ ಹಣ್ಣುಗಳು ಸಿಗಲು ಸಾಧ್ಯವಾಗುತ್ತದೆ ಎಂದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್.ಯೋಗೇಶ್ ಮಾತನಾಡಿ, ನೈಸರ್ಗಿಕವಾಗಿ ಮಾಗಿಸಿದ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಮಾವು ಮೇಳದ ಉದ್ದೇಶವಾಗಿದೆ ಎಂದು ತಿಳಿಸಿದರು. ಮಾವು ಮೇಳದಲ್ಲಿ ಮಲಗೋವಾ, ಸಿಂಧೂರಿ, ರಸಪೂರಿ, ತೋತಾಪುರಿ, ಬಾದಾಮಿ, ಮಲ್ಲಿಕಾ, ದಸೇರಿ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿ ರೈತರಿಂದ ಗ್ರಾಹಕರಿಗೆ ಯೋಗ್ಯ ಬೆಲೆಗೆ ನೇರ ಮಾರಾಟ ಮಾಡಲಾಗುತ್ತದೆ ಎಂದು ಹೇಳಿದರು.

ಕೊಡಗು ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷ ಮಲ್ಲಂಡ ಮಧುದೇವಯ್ಯ, ನಿರ್ದೇಶಕ ನಾಗೇಶ್ ಕುಂದಲ್ಪಾಡಿ, ಬಿ.ಎ.ಹರೀಶ್, ಎಸ್.ಪಿ.ಪೊನ್ನಪ್ಪ, ಬೇಬಿ ಪೂವಯ್ಯ, ಎಂ.ಮನೋಹರ್, ಸುವಿನ್ ಗಣಪತಿ, ಉಮೇಶ್‌ರಾಜ ಅರಸ್, ಸುಧೀರ್, ಹಾಪ್‌ಕಾಮ್ಸ್ ಸಿಇಒ ರೇಷ್ಮ ಗಿರೀಶ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮುತ್ತಪ್ಪ ಇತರರು ಇದ್ದರು.